Advertisement
ನಿಯಮ ಅರ್ಥ ಮಾಡಿಕೊಳ್ಳದ ಅಧಿಕಾರಿಗಳು:ಶಿಕ್ಷಣ ಇಲಾಖೆ ರೂಪಿಸಿದ ವರ್ಗಾವಣೆ ನೀತಿಯನ್ನೇ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಅರ್ಥ ಮಾಡಿಕೊಂಡಿಲ್ಲ. ವರ್ಗಾವಣೆ ಅಧಿ ನಿಯಮಗಳನ್ನು ಸ್ಪಷ್ಟವಾಗಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಪಾಲಿಸಿಲ್ಲ. ಪದವೀಧರ ಶಿಕ್ಷಕರ ಪಟ್ಟಿ ತಯಾರಿಸಿಲ್ಲ. ಪದವಿ ಮುಗಿಸಿದ ಶಿಕ್ಷಕಿಯರು ಪಟ್ಟಣದ ಶಾಲೆಗಳಲ್ಲಿ ಹಾಗೂ ಹಿಪ್ರಾ ಶಾಲೆಯಲ್ಲಿ ಕಲಿಸಬಾರದು ಎಂಬ ನೀತಿ ಎಲ್ಲಿದೆ? ಪದವೀಧರರನ್ನು ವಿಜ್ಞಾನ ಕಲಿಸಲು ನಿಯೋಜಿಸಬೇಡಿ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆಯೇ? ವಿಜ್ಞಾನ ಪದವಿ ಹುದ್ದೆಗಳಿಗೆ ಕಲಾ ಶಿಕ್ಷಕರನ್ನು ನಿಯೋಜಿಸಬೇಡಿ ಎಂಬ ಸ್ಪಷ್ಟ ಆದೇಶ ಇಲ್ಲದಿರುವುದನ್ನೇ ಆಯುಧವಾಗಿ ಬಳಸಿರುವ ಡಿಡಿಪಿಐ ಮತ್ತು ಬಿಇಓಗಳು ತಮ್ಮ ಅಧೀನ ಸಿಬ್ಬಂದಿಗಳಿಂದ ಹಿಪ್ರಾ ಶಾಲೆಗಳ ಖಾಲಿ ಹುದ್ದೆಗಳನ್ನು ಮುಚ್ಚಿಟ್ಟಿದ್ದಾರೆ. ಆ ಖಾಲಿ ಹುದ್ದೆಗಳಿಗೆ ಸರ್ಕಾರ ತಕ್ಷಣ ಬದಲಿ ವ್ಯವಸ್ಥೆ ಮಾಡಲಿದೆಯೇ? ಜಿಲ್ಲೆಯಲ್ಲಿ 150 ಪದವೀಧರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅವುಗಳನ್ನು ತಕ್ಷಣ ಪೂರ್ಣ ಪ್ರಮಾಣದಲ್ಲಿ ತುಂಬುತ್ತೇವೆ ಎಂದು ಶಿಕ್ಷಣ ಸಚಿವರು ಮತ್ತು ಸರ್ಕಾರ ಡಿಡಿಪಿಐ ಅವರಿಗೆ ಮಾತು ಕೊಟ್ಟಿದೆಯೇ? ಇಷ್ಟು ದಿನ ವಿಜ್ಞಾನ ವಿಷಯವನ್ನು ಕನ್ನಡ ಹಾಗೂ ಕಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡಿಲ್ಲವೇ ಎಂದು ಶಿಕ್ಷೆ ಅನುಭವಿಸಿರುವ ಶಿಕ್ಷಕರು ಪ್ರಶ್ನಿಸುತ್ತಿದ್ದಾರೆ.
Related Articles
Advertisement
ಶಿಕ್ಷಣ ಇಲಾಖೆ ಅಧಿಕಾರಿಗಳೇ ಕುರುಡಾದರೆ ಏನು ಮಾಡುವುದು. ಈಗ ಉಳಿದಿರುವ ದಾರಿ ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದು ಇಲ್ಲವೇ ಕಾನೂನು ಹೋರಾಟ ಮಾಡುವುದು ಎಂಬ ವಿಷಾದ ಅವರ ಮಾತಿನಲ್ಲಿ ಇತ್ತು. ವಿಜ್ಞಾನ ಪದವೀಧರರನ್ನು ಸರ್ಕಾರ ಇನ್ನು ಭರ್ತಿ ಮಾಡಿಲ್ಲ. ಆ ಹುದ್ದೆಗಳನ್ನು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇರುವ ಖಾಲಿ ಹುದ್ದೆಗಳನ್ನು ಹೆಚ್ಚುವರಿ ವರ್ಗಾವಣೆಯ ವೇಳೆ ಮುಚ್ಚಿಟ್ಟಿದ್ದೇಕೆ ಎಂಬ ದೊಡ್ಡ ಸಂದೇಹ ಶಿಕ್ಷಕ ವಲಯದಲ್ಲಿದೆ. ಈ ಪ್ರಶ್ನೆಗೆ ಯಾವ ಅಧಿಕಾರಿಯೂ ಉತ್ತರಿಸುತ್ತಿಲ್ಲ. ಇದನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಗಮನಿಸಬೇಕಿದೆ. ಪಕ್ಕದ ಜಿಲ್ಲೆಯ ವರ್ಗಾವಣೆ ನೀತಿ ಉತ್ತರ ಕನ್ನಡಕ್ಕೆ ಯಾಕೆ ಅನ್ವಯವಾಗುವುದಿಲ್ಲ ಎಂಬ ಪ್ರಶ್ನೆಯನ್ನು ಹೆಚ್ಚುವರಿ ಶಿಕ್ಷಕರು ಕೇಳುತ್ತಿದ್ದಾರೆ.
ಶಿಕ್ಷಕರ ಸಂಘಗಳು ಮೌನ: ಶಿಕ್ಷಕರ ಸಂಘದಲ್ಲಿ ಇರುವ ಪದಾಧಿಕಾರಿಗಳನ್ನು ಹೆಚ್ಚುವರಿ ಅಥವಾ ವರ್ಗಾವಣೆಗೆ ಪರಿಗಣಿಸಬಾರದು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಂಘದ ಮಧ್ಯೆ ಅಲಿಖಿತ ಒಪ್ಪಂದ ಇರುವ ಕಾರಣ ಅವರು ವರ್ಗಾವಣೆ ಭೀತಿಯಿಂದ ಬಚಾವ್ ಆಗಿದ್ದಾರೆ. ಶಿಕ್ಷಕರ ನೋವುಗಳಿಗೆ ಅವರದು ಸಾಂತ್ವನದ ಮಾತು ಮಾತ್ರ. ಪದವೀಧರ ಶಿಕ್ಷಕರಿಗೆ ನಗರ ಭಾಗದ ಖಾಲಿ ಹುದ್ದೆಗಳನ್ನು ಕೊಡಿಸಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಹಿರಿಯ ಪ್ರಾಥಮಿಕ ಶಾಲೆಗಳ ಖಾಲಿ ಹುದ್ದೆಗಳಿಗೆ ಗ್ರಾಮೀಣ ಭಾಗದ ಹೆಚ್ಚುವರಿ ಶಿಕ್ಷಕರನ್ನು ತರಲು ಸಂಘದವರು ಪ್ರಯತ್ನಿಸಲಿಲ್ಲ ಎಂಬುದು ನೊಂದ ಶಿಕ್ಷಕಿಯರ ನೇರ ಆರೋಪ.