ಬಂಟ್ವಾಳ: ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ದ.ಕ.ಜಿಲ್ಲೆಗೆ ಕರಾವಳಿ ಕಲೋತ್ಸವದಂತಹ ಕಾರ್ಯಕ್ರಮಗಳು ಹೊಸ ಮೆರುಗನ್ನು ತಂದುಕೊಡುತ್ತಿದ್ದು, ಇಂತಹ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಮೂಲಕ ಸಂಘಟಕರ ಮೊಗದಲ್ಲೂ ನಗುವನ್ನು ತರವ ಕಾರ್ಯವನ್ನು ಪ್ರೇಕ್ಷಕ ವರ್ಗ ಮಾಡಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.
ಅವರು ಮಂಗಳವಾರ ಬಿ.ಸಿ.ರೋಡಿನ ಗಾಣದಪಡ್ಪು ಬಳಿಯ ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಬಂಟ್ವಾಳ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಆಯೋಜಿಸಿರುವ ಕರಾವಳಿ ಕಲೋತ್ಸವದ 2ನೇ ದಿನದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದೇಶದ ಬೆಳವಣಿಗೆಗೆ ಸಾಮರಸ್ಯ ಅತಿ ಅಗತ್ಯವಾಗಿದ್ದು, ನಾವೆಲ್ಲರೂ ಅದಕ್ಕೆ ಒತ್ತು ನೀಡಬೇಕಿದೆ. ದೇಶದಲ್ಲಿ ಯಾವುದೋ ಧರ್ಮ, ಜಾತಿಗೆ ಅನ್ಯಾಯವಾದರೆ ಅದು ಇಡೀ ದೇಶಕ್ಕೆ ಆಪತ್ತು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ವೇದಿಕೆಯಲ್ಲಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ನ್ಯಾಯವಾದಿ ಅಶ್ವನಿ ಕುಮಾರ್ ರೈ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಸ್ವರ್ಣೋದ್ಯಮಿ ಸುನೀಲ್ ಆಚಾರ್ಯ, ಬಾಲನಟಿ ಅದ್ವಿಕಾ ಶೆಟ್ಟಿ, ಕರಾವಳಿ ಕಲೋತ್ಸವದ ಅಧ್ಯಕ್ಷ ಸುದರ್ಶನ್ ಜೈನ್, ಗೌರವಾಧ್ಯಕ್ಷ ಪಿ.ಜಯರಾಮ ರೈ ವಿಟ್ಲ, ಚಿಣ್ಣರೋತ್ಸವದ ಅಧ್ಯಕ್ಷ ಆಶ್ಲೇಷ್ ಕೆ.ಪೊಲೀಸ್‌ಲೇನ್ ಉಪಸ್ಥಿತರಿದ್ದರು.
ಚಿಣ್ಣರ ಲೋಕ ಸೇವಾ ಟ್ರಸ್ಟ್‌ನ ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ ಮುನ್ನೂರು ಪ್ರಸ್ತಾವನೆಗೈದರು. ನಿರ್ದೇಶಕರಾದ ಲೋಕೇಶ್ ಸುವರ್ಣ ಸ್ವಾಗತಿಸಿ, ರಾಜೇಶ್ ಕೊಟ್ಟಾರಿ ವಂದಿಸಿದರು. ರಾಜೀವ ಕಕ್ಯಪದವು ನಿರೂಪಿಸಿದರು. ಬಳಿಕ ಕರಾವಳಿ ಡ್ಯಾನ್ಸ್ ಡಮಾಕಾ ನೃತ್ಯ ಸ್ಪರ್ಧೆ ಜರಗಿತು.