ಕಾರಟಗಿ: ಪಟ್ಟಣದ ವಾಲ್ಮೀಕಿ ಸಮುದಾಯದವರು ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠಕ್ಕೆ 100 ಕ್ವಿಂಟಲ್ ಅಕ್ಕಿಯನ್ನು ಬುಧವಾರ ಲಾರಿ ಮೂಲಕ ಕಳಿಸಿಕೊಟ್ಟರು.
ನಂತರ ಸಮಾಜದ ಮುಖಂಡರು ಮಾತನಾಡಿ, ವಾಲ್ಮೀಕಿ ಗುರುಪೀಠದ 22ನೇ ವಾರ್ಷಿಕೋತ್ಸವ, ಶ್ರೀ ಜಗದ್ಗುರು ಪುಣ್ಯಾನಂದಪುರಿ ಸ್ವಾಮಿಗಳ 13ನೇ ವರ್ಷದ ಪುಣ್ಯಾರಾಧನೆ ಹಾಗೂ ಪ್ರಸನ್ನಾನಂದ ಮಹಾಸ್ವಾಮಿಗಳ 12ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಫೆ. 8, 9ರಂದು ನಡೆಯುವ ಹಿನ್ನೆಲೆಯಲ್ಲಿ ಮಠದಲ್ಲಿ ಸಹಸ್ರಾರು ಸಂಖ್ಯೆ ಭಕ್ತರು ಪಾಲ್ಗೊಳ್ಳುವರು. ಈ ನಿಟ್ಟಿನಲ್ಲಿ ಪಟ್ಟಣ ಸೇರಿದಂತೆ ಸುತ್ತಲಿನ 18 ಗ್ರಾಮಗಳ ಸಮಾಜ ಬಾಂಧವರು ಮಠಕ್ಕೆ ಭಕ್ತಿಯ ಕಾಣಿಕೆಯಾಗಿ ಅಕ್ಕಿ ನೀಡಿದ್ದಾರೆ.
ಸಹೃದಯಿ ಸಮಾಜ ಬಾಂಧವರು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಹಾಯ ನೀಡುವ ಮೂಲಕ ಸಮಾಜದ ಹಾಗೂ ಮಠದ ಅಭಿವೃದ್ಧಿಗೆ ಕೈ ಜೋಡಿಸಬೇಕು. ಅಲ್ಲದೆ 2 ದಿನಗಳ ಕಾಲ ರಾಜನಹಳ್ಳಿಯ ಮಠದಲ್ಲಿ ಜರುಗುವ ಪ್ರತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೇವೆ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಮತ್ತು ತಪ್ಪದೇ ಸಮಾಜದ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.
ಇದಕ್ಕೂ ಮುನ್ನ ಅಕ್ಕಿ ತುಂಬಿದ ಲಾರಿಯನ್ನು ಸಮಾಜ ಪ್ರಮುಖರು ಪೂಜೆ ಸಲ್ಲಿಸಿ ಬೀಳ್ಕೊಟ್ಟರು. ಕೆ.ಎನ್. ಪಾಟೀಲ, ಶಿವರಡ್ಡಿ ನಾಯಕ, ಯಮನೂರಪ್ಪ ಸಿಂಗನಾಳ, ಅಂಬಣ್ಣ ನಾಯಕ, ಗದ್ದೆಪ್ಪ ನಾಯಕ, ಜಿ.ಯಂಕನಗೌಡ, ಶಿವಣ್ಣ ನಾಯಕ ಚಳ್ಳೂರ, ಕಂಟೇಪ್ಪ ನಾಯಕ ತೊಂಡಿಹಾಳ, ಲೀಲಾಧರ ನಾಯಕ, ಪಾರಿಜಾತಪ್ಪ ನಾಡಿಗೇರ, ಎರ್ರಿಸ್ವಾಮಿ ಬಿಲ್ಗಾರ, ದುರುಗೇಶ ಪ್ಯಾಟ್ಯಾಳ ಗುಡೂರ, ಬಸವರಾಜ ಬೂದಿ, ಸೋಮಶೇಖರ ಗ್ಯಾರೇಜ್, ಯಂಕಪ್ಪ, ವೀರೇಶ ತಳವಾರ, ಮೈಲಾಪೂರ, ಸುರೇಶ ಬೂದಗುಂಪ, ಗವಿಸಿದ್ಧಪ್ಪ ಉಳೆನೂರ ಇದ್ದರು.