Advertisement

ಕರಾವಳಿಗೂ ವ್ಯಾಪಿಸಿತು ಮರಳು ದಂಧೆ ಉಪಟಳ

03:45 AM Apr 04, 2017 | |

ಬೆಂಗಳೂರು: ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಣೆ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಸರ್ಕಾರ ಪದೇಪದೆ ಹೇಳುತ್ತಿದ್ದರೂ ಅಕ್ರಮ ಮರಳು ದಂಧೆಗೆ ಸ್ವಲ್ಪವೂ ಕಡಿವಾಣ ಬಿದ್ದಿಲ್ಲ. ಆದರೆ, ಅಂತಹ ಅಕ್ರಮ ತಡೆಯಲು ಹೋದ ದಕ್ಷ ಅಧಿಕಾರಿಗಳ ಮೇಲೆ ಹಲ್ಲೆ, ಕೊಲೆಯತ್ನ ಪ್ರಕರಣಗಳು ಮಾತ್ರ ಹೆಚ್ಚುತ್ತಲೇ ಇದೆ.

Advertisement

ರಾಜ್ಯದ ಹಳೇ ಮೈಸೂರು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆ ತಡೆಯಲು ಮುಂದಾದ ಅಧಿಕಾರಿಗಳ ಮೇಲೆ ಹಲ್ಲೆ ಮತ್ತು ಕೊಲೆಯತ್ನ ನಡೆಸಿದ ಪ್ರಕರಣಗಳು ಇದೀಗ ಕರಾವಳಿಗೂ ವ್ಯಾಪಿಸಿದ್ದು, ಭಾನುವಾರ ತಡರಾತ್ರಿ ಕುಂದಾಪುರ ತಾಲೂಕಿನಲ್ಲಿ ಅಕ್ರಮ ಮರಳು ದಂಧೆ ತಡೆಯಲು ಹೋದ ಉಡುಪಿ ಡಿಸಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಕುಂದಾಪುರ ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್‌ ಮತ್ತಿತರರ ಮೇಲೆ ಮರಳು ಮಾμಯಾ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿರುವುದು ಇದಕ್ಕೆ ಸಾಕ್ಷಿ. 

ಕಳೆದ 3 ವರ್ಷಗಳಲ್ಲಿ ಮರಳು ದಂಧೆ ತಡೆಯಲು ಮುಂದಾದ ಅಧಿಕಾರಿಗಳ ಮೇಲೆ ಹಲ್ಲೆ ಮತ್ತು ಕೊಲೆಯತ್ನ ನಡೆದಿರುವ 35ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ. ವಿಚಿತ್ರವೆಂದರೆ, ಹಲ್ಲೆ ನಡೆಸಿದವರು ಜೈಲಿನಿಂದ ಬಿಡುಗಡೆಯಾಗಿ ಮತ್ತೆ ದಂಧೆ ಮುಂದುವರಿಸಿದ್ದರೆ, ಪ್ರಾಣ ಬೆದರಿಕೆಯಿಂದಾಗಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗದೆ ಮೌನಕ್ಕೆ ಶರಣಾಗಬೇಕಾದ ಪರಿಸ್ಥಿತಿ ಬಂದಿದೆ.

ಹೇಳಿಕೆಗಷ್ಟೇ ಸೀಮಿತ: ಅಕ್ರಮ ಮರಳು ದಂಧೆಯಲ್ಲಿ ಶಾಮೀಲಾಗುವ ಪೊಲೀಸರೂ ಸೇರಿ ಅಧಿಕಾರಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಪದೇಪದೆ ಹೇಳುತ್ತಿದ್ದಾರೆ. ಅಲ್ಲದೆ, ಅಕ್ರಮವಾಗಿ ಮರಳು ಗಣಿಗಾರಿಕೆ ಮತ್ತು ಸಾಗಣೆ ಮಾಡುವವರ ವಿರುದ್ಧ  ಗೂಂಡಾ ಕಾಯ್ದೆ ಜಾರಿಗೊಳಿಸಲು ಕೂಡ ಸರ್ಕಾರ ನಿರ್ಧರಿಸಿದೆ.

ಆದರೆ, ದಂಧೆಕೋರರ ವಿರುದ್ಧ  ಗೂಂಡಾ ಕಾಯ್ದೆ ಜಾರಿಗೊಳಿಸುವುದು ಒತ್ತಟ್ಟಿಗಿರಲಿ, ದಂಧೆ ವಿರುದಟಛಿ ಕ್ರಮ ಕೈಗೊಳ್ಳಲು ಮುಂದಾಗುವ ಅಧಿಕಾರಿಗಳ ಮೇಲೆ ಹಲ್ಲೆ, ಕೊಲೆ ಯತ್ನ ನಡೆಯುತ್ತಿದ್ದು, ಅದನ್ನು ತಡೆಗಟ್ಟುವುದು ಕೂಡ ಸರ್ಕಾರದಿಂದ ಸಾಧ್ಯವಾಗಿಲ್ಲ. ಬದಲಾಗಿ ಆರೋಪಿಗಳಿಗೆ ರಕ್ಷಣೆ ನೀಡುವ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಕಾರಣ, ಅಕ್ರಮ ಮರಳು ದಂಧೆಯಲ್ಲಿ ನಿರತರಾಗಿರುವವರು ಬಹುತೇಕ ರಾಜಕೀಯ ಪಕ್ಷಗಳ ಮುಖಂಡರು.

Advertisement

ರಾಜ್ಯದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆಯೆಂದು ಎಲ್ಲರೂ ಆರೋಪಿಸುತ್ತಾರೆ. ಆದರೆ, ದಂಧೆಕೋರರು ನಮ್ಮ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದರೂ ಅಧಿಕಾರದಲ್ಲಿರುವವರು ಅಂಥವರನ್ನು ರಕ್ಷಿಸುವ ಕೆಲಸ ಮಾಡುತ್ತಾರೆಯೇ ಹೊರತು ನಮ್ಮ ರಕ್ಷಣೆಗೆ ಮುಂದಾಗುತ್ತಿಲ್ಲ.

ಹೀಗಿರುವಾಗ ನಾವು ಹೇಗೆ ಅಕ್ರಮದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಸಾಧ್ಯ ಎನ್ನುತ್ತಾರೆ ಅಧಿಕಾರಿಗಳು.

ಅರ್ಧದಷ್ಟು ಪ್ರಕರಣಗಳೂ ದಾಖಲಾಗುತ್ತಿಲ್ಲ
ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೂಲಗಳ ಪ್ರಕಾರ ರಾಜ್ಯದಲ್ಲಿ 2010ರಿಂದ ಇದುವರೆಗೆ ಅಕ್ರಮ ಮರಳು ದಂಧೆಗೆ ಸಂಬಂಧಿಸಿದಂತೆ 40 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಆದರೆ, ದಾಖಲಾದ ಪ್ರಕರಣಗಳು 20 ಸಾವಿರವನ್ನೂ ತಲುಪಿಲ್ಲ. ಅದರಲ್ಲೂ ಕಳೆದ 3 ವರ್ಷದಲ್ಲಿ ಈ ದಂಧೆ ವ್ಯಾಪಕವಾಗುತ್ತಿದೆ.

ಇದಕ್ಕೆ ರಾಜಕಾರಣಿಗಳ ಶ್ರೀರಕ್ಷೆ ಇರುವುದರಿಂದ ದಂಧೆಕೋರರು ತಮ್ಮನ್ನು ತಡೆಯಲು ಬಂದ ಅಧಿಕಾರಿಗಳ ಮೇಲೆಯೇ ಹಲ್ಲೆ ನಡೆಸುವುದು, ಲಾರಿ ಹರಿಸಿ ಹತ್ಯೆಗೆ ಯತ್ನಿಸುವುದು ಹೆಚ್ಚಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next