ಪಣಜಿ(ವಾಸ್ಕೊ): ಕರ್ನಾಟಕ ರಕ್ಷಣಾ ವೇದಿಕೆ ಗೋವಾ ಕನ್ನಡಿಗರ ಪರವಾಗಿ ನಿಲ್ಲಲು ಸದಾ ಸಿದ್ಧವಿದೆ. ಗೋವಾ ಕನ್ನಡಿಗರ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ನಾವು ಸದಾ ಪ್ರಯತ್ನ ನಡೆಸುತ್ತಿದ್ದೇವೆ. ಗೋವಾದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಕನ್ನಡಿಗರು ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕರ್ನಾಟಕ ರಾಜ್ಯಾಧ್ಯಕ್ಷ ಪ್ರವೀಣ್‍ಕುಮಾರ್ ಶೆಟ್ಟಿ ನುಡಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಗೋವಾ ಇವರ ಸಂಯುಕ್ತ ಆಶ್ರಯದಲ್ಲಿ ಗೋವಾದ ವಾಸ್ಕೊದಲ್ಲಿ ಆಯೋಜಿಸಿದ್ದ “ಹೊರನಾಡು ಗೋವಾ ಕನ್ನಡ ರಾಜ್ಯೋತ್ಸವ” ಕಾರ್ಯಕ್ರಮದ ಉಧ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಕಳೆದ ಅನೇಕ ವರ್ಷಗಳಿಂದ ಗೋವಾದಲ್ಲಿ ಲಕ್ಷಾಂತರ ಕನ್ನಡಿಗರು ನೆಲೆಸಿದ್ಸಾರೆ. ಹೊರನಾಡು ಗೋವಾದಲ್ಲಿ ಕನ್ನಡ ಭಾಷೆ, ಸಂಸ್ಕøತಿ ಕಂಪನ್ನು ಹರಡುವ ಕೆಲಸವನ್ನು ಇಲ್ಲಿನ ಕನ್ನಡಿಗರು ಮಾಡುತ್ತಿದ್ದಾರೆ. ಇದೇ ರೀತಿ ವಿಜ್ರಂಭಣೆಯಿಂದ ಇಲ್ಲಿ ರಾಜ್ಯೋತ್ಸವ ಆಚರಿಸುವಂತಾಗಬೇಕು. ಗೋವಾ ಕನ್ನಡಿಗರ ಪರವಾನಗಿ ನಾವಿದ್ದೇವೆ ಎಂದರು.
ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶಾಸಕ ದಾಜಿ ಸಾಲಕರ್ ಮಾತನಾಡಿ, ಗೋವಾದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಂಘಟಕರು ಕಳೆದ ಸುಮಾರು ಒಂದು ತಿಂಗಳಿಂದ ಹೆಚ್ಚು ಪರಿಶೃಮ ವಹಿಸಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಗೋವಾದಲ್ಲಿ ಲಕ್ಷಾಂತರ ಕನ್ನಡಿಗರು ನೆಲೆಸಿದ್ದಾರೆ. ಗೋವಾ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಕನ್ನಡಿಗರ ಬಹುಮುಖ್ಯ ಪಾತ್ರವಿದೆ. ಕರ್ನಾಟಕದಲ್ಲಿ ಕೊಣಕಣಿ ಅಕಾಡಮಿಗೆ ಕರ್ನಾಟಕ ಸರ್ಕಾರ 5 ಕೋಟಿ ರೂ ನೀಡಿದೆ. ಹಾಗೆಯೇ ಒಂದಕ್ಕೊಂದು ರಾಜ್ಯ ಭಾಷಾ ಸಾಮರಸ್ಯ ಹೊಂದಿರಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಶಾಸಕ ಸಂಕಲ್ಪ ಅಮೋಣಕರ್ ಮಾತನಾಡಿ- ನಾನು ಪ್ರಸಕ್ತ ಚುನಾವಣೆಯಲ್ಲಿ ಆಯ್ಕೆಯಾಗಲು ಇಲ್ಲಿ ಕನ್ನಡಿಗರು ಹೆಚ್ಚಿನ ಬೆಂಬಲ ನೀಡಿದ್ದಾರೆ. ಇದರಿಂದಾಗಿ ನಾನು ಬಹುಮತದಿಂದ ಆಯ್ಕೆಯಾಗಲು ಸಾಧ್ಯವಾಯಿತು. ಇದರಿಂದಾಗಿ ನಾನು ಇಂದು ಶಾಸಕನಾನಿ ನಿಮ್ಮ ಮುಂದೆ ನಿಂತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ, ಕರ್ನಾಟಕ ರಕ್ಷಣಾ ವೇದಿಕೆಯ ಗೋವಾ ರಾಜ್ಯಾಧ್ಯಕ್ಷ ಮಂಜುನಾಥ ನಾಟೀಕರ್, ಕ.ಸಾ.ಪ ದಕ್ಷಿಣ ಗೋವಾ ಜಿಲ್ಲಾ ಘಟಕದ ಅಧ್ಯಕ್ಷ ಪರಶುರಾಮ ಕಲಿವಾಳ, ಗೌರವಾಧ್ಯಕ್ಷ ಪಡದಯ್ಯಸ್ವಾಮಿ ಹಿರೇಮಠ, ಕರ್ನಾಟಕ ರಕ್ಷಣಾ ವೇದಿಕೆ ಗೋವಾ ರಾಜ್ಯ ಘಟಕದ ಪದಾಧಿಕಾರಿಗಳು, ಜಿಎಸ್‍ಐಡಿಸಿ ಉಪಾಧ್ಯಕ್ಷ ದೀಪಕ್ ನಾಯ್ಕ, ನಗರಸಭಾ ಉಪಾಧ್ಯಕ್ಷ ಅಮೇಯ ಚೋಪಡೇಕರ್, ಕರ್ನಾಟಕ ರಕ್ಷಣಾ ವೇದಿಕೆ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಲೋಕೇಶ, ರಾಜ್ಯ ಉಪಾಧ್ಯಕ್ಷ ಶಿವರಾಮೆಗೌಡ, ಕರ್ನಾಟಕ ರಾಜ್ಯ ಸಂಚಾಲಕ ಮಂಜಯ್ಯ, ಮತ್ತಿತರರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಗೋವಾದ ವಿವಿಧ ಕನ್ನಡ ಶಾಲಾ ಮಕ್ಕಳ ನೃತ್ಯ ಸ್ಫರ್ಧೆ ಆಯೋಜಿಸಲಾಗಿತ್ತು. ಈ ಸ್ಫರ್ಧೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಜೆಟ್ಟಿ ವಿದ್ಯಾರ್ಥಿಗಳು ಸ್ಫರ್ಧೆಯಲ್ಲಿ ಪ್ರಥಮಸ್ಥಾನ ಪಡೆದುಕೊಂಡರು. ರಾಜ್ಯ ಉಪಾಧ್ಯಕ್ಷ ಮಾಂತೇಶ ಕಾರಿಗೇರಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು , ಶೀಲಾ ಮೇಸ್ತ ಕಾರ್ಯಕ್ರಮ ನಿರೂಪಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಕಾರ್ಯದರ್ಶಿ ಶಿವಾನಂದ ಮಶಿಮಿನಾಳ ವಂದನಾರ್ಪಣೆಗೈದರು.