Advertisement

ಕುವೈಟ್‌ನಲ್ಲಿ ಯುವಕರ ಸಂಕಷ್ಟ: ಇಂದು ಅಂತಿಮ ನಿರ್ಧಾರ ಸಾಧ್ಯತೆ

02:34 PM Jul 16, 2019 | Team Udayavani |

ಮಂಗಳೂರು: ಉದ್ಯೋಗಕ್ಕಾಗಿ ಕುವೈಟ್‌ಗೆ ತೆರಳಿ ಸಂಕಷ್ಟಕ್ಕೆ ಸಿಲುಕಿರುವ ಮಂಗಳೂರಿನ 35 ಮಂದಿ ಸಹಿತ ಭಾರತದ ಒಟ್ಟು 75 ಮಂದಿ ನೌಕರರನ್ನು ಸ್ವದೇಶಕ್ಕೆ ಕಳುಹಿಸುವ ಬಗ್ಗೆ ಇದ್ದ ತಾಂತ್ರಿಕ ಸಮಸ್ಯೆಗಳು ಶೀಘ್ರ ಬಗೆಹರಿಯುವ ಲಕ್ಷಣಗಳು ಕಂಡು ಬರುತ್ತಿದ್ದು, ರವಿವಾರ ಶೋನ್‌ (ನ್ಯಾಯಾಲಯ ಮಾದರಿ ಸರಕಾರಿ ಸಂಸ್ಥೆ)ನಲ್ಲಿ ನಡೆದ ಸಭೆಯಲ್ಲಿ ಸಕಾರಾತ್ಮಕ ಬೆಳವಣಿಗೆಗಳು ನಡೆದಿವೆ.

Advertisement

75 ಮಂದಿ ನೌಕರರ ಪೈಕಿ 60 ಜನ ಶೋನ್‌ ಸಭೆಗೆ ಹಾಜರಾಗಿದ್ದು, ಅವರಲ್ಲಿ 53 ಮಂದಿ ಪತ್ರವೊಂದಕ್ಕೆ (ಅದು ಅರೆಬಿಕ್‌ ಭಾಷೆಯಲ್ಲಿದೆ) ಸಹಿ ಹಾಕಿದ್ದಾರೆ. ಉಳಿದ 7 ಮಂದಿ ಆಂಧ್ರದವರಾಗಿದ್ದು, ಅವರು ಈಗಾಗಲೇ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಅವರಿಗೆ ಈ ಪತ್ರಕ್ಕೆ ಸಹಿ ಹಾಕುವ ಆವಶ್ಯಕತೆ ಇರಲಿಲ್ಲ. ಹಾಜರಾಗದ 15 ಮಂದಿ ಸೋಮವಾರ ಶೋನ್‌ನಲ್ಲಿ ನಡೆಯುವ ಸಭೆಗೆ ಹಾಜರಾಗಿ ಪತ್ರಕ್ಕೆ ಸಹಿ ಮಾಡುವ ಸಾಧ್ಯತೆ ಇದ್ದು, ಈ ಸಭೆಯಲ್ಲಿ ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಶೋನ್‌ನಲ್ಲಿ ನಡೆದ ಸಭೆಯ ಮಾತುಕತೆಯಂತೆ ಪತ್ರಕ್ಕೆ ಸಹಿ ಮಾಡಿದವರಿಗೆ ಅವರ ವೀಸಾ ರದ್ದು ಪಡಿಸಿ ಪಾಸ್‌ ಪೋರ್ಟ್‌, ಒಂದಿಷ್ಟು ಮೊತ್ತದ ಹಣವನ್ನು ವಾಪಸ್‌ ಕೊಡಲಾಗುತ್ತಿದೆ. ಇದೆಲ್ಲವನ್ನೂ ಕಂಪೆನಿಯವರು ಭಾರತೀಯ ರಾಯಭಾರ ಕಚೇರಿಗೆ ಒಪ್ಪಿಸಲಿದ್ದಾರೆ. ಇದರಿಂದ ನೌಕರರು ಸಮಸ್ಯೆಯಿಂದ ಮುಕ್ತಿ ಪಡೆದಂತಾಗಿ ಸ್ವದೇಶಕ್ಕೆ ಮರಳಲು ಹಾದಿ ಸುಗಮವಾಗಲಿದೆ.

ಭಾರತೀಯ ರಾಯಭಾರಿ ಕಚೇರಿಯ 2ನೇ ಕಾರ್ಯದರ್ಶಿ ಶಿಬಿ ಯು.ಎಸ್‌., ಶೋನ್‌ ಪ್ರತಿನಿಧಿಗಳು, ಪಬ್ಲಿಕ್‌ ಅಥಾರಿಟಿ ಆಫ್‌ ಮ್ಯಾನ್‌ಪವರ್‌ (ಪ್ಯಾಮ್‌), ಇನೆಸ್ಕೋ ಜನರಲ್ ಟ್ರೇಡಿಂಗ್‌ ಆ್ಯಂಡ್‌ ಕಂಟ್ರಾಕ್ಟಿಂಗ್‌ ಕಂಪೆನಿ ಪ್ರತಿನಿಧಿಗಳು, ಸಂತ್ರಸ್ತ ನೌಕರರು ಸಭೆಯಲ್ಲಿದ್ದರು.

ಟಿಕೆಟ್ ಹಣ ಭರಿಸುವವರು ಯಾರು?

ಈ ನೌಕರರಿಗೆ ಊರಿಗೆ ಮರಳಲು ಟಿಕೆಟ್ ಹಣ ಯಾರು ಪಾವತಿಸುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಇದುವರೆಗೆ ಯಾವುದೇ ತೀರ್ಮಾನ ಆಗಿಲ್ಲ. ಪ್ರಸ್ತುತ ಅವರಿಗೆ ಆಹಾರ ಮತ್ತು ಆಶ್ರಯಕ್ಕೆ ಸಮಸ್ಯೆ ಇಲ್ಲ. ಮಧ್ಯಾಹ್ನದ ಊಟವನ್ನು ಓರ್ವ ಉದ್ಯಮಿ ಹಾಗೂ ರಾತ್ರಿಯ ಊಟವನ್ನು ಇನ್‌ಸ್ಟಿಟ್ಯೂಟ್ ಆಫ್‌ ಎಂಜಿನಿಯರ್ ಕುವೈಟ್‌ನ ನಾಲ್ವರು ಎಂಜಿನಿಯರುಗಳು ಪ್ರಾಯೋಜಿಸಿದ್ದಾರೆ. ಆದರೆ ಟಿಕೆಟ್ ವ್ಯವಸ್ಥೆ ಯಾರು ಮಾಡುತ್ತಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ನೌಕರರಿಗೆ ಅವರ ಪಾಸ್‌ಪೋರ್ಟ್‌ ಸೋಮವಾರವೇ ಮರಳಿ ಸಿಗುವ ಸಾಧ್ಯತೆ ಇದ್ದು, ಟಿಕೆಟ್ ವ್ಯವಸ್ಥೆಯೂ ಸರಿಯಾಗಿ ನಡೆದರೆ ಇನ್ನೆರಡು ದಿನಗಳಲ್ಲಿ ಅವರು ತಾಯ್ನಾಡಿಗೆ ಮರಳಬಹುದಾಗಿದೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next