ಕಾಪು: ಮನುಷ್ಯ ಮೋಹ ಬಿಡಬೇಕು. ಮೋಹ ಮನುಷ್ಯನ ಅಧೋಗತಿಗೆ ಕಾರಣವಾಗುತ್ತದೆ. ಇಂದಿನ ತಂತ್ರಜ್ಞಾನದ ಯುಗದಲ್ಲಿ ಮನುಷ್ಯನ ಜೀವನ ಕೂಡ ಯಂತ್ರದ ರೀತಿಯಲ್ಲೇ ಓಡುತ್ತಿದೆ. ಕಲಿಯುಗದಲ್ಲಿ ವೆಂಕಟರಮಣ ದೇವರ ಆರಾಧನೆಯಿಂದ ಸನ್ಮಂಗಲ ಪ್ರಾಪ್ತವಾಗುತ್ತದೆ. ಪ್ರತೀಯೊಬ್ಬರೂ ದಿನದ ಒಂದು ಕ್ಷಣದಲ್ಲಾದರೂ ದೇವರ ಸ್ಮರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಆ ಮೂಲಕ ದೇವರ ಅನುಗ್ರಹಕ್ಕೆ ಪ್ರಾಪ್ತರಾಗಲು ಸಾಧ್ಯವಿದೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧಿಪತಿ ಶ್ರೀಮತ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.
ಮಾ. 23ರಂದು ಪ್ರಪ್ರಥಮ ಬಾರಿಗೆ ಕಾಪು ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಶ್ರೀ ದೇವರ ದರ್ಶನದ ಬಳಿಕ ಆಶೀರ್ವಚನ ನೀಡಿದರು.
ಇಂದಿನ ಮಕ್ಕಳಿಗೆ ಆಧ್ಯಾತ್ಮ ಬೋಧನೆ ನೀಡುವುದು, ಆಧ್ಯಾತ್ಮದ ಬಗ್ಗೆ ತಿಳಿಸಿಕೊಡುವುದು ತಂದೆ ತಾಯಿಯರ ಕರ್ತವ್ಯವಾಗಿದೆ. ದೇವರ ಸೇವೆಯೊಂದಿಗೆ ತಂದೆ ತಾಯಿ, ಗುರು ಹಿರಿಯರ ಸೇವೆಯ ಬಗ್ಗೆ ತಮ್ಮ ಮಕ್ಕಳಿಗೆ ತಿಳಿಸಿಕೊಡುವ ಕೆಲಸವೂ ಹೆತ್ತವರಿಂದ ನಡೆಯಬೇಕಿದೆ. ಉಳ್ಳವರು ಸಮಾಜದಲ್ಲಿ ಬಡತನದಲ್ಲಿ ಇರುವವರ ನೆರವಿಗೆ ಧಾವಿಸಬೇಕು. ಈ ರಾಮ ರಾಜ್ಯದಲ್ಲಿ ಎಲ್ಲರೂ ಸುಖೀಗಳಾಗಿ ಬದುಕು ಸಾಗಿಸಲು ಪೂರಕವಾಗುವಂತೆ ನಾವು ನೆರವಾಗಬೇಕು ಎಂದರು.
ಕಾಪು ಪೇಟೆಯ ಸಮಸ್ತರ ಸಾಂಘಿಕ ಶಕ್ತಿಯ ಫಲವಾಗಿ ಕಾಪು ವೆಂಕಟರಮಣ ದೇವಸ್ಥಾನವು ಸುಂದರವಾಗಿ ಮೂಡಿ ಬಂದಿದೆ. ಮಾರಿಯಮ್ಮ ದೇವಿಯ ಸನ್ನಿಧಾನದ ಜೀರ್ಣೋದ್ಧಾರದ ಸಂಕಲ್ಪವೂ ಸಾಂಗವಾಗಿ ನೆರವೇರುವಂತಾಗಲಿ. ಸಮಾಜದ ಎಲ್ಲರಿಗೂ ಶ್ರೀ ದೇವರು ಮತ್ತು ಹರಿಗುರುಗಳ ಅನುಗ್ರಹ ಪ್ರಾಪ್ತವಾಗಲಿ ಎಂದು ಆಶೀರ್ವದಿಸಿದರು.
ಪ್ರಧಾನ ಅರ್ಚಕ ವೇ| ಮೂ| ಕಮಲಾಕ್ಷ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಸ್ವಾಮೀಜಿ ಅವರನ್ನು ಕಾಪು ಶ್ರೀ ವೀರಭದ್ರ ದೇವಸ್ಥಾನದ ಬಳಿ ಸ್ವಾಗತಿಸಲಾಯಿತು. ಬಳಿಕ ಸಾಲಂಕೃತ ರಥದಲ್ಲಿ ಪುರಪ್ರವೇಶ ಮೆರವಣಿಗೆಯ ಬಳಿಕ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ತೆರಳಿ, ಅಲ್ಲಿ ದೇವರ ಭೇಟಿ, ಹತ್ತು ಸಮಸ್ತರಿಂದ ಗುರು ಪಾದಪೂಜೆ ನಡೆಸಲಾಯಿತು.
ಕಾಪು ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಜಿ. ಶೆಣೈ, ಟ್ರಸ್ಟಿಗಳಾದ ಸದಾಶಿವ ಕಾಮತ್, ರಾಮ ನಾಯಕ್, ರಾಜೇಶ್ ಶೆಣೈ, ಶ್ರೀಕಾಂತ್ ಭಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಕುಲ್‌ದಾಸ್ ಶೆಣೈ, ಕೋಶಾಧಿಕಾರಿ ಲಕ್ಷ್ಮೀನಾರಾಯಣ ನಾಯಕ್, ಆಡಳಿತ ಕಮಿಟಿ ಸದಸ್ಯರಾದ ಮೋಹನದಾಸ್ ಕಿಣಿ, ರಾಜೇಶ್ ಶೆಣೈ ಮಜೂರು, ಸುನೀಲ್ ಪೈ, ಕೃಷ್ಣಾನಂದ ನಾಯಕ್, ಚಂದ್ರಕಾಂತ್ ಕಾಮತ್, ಪ್ರಮುಖರಾದ ಅನಂತ ಪಡಿಯಾರ್, ಸಂಜಯ್ ಭಟ್, ಓಂ ಕಿಣಿ ಮೊದಲಾದವರು ಉಪಸ್ಥಿತರಿದ್ದರು.
ಮಾಜಿ ಆಡಳಿತ ಮೊಕ್ತೇಸರ ಶ್ರೀಧರ ಶೆಣೈ ಸ್ವಾಗತಿಸಿದರು. ಆಡಳಿತ ಮೊಕ್ತೇಸರ ಪ್ರಸಾದ್ ಜಿ. ಶೆಣೈ ವಂದಿಸಿದರು. ಡಾ| ಸದಾನಂದ ಭಟ್ ಕಾರ್ಯಕ್ರಮ ನಿರೂಪಿಸಿದರು.