ಕಾಪು : ತಾಲೂಕಿನ ಕೇಂದ್ರ ಸ್ಥಾನದಲ್ಲಿರುವ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಾಲೂಕಿನ ಜನರ ಆವಶ್ಯಕತೆಗೆ ಅನುಗುಣವಾಗಿ ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವುದು ಅತೀ ಅಗತ್ಯವಾಗಿದೆ. ತಾಲುಕು ಆಸ್ಪತ್ರೆ ಸಹಿತವಾಗಿ 100 ಬೆಡ್‌ಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಬೇಕಾದ ಆವಶ್ಯಕ ದಾಖಲಾತಿಗಳನ್ನು ಪ್ರಸ್ತಾವನೆ ಸಹಿತವಾಗಿ ಸರಕಾರಕ್ಕೆ ಸಲ್ಲಿಸುವಂತೆ ಶಾಸಕ ಲಾಲಾಜಿ ಆರ್. ಮೆಂಡನ್ ಸೂಚನೆ ನೀಡಿದರು.
ಗುರುವಾರ ಮಧ್ಯಾಹ್ನ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಅವರು ರೋಗಿಗಳು, ವೈದ್ಯಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಅವರು ಆಸ್ಪತ್ರೆಯ ಕುಂದು ಕೊರತೆ, ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ, ಬಳಿಕ ಮಾತನಾಡಿದರು.
ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ರಾಷೀrÅಯ ಹೆದ್ದಾರಿ 66ರ ಸನಿಹದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕೆನ್ನುವುದು ದಶಕಗಳ ಹಿಂದಿನ ಒತ್ತಾಯವಾಗಿದೆ. ಜನರಿಗೆ ಹಲವಾರು ವರ್ಷಗಳಿಂದಲೂ ಉತ್ತಮ ಆರೋಗ್ಯ ಸೇವೆಯನ್ನು ನೀಡುತ್ತಾ ಬರುತ್ತಿರುವ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸುಸಜ್ಜಿತ ವ್ಯವಸ್ಥೆಯೊಂದಿಗೆ ಅಭಿವೃದ್ಧಿ ಪಡಿಸಲು ಸಹಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದರು.
ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಪೂರಕವಾಗಿ ಅಗತ್ಯವಾಗಿ ಬೇಕಾಗುವ ನೂತನ ಕಟ್ಟಡ ನಿರ್ಮಾಣಕ್ಕೆ ಇರುವ ಸ್ಥಳಾವಕಾಶ, ಜಾಗದ ದಾಖಲಾತಿಗಳು, ಇತರೇ ಬೇಡಿಕೆಗಳ ಬಗ್ಗೆ ವಿಸ್ತೃತ ವರದಿ ಸಲ್ಲಿಸಲು ಬೇಕಾಗುವ ದಾಖಲಾತಿಗಳ ಸಹಿತವಾಗಿ ಅವಶ್ಯವಿರುವ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿರಂತರವಾಗಿ ಕಾರ್ಯ ನಿರ್ವಹಿಸಲು ಗುತ್ತಿಗೆ ಆಧಾರದಲ್ಲಿ ವೈದ್ಯಾಧಿಕಾರಿಯನ್ನು ನೇಮಿಸಲಾಗಿದ್ದು, ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯೂ ಇಲ್ಲಿ ಹೆಚ್ಚುವರಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತೀ ನಿತ್ಯ 100ಕ್ಕೂ ಅಧಿಕ ಮಂದಿ ಆರೋಗ್ಯದ ತಪಾಸಣೆಗೆ ಆಗಮಿಸಿ ಆಸ್ಪತ್ರೆಯಲ್ಲಿ ಸಿಗುವ ವೈದ್ಯಕೀಯ ಸವಲತ್ತುಗಳ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿನ ಸಿಬ್ಬಂದಿಗಳ ಕೊರತೆ ಇರುವ ಬಗ್ಗೆಯು ನನ್ನ ಗಮನಕ್ಕೆ ಬಂದಿದ್ದು ಈ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚಿಸಿ, ಕ್ರಮಕ್ಕಾಗಿ ಮನವಿ ಮಾಡಲಾಗುವುದು ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರುವ ಲಭ್ಯ ಸ್ಥಳಾವಕಾಶಗಳು, ಇಲ್ಲಿಗೆ ಬರುವ ರೋಗಿಗಳಿಗೆ ಸಿಗುವ ಸವಲತ್ತುಗಳ ಬಗ್ಗೆ ಪರಿಶೀಲನೆ ನಡೆಸಿದ ಅವರು ಶವಾಗಾರ ಸಹಿತ ಇತರೇ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಆವರನದಲ್ಲಿ ಜೋತು ಬಿದ್ದಿರುವ ವಿದ್ಯುತ್ ಸಂಪರ್ಕದ ತಂತಿಯನ್ನು ಸರಿಪಡಿಸಿ ಸುರಕ್ಷತೆ ಕಲ್ಪಿಸುವಂತೆ ಮೆಸ್ಕಾಂ ಅಧಿಕಾರಿಗಲಿಗೆ ದೂರವಾಣಿ ಕರೆ ಮಾಡಿ ಸೂಚನೆ ನೀಡಿದರು.
ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಬ್ರಾಯ ಕಾಮತ್ ಹಾಗೂ ಸಿಬಂದಿ ವರ್ಗದವರು ಉಪಸ್ಥಿತರಿದ್ದು ವಿವಿಧ ಮಾಹಿತಿ ನೀಡಿದರು.
ಆರೋಗ್ಯ ಸಚಿವರಿಗೆ ಬೇಡಿಕೆ
ಆರೋಗ್ಯ ಸಚಿವ ಶ್ರೀ ರಾಮುಲು ಅವರ ಉಡುಪಿ ಜಿಲ್ಲಾಸ್ಪತ್ರೆ ಭೇಟಿ ಸಂದರ್ಭ ಆವರನ್ನು ಖುದ್ದಾಗಿ ಭೇಟಿ ನೀಡಿ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಬೇಡಿಕೆ ಪಟ್ಟಿಯೊಂದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಲಾಲಾಜಿ ಮೆಂಡನ್ ತಿಳಿಸಿದ್ದಾರೆ.