ಕಾಪು: ಸ್ವಾವಲಂಭಿ – ಸ್ವಾಭಿಮಾನಿ ಭಾರತ ನಿರ್ಮಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರಕಾರ ಬಹಳಷ್ಟು ಪರಿಣಾಮಕಾರಿಯಾಗಿ ಯೋಜನೆಗಳನ್ನು ರೂಪಿಸುತ್ತಿದ್ದು, ಇದಕ್ಕೆ ಪ್ರತೀಯೊಬ್ಬ ನಾಗರಿಕರೂ ಕೈ ಜೋಡಿಸುವ ಅಗತ್ಯವಿದೆ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ಕಾಪು ಕ್ಷೇತ್ರ ಬಿಜೆಪಿ ಕಚೇರಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಯ ಹಿನ್ನೋಟ -ಮುನ್ನೋಟದ ಕುರಿತಾಗಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಕೇಂದ್ರ ಸರಕಾರದ 2.0 ಸರಕಾರದ ಅವಧಿಯಲ್ಲಿ 370ನೇ ವಿಧಿ ರದ್ದು, ರಾಮ ಮಂದಿರ ನಿರ್ಮಾಣ ಸಂಕಲ್ಪ, ತ್ರಿವಳಿ ತಲಾಖ್ ರದ್ಧು, 20 ಲಕ್ಷ ಕೋಟಿ ರೂ. ಕೋವಿಡ್ ಪ್ಯಾಕೇಜ್ ಘೋಷಣೆ, ಗಡಿ ರಕ್ಷಣೆ – ಉಗ್ರರ ದಮನ ಸಹಿತವಾಗಿ ಹಲವಾರು ಪರಿಣಾಮಕಾರಿ, ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದಿರುವುದು ಬಿಜೆಪಿ ಸರಕಾರದ ಸಾಧನೆಯಾಗಿದೆ ಎಂದರು.
ನರೇಂದ್ರ ಮೋದಿ ಆಡಳಿತದಲ್ಲಿ ಭಾರತ ವಿಶ್ವಗುರು ಆಗಿ ಮೂಡಿ ಬಂದಿದೆ. ಕೋವಿಡ್ ನಂತಹ ಸಂದಿಗ್ಧ ಅವಧಿಯಲ್ಲಿ ಪ್ರಸ್ತುತ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಸರಕಾರವೇ ಆಡಳಿತದಲ್ಲಿ ಇರುವುದು ದೇಶದ ಭದ್ರ ಭವಿಷ್ಯಕ್ಕೆ ಪೂರಕವಾಗಿದೆ ಎಂದರು.
ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್ ಅಲೆವೂರು, ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜಿ.ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ಪಕ್ಷದ ಪ್ರಮುಖರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗುರುಪ್ರಸಾದ್ ಶೆಟ್ಟಿ ಬಾಳೆಬೈಲು, ಗೋಪಾಲಕೃಷ್ಣ ರಾವ್, ವಿವಿಧ ಮೋರ್ಚಾಗಳ ಅಧ್ಯಕ್ಷರಾದ ಸುಮಾ ಯು. ಶೆಟ್ಟಿ, ಸಚಿನ್ ಸುವರ್ಣ ಪಿತ್ರೋಡಿ, ಎಂ.ಜಿ. ನಾಗೇಂದ್ರ ಮೊದಲಾದವರು ಉಪಸ್ಥಿತರಿದ್ದರು.