ಕೃಷಿ ಕೇವಲ ಉದ್ಯೋಗವಲ್ಲ. ಹೊಟ್ಟೆಪಾಡಿನ ಕೆಲಸವಲ್ಲ. ಅದೊಂದು ಜೀವನ ಕ್ರಮ, ಸಂಸ್ಕೃತಿಯ ಪ್ರತೀಕ. ಸಾಂಸ್ಕೃತಿಕ, ಸಂಪ್ರದಾಯದ ಅನಾವರಣ. ಅದರಲ್ಲೂ ಭತ್ತದ ಕೃಷಿ ಹತ್ತು ಹಲವು ವೈಶಿಷ್ಟ್ಯಗಳ ಆಗರ. ಬೇಸಾಯದ ಪ್ರತಿಯೊಂದು ಹಂತದಲ್ಲೂ ಅರ್ಥಪೂರ್ಣ ಕ್ರಮಗಳಿವೆ.
ಬ್ರಹ್ಮಾವರ : ಭತ್ತದ ಬೆಳೆ ಕಡಿಮೆಯಾದಂತೆ ಅದನ್ನು ಸಂರಕ್ಷಿಸುವ ವಿಶಿಷ್ಟ ವಿಧಾನ ತಿರಿ ರಚನೆಯೂ ಕಣ್ಮರೆಯಾಗುತ್ತಿದೆ.
ಇದು ಕೊಯ್ಲಿನ ಅನಂತರ ಭತ್ತವನ್ನು ಸಂರಕ್ಷಿಸಿ ಇಡುವ ಅತ್ಯಂತ ವೈಜ್ಞಾನಿಕ ವಿಧಾನ. ಜತೆಗೆ ಸುಂದರ, ಮನೋಹರ ಕ್ರಮ. ಶ್ರಮದ ಜತೆಗೆ ಕುಸುರಿ, ಕಲಾತ್ಮಕತೆ ಸೇರಿದಾಗ ಮಾತ್ರ ತಿರಿ ರಚನೆಯಾಗುತ್ತದೆ. ಮೊದಲು ಬೈಹುಲ್ಲಿನಿಂದ ಮಡೆ ಬಳ್ಳಿ ನೆಯ್ದು ತಿರಿ ರಚಿಸುತ್ತಿದ್ದರು. ಈಗ ಬೀಣಿ ಹಗ್ಗದ ಬಳಕೆಯಾಗುತ್ತಿದೆ. ತಿರಿಯಲ್ಲಿ ಭತ್ತವನ್ನು ವರ್ಷಗಟ್ಟಲೆ ಸುರಕ್ಷಿತವಾಗಿ ಇಡಬಹುದು. 500 ಮುಡಿಗೂ ಮಿಕ್ಕಿ ಸಂಗ್ರಹಿಸುವ ಬೃಹತ್ ತಿರಿಗಳನ್ನೂ ರಚಿಸುವವರಿದ್ದಾರೆ. ಬರುಬರುತ್ತಾ ತಿರಿ ಕಟ್ಟುವ ಕೌಶಲ ತಿಳಿದವರೂ ಕಡಿಮೆಯಾಗುತ್ತಿದ್ದು, ಯುವ ಜನತೆ ದೂರವಾಗುತ್ತಿದ್ದಾರೆ. ಬ್ರಹ್ಮಾವರ ಪರಿಸರದಲ್ಲಿ ಮಟಪಾಡಿ ಸೂರ್ಯನಾರಾಯಣ ಗಾಣಿಗ, ಕೂಡ್ಲಿ ಉಡುಪರ ಮನೆ, ಕೊಕ್ಕರ್ಣೆ ಚೆಗ್ರಿಬೆಟ್ಟು ನಾಗರಾಜ ಉಳಿತ್ತಾಯ ಹೀಗೆ ಕೆಲವೇ ಮಂದಿ ತಿರಿ ಕಟ್ಟುವ ಸಂಪ್ರದಾಯವನ್ನು ಉಳಿಸಿಕೊಂಡು ಬರುತ್ತಿದ್ದಾರೆ.
ಸಂಪ್ರದಾಯ ಉಳಿಸುವ ಆಶಯ
ಹಿರಿಯರಿಂದಲೂ ಮಾಡಿಕೊಂಡು ಬಂದಿರುವ ಕ್ರಮವನ್ನು ಉಳಿಸುವ ಉದ್ದೇಶದಿಂದ ಪ್ರತೀ ವರ್ಷ ತಿರಿ ಕಟ್ಟುತ್ತಿದ್ದೇವೆ. ಲಾಭ ನಷ್ಟದ ಲೆಕ್ಕಾಚಾರ ಹಾಕದೆ ಸಂಪ್ರದಾಯ ಉಳಿಯಬೇಕೆನ್ನುವುದು ಆಶಯ.
– ಮಟಪಾಡಿ ಸೂರ್ಯನಾರಾಯಣ ಗಾಣಿಗ