Advertisement

ಕಾರಂತ ಬಡಾವಣೆ ಸಂತ್ರಸ್ತರಿಗೆ ಸಿಗುವುದೇ ನ್ಯಾಯ?

01:16 AM Aug 03, 2019 | Lakshmi GovindaRaj |

ಬೆಂಗಳೂರು: ಸಮಿಶ್ರ ಸರ್ಕಾರ ಬದಲಾಗಿ ಹೊಸ ಸರ್ಕಾರ ಬಂದಾಯ್ತು. ಈಗಲಾದರೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಡಾ.ಶಿವರಾಮ ಕಾರಂತ ಬಡಾವಣೆ ಸಂತ್ರಸ್ತರ ಸಂಕಷ್ಟಗಳಿಗೆ ಪರಿಹಾರ ಸಿಗಲಿದೆಯೇ? ಈ ಹಿಂದೆ ಅಂದರೆ 2008ರಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು.

Advertisement

ಆದರೆ ದಶಕ ಕಳೆದರೂ ಬಡಾವಣೆಗಾಗಿ ಜಮೀನು ನೀಡಿದ್ದ ದಾಸರಹಳ್ಳಿ, ಯಲಹಂಕ ವ್ಯಾಪ್ತಿಯ ಸುಮಾರು 17 ಹಳ್ಳಿಗಳ ರೈತರು, ಭೂಮಾಲೀಕರು ಇನ್ನೂ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಇದೀಗ ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿಯಾಗಿದ್ದು, ಅವರು ತಮ್ಮ ಸಂಕಷ್ಟಕ್ಕೆ ಮಿಡಿಯುತ್ತಾರೆ ಎಂಬ ನಿರೀಕ್ಷೆಯಲ್ಲಿ ಬಡಾವಣೆ ನಿರ್ಮಿಸಲು ಆಗ ಜಮೀನು ನೀಡಿದ್ದ ನೂರಾರು ರೈತರಿದ್ದಾರೆ.

ಬಡಾವಣೆ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳುವಂತೆ ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್‌ ಬಿಡಿಎಗೆ ಸೂಚಿಸಿತ್ತು. ಈ ತೀರ್ಪಿನಿಂದ ಜಮೀನು ಕಳೆದು ಕೊಳ್ಳಲಿರುವ ಭೂ ಮಾಲೀಕರು ಮತ್ತು ರೈತರು ಹಾಗೂ ಮನೆ ನಿರ್ಮಿಸಿಕೊಂಡವರು ಕಾನೂನಿನ ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ.

ಈ ಹಿಂದೆ ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ ಶಿವರಾಮ ಕಾರಂತ ಬಡಾವಣೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ನಿಯೋಗ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಡುವಂತೆ ಸರ್ಕಾರವನ್ನು ಒತ್ತಾಯಿಸುವಂತೆ ಮನವಿ ಮಾಡಿಕೊಂಡಿತ್ತು. ಆಗ ಅವರು ಸಕಾರತ್ಮಕವಾಗಿ ಸ್ಪಂದಿಸಿದ್ದರು ಎಂದು ಶಿವರಾಮ ಕಾರಂತ ಬಡಾವಣೆ ಸಂತ್ರಸ್ತರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಆರ್‌.ನಂಜುಂಡಪ್ಪ ಹೇಳಿದ್ದಾರೆ.

ಸದ್ಯದಲ್ಲೇ ರೈತರ ನಿಯೋಗ: ಸದ್ಯದಲ್ಲೇ ರೈತರ ನಿಯೋಗ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದ್ದು, ಆ ವೇಳೆ ಡಾ.ಶಿವರಾಮಕಾರಂತ ಬಡಾವಣೆ ಭೂ ಸ್ವಾಧೀನ ಕೈ ಬಿಡುವಂತೆ ಮನವಿ ಮಾಡಲಾಗುವುದು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಹೇಳಿದ್ದಾರೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಭೂ ಸ್ವಾಧೀನ ಕಗ್ಗಂಟನ್ನು ಪರಿಹರಿಸುವ ಕುರಿತಂತೆ ಭರವಸೆ ನೀಡಿದ್ದರು. ಆದರೆ ಚುನಾವಣೆಗಳು ಎದುರಾದ ಹಿನ್ನೆಲೆಯಲ್ಲಿ ತೊಡಕು ಉಂಟಾಯಿತು ಎಂದು ತಿಳಿಸಿದ್ದಾರೆ.

Advertisement

ರಾಜ್ಯಪತ್ರದಲ್ಲೂ ಪ್ರಕಟವಾಗಿತ್ತು: ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ಭೂಸ್ವಾಧೀನಕ್ಕೆ ಬಿಡಿಎ 2008 ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಇದಾದ ಬಳಿಕ 3,546 ಎಕರೆ ಜಮೀನು ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ಈ ಮಧ್ಯೆ ರೈತರ ಆಕ್ಷೇಪಣೆ ಹಿನ್ನೆಲೆಯಲ್ಲಿ 257 ಎಕರೆ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಸರ್ಕಾರ ಬಿಡಿಎಗೆ ಸೂಚಿಸಿತ್ತು.

ಮತ್ತೆ 446 ಎಕರೆ ಜಮೀನು ಭೂಸ್ವಾಧೀನದಿಂದ ಕೈಬಿಡುವಂತೆ ಒತ್ತಾಯ ಕೇಳಿ ಬಂದಿತ್ತು. ಇದರಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. 2012ರಲ್ಲಿ ಈ ವಿಚಾರ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆಗೆ ಬಂದು, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಲಾಗಿತ್ತು.

ಹೈಕೋರ್ಟ್‌ ಮೆಟ್ಟಿಲೇರಿದ್ದ ರೈತರು: ಈ ಮಧ್ಯೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ 5 ವರ್ಷಗಳಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿಲ್ಲ ಎಂದು ಆಕ್ಷೇಪಿಸಿ ಕೆಲವು ರೈತರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹೈಕೋರ್ಟ್‌ನ ಏಕಸದಸ್ಯ ಪೀಠ ಹಾಗೂ ವಿಭಾಗೀಯ ಪೀಠ ರೈತರ ಪರ ತೀರ್ಪು ಕೊಟ್ಟಿತ್ತು. ಇದನ್ನು ಬಿಡಿಎ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಮೂರು ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ 2018ರಲ್ಲಿ ಸುಪ್ರೀಂ ಹೇಳಿತ್ತು. ಇದನ್ನು ಪ್ರಶ್ನಿಸಿ ಕೆಲವರು ಮೇಲ್ಮನವಿ ಸಲ್ಲಿಸಿದ್ದರು. ಇತ್ತೀಚೆಗೆ ಸುಪ್ರೀಂಕೋರ್ಟ್‌ ವಿಭಾಗೀಯ ಪೀಠ ಮೇಲ್ಮನವಿಗಳನ್ನು ವಿಚಾರಣೆಗೆ ಅಂಗೀಕರಿಸಲು ನಿರಾಕರಿಸಿತ್ತು.

ಶಿವರಾಮ ಕಾಂರತ ಬಡಾವಣೆಯಲ್ಲಿ 3,542 ಎಕರೆ ಭೂಮಿ ಇದ್ದು, ಆ ಜಾಗದಲ್ಲಿ ಈಗಾಗಲೇ ಸುಮಾರು 15 ರಿಂದ 20 ಸಾವಿರ ಮುಂದಿ ಮನೆ ಕಟ್ಟಿಕೊಂಡಿದ್ದಾರೆ. ಇದರಲ್ಲಿ ಸಣ್ಣ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
-ರವೀಶ್‌, ವೇದಿಕೆ ಉಪಾಧ್ಯಕ್ಷ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next