Advertisement
ಕರಾವಳಿ ಉತ್ಸವವನ್ನು ಜನವರಿ ತಿಂಗಳಿನಲ್ಲಿ ಆಯೋಜಿಸಲು ದ.ಕ. ಜಿಲ್ಲಾಡಳಿತ ಈ ಹಿಂದೆ ಸಿದ್ಧತೆ ನಡೆಸಿತ್ತು. ವಿಶೇಷವಾಗಿ ಆಯೋಜಿಸುವ ಕುರಿತು ಚರ್ಚೆಯನ್ನೂ ನಡೆಸಲಾಗಿತ್ತು. ಉತ್ಸವ ಆಯೋಜನೆಗೆ ಹಣಕಾಸಿನ ನೆರವಿಗೆಂದು ರಾಜ್ಯ ಸರಕಾರಕ್ಕೆ ಪತ್ರ ಬರೆಯಲು ನಿರ್ಧರಿಸಲಾಗಿತ್ತು. ಆದರೆ ಸದ್ಯ ದಿನವಹಿ ಕೋವಿಡ್ ಪ್ರಕರಣ ಏರುಗತಿಯಲ್ಲಿ ಸಾಗುತ್ತಿದ್ದು, ಜಿಲ್ಲೆಯ ಪಾಸಿಟಿವಿಟಿ ದರ ಕೂಡ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಕರಾವಳಿ ಉತ್ಸವವನ್ನು ನಡೆಸದಿರಲು ನಿರ್ಧರಿಸಲಾಗಿದೆ.
ಕೋವಿಡ್ ಕಾರಣದಿಂದಾಗಿ ಮಂಗಳೂರು ನಗರದಲ್ಲಿ ಕಳೆದ ವರ್ಷವೂ ಕರಾವಳಿ ಉತ್ಸವ ನಡೆಯಲಿಲ್ಲ. ಕರಾವಳಿ ಉತ್ಸವ ಮೈದಾನದಲ್ಲಿ ಪ್ರತೀ ವರ್ಷ ನಡೆಯುವ ವಸ್ತು ಪ್ರದರ್ಶನದಲ್ಲಿ ವಿವಿಧ ಜಿಲ್ಲೆ/ರಾಜ್ಯಗಳ ಹತ್ತಾರು ಮಳಿಗೆಗಳು ಇರುತ್ತವೆ. ಇದನ್ನು ವೀಕ್ಷಿಸಲು ಮತ್ತು ವಸ್ತುಗಳ ಖರೀದಿಗಾಗಿ ಪ್ರತೀ ದಿನ ಸಾವಿರಾರು ಮಂದಿ ಉತ್ಸವ ಮೈದಾನಕ್ಕೆ ಆಗಮಿಸುತ್ತಿದ್ದರು. ಇದು ಸ್ಥಳೀಯ ಆರ್ಥಿಕತೆಯ ಉತ್ತೇಜನಕ್ಕೂ ಪೂರಕವಾಗುತ್ತಿತ್ತು.
Related Articles
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಆಯೋಜಿಸಲಾಗುತ್ತಿದ್ದ ಫಲಪುಷ್ಪ ಪ್ರದರ್ಶನವನ್ನು ಕೂಡ ಈ ಬಾರಿ ಆಯೋಜನೆ ಮಾಡದಿರಲು ನಿರ್ಧರಿ ಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷವೂ ಫಲಪುಷ್ಪ ಪ್ರರ್ದಶನ ರದ್ದುಗೊಂಡಿತ್ತು. ಈ ಹಿಂದೆ ಕದ್ರಿ ಪಾರ್ಕ್ ಮೂರು ದಿನಗಳ ಕಾಲ ಕಣ್ಮನ ಸೆಳೆಯುವ ಬಣ್ಣ ಬಣ್ಣದ ಪುಷ್ಪಗಳು, ತರಕಾರಿ, ಹಣ್ಣುಗಳಿಂದ ಕಂಗೊಳಿಸುತ್ತಿತ್ತು.
Advertisement
ತಾತ್ಕಾಲಿಕ ರದ್ದುದಕ್ಷಿಣ ಕನ್ನಡ ಸಹಿತ ರಾಜ್ಯದಲ್ಲಿ ಕೊರೊನಾ ದಿನದ ವರದಿ ಏರುಗತಿಯಲ್ಲಿ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಕರಾವಳಿ ಉತ್ಸವವನ್ನು ಸದ್ಯದ ಮಟ್ಟಿಗೆ ನಡೆಸದಿರಲು ತೀರ್ಮಾನಿಸಿದ್ದೇವೆ. ಉತ್ಸವ ಆಚರಣೆಗೆ ಸಿದ್ಧತೆ ನಡೆಸಿದ್ದೆವು. ಆದರೆ ಕೊರೊನಾ ತೀವ್ರತೆ ಹಿನ್ನೆಲೆಯಲ್ಲಿ ಉತ್ಸವವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಕೊರೊನಾ ತೀವ್ರತೆ ಕಡಿಮೆಯಾದರೆ ಮುಂದಿನ ದಿನಗಳಲ್ಲಿ ಆಯೋಜನೆ ಮಾಡುತ್ತೇವೆ.
– ಡಿ. ವೇದವ್ಯಾಸ ಕಾಮತ್, ಶಾಸಕರು