Advertisement

ಕಾಲಾವಧಿ ಸುಗ್ಗಿ ಮಾರಿಪೂಜೆಗೆ ಸಿದ್ಧಗೊಂಡ ಕಾಪು

08:39 PM Mar 26, 2019 | sudhir |

ಕಾಪು: ತುಳುನಾಡಿನ ಏಳು ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಕಾಪುವಿನ ಕಾಲಾವಧಿ ಸುಗ್ಗಿ ಮಾರಿಪೂಜೆಗೆ ಕಾಪು ಭರ್ಜರಿಯಾಗಿ ಶೃಂಗಾರಗೊಂಡಿದೆ.
ಕಾಪು ಶ್ರೀ ಹಳೇ ಮಾರಿಗುಡಿ, ಶ್ರೀ ಹೊಸ ಮಾರಿಗುಡಿ ಮತ್ತು ಶ್ರೀ ಮೂರನೇ ಮಾರಿಗುಡಿ (ಕಲ್ಯ) ಯಲ್ಲಿ ಮಂಗಳವಾರ ಸಂಜೆಯಿಂದ ಬುಧವಾರ ಸಂಜೆಯವರೆಗೆ ನಡೆಯುವ ಸುಗ್ಗಿ ಮಾರಿಪೂಜೆಗಾಗಿ ವಿವಿಧೆಡೆಗಳಿಂದ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಬಿಗು ಪೊಲೀಸ್‌ ಬಂದೋಬಸ್ತ್ ಸಹಿತವಾಗಿ ವಿಶೇಷ ವ್ಯವಸ್ಥೆಗಳು ಜೋಡಣೆಯಾಗಿವೆ.

Advertisement

ಸುಗ್ಗಿ ಮಾರಿಪೂಜೆಯ ಪ್ರಯುಕ್ತ ಮೂರೂ ಮಾರಿಗುಡಿಗಳು ಕೂಡ ಸೋಮವಾರ ರಾತ್ರಿಯಿಂದಲೇ ವಿದ್ಯುತ್‌ ದೀಪಾಲಂಕಾರ, ಪುಷ್ಪಾಲಂಕಾರದ ಅಲಂಕಾರದೊಂದಿಗೆ ಎಲ್ಲರ ಕಣ್ಮನ ಸೆಳೆಯುತ್ತಿವೆ. ಮೂರೂ ಮಾರಿಗುಡಿಗಳಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ವಿದ್ಯುತ್‌ ದೀಪಾಲಂಕಾರ ಮತ್ತು ಹೂವಿನ ಅಲಂಕಾರ ನಡೆದಿದ್ದು, ಅಲಂಕೃತಗೊಳಿಸುವಲ್ಲಿಯೂ ಸ್ಪರ್ಧೆ ಏರ್ಪಟ್ಟಿದೆ.

250ಕ್ಕೂ ಹೆಚ್ಚು ವ್ಯಾಪಾರ ಮಳಿಗೆಗಳು ಮಾರಿಗುಡಿಗಳ ಪರಿಸರದಲ್ಲಿ ಸುಮಾರು 250ಕ್ಕೂ ಹೆಚ್ಚು ವಿವಿಧ ರೀತಿಯ ಮಾರಾಟ ಮಳಿಗೆಗಳು, ಅಂಗಡಿ – ಸ್ಟಾಲ್‌ತೆರೆದು ಕೊಂಡಿದ್ದು ಭಕ್ತರ‌ ಆಕರ್ಷಣೆಯ ಕೇಂದ್ರ ವಾಗಿ ಮಾರ್ಪಟ್ಟಿದೆ. ಮಾರಿಯಮ್ಮ ದೇವಿಗೆ ಅತ್ಯಂತ ಪ್ರಿಯವಾಗಿರುವ ಮಲ್ಲಿಗೆ, ಹಿಂಗಾರ, ಹಣ್ಣು ಕಾಯಿ ಸಮರ್ಪಣೆ ಹಾಗೂ ಮಾರಿಯಮ್ಮ ದೇವಿಯ ಗಣಗಳಿಗೆ ಭಕ್ತರು ಸ್ವಇಚ್ಚೆಯೊಂದಿಗೆ ರಕ್ತಾಹಾರ ರೂಪದಲ್ಲಿ ಸಮರ್ಪಿಸುವ ಕುರಿ, ಆಡು, ಕೋಳಿ ಮಾರಾಟದ ಅಂಗಡಿಗಳೂ ಸಂಜೆಯಿಂದಲೇ ತೆರೆದುಕೊಂಡಿವೆ.

ಲಕ್ಷಾಂತರ ಮಂದಿ ಭಾಗಿ
ಕಾಪುವಿನಲ್ಲಿ ನಡೆಯುವ ಸುಗ್ಗಿ, ಆಟಿ ಮತ್ತು ಜಾರ್ದೆ ಮಾರಿಪೂಜೆಗಳ ಪೈಕಿ ಸುಗ್ಗಿ ಮಾರಿಪೂಜೆಯು ಅತ್ಯಂತ ವಿಶೇಷವಾಗಿದೆ. ಈ ಸಂದರ್ಭದಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕಾಸರಗೋಡು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳು ಮಾತ್ರವಲ್ಲದೇ ದೂರದ ಮುಂಬಯಿ, ಪೂನಾ ಮೊದಲಾದ ಕಡೆಯಿಂದಲೂ ಲಕ್ಷಾಂತರ ಮಂದಿ ಭಕ್ತರು ಭಾಗವಹಿಸುತ್ತಾರೆ.

ಕಾಪುವಿನ ಮೂರು ಮಾರಿಗುಡಿಗಳ ಪರಿಸರದಲ್ಲಿ ಮತ್ತು ಕಾಪು ಪುರಸಭಾ ವ್ಯಾಪ್ತಿಯಲ್ಲಿ ಸ್ವತ್ಛತೆ ಕಾಪಾಡುವ ನಿಟ್ಟಿನಲ್ಲಿ ಕಾಪು ಪುರಸಭೆ ಕೂಡ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸುತ್ತಿದೆ. ಅದರೊಂದಿಗೆ 100ಕ್ಕೂ ಅಧಿಕ ಮಂದಿ ಪೊಲೀಸರು ಸುಗ್ಗಿ ಮಾರಿಪೂಜೆಗೆ ಬರುವ ಭಕ್ತರ ರಕ್ಷಣೆಗಾಗಿ ಕಾಪುವಿನಲ್ಲಿ ಠಿಕಾಣಿ ಹೂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next