Advertisement

“ಜಿಲ್ಲೆಯಲ್ಲಿ 58.02 ಕೋ.ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ’

01:27 AM Jun 20, 2019 | Sriram |

ಕಾಪು: ಚಂಡಮಾರುತ, ಮಳೆ ಅಥವಾ ಯಾವುದೇ ಪ್ರಾಕೃತಿಕ ವಿಕೋಪದಿಂದಾಗಿ ನಿರಾಶ್ರಿತರಾದವರಿಗಾಗಿ ತತ್‌ಕ್ಷಣ ಸುರಕ್ಷಿತ ತಾತ್ಕಾಲಿಕ ಪುನರ್‌ ವಸತಿ ಕಲ್ಪಿಸುವ ಉದ್ದೇಶದೊಂದಿಗೆ ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಯೋಜನೆಯಡಿ ವಿಶ್ವ ಬ್ಯಾಂಕ್‌ ನೆರವಿನೊಂದಿಗೆ ಕೇಂದ್ರ, ರಾಜ್ಯ ಸರಕಾರಗಳ ಜಂಟಿ ಸಂಯೋಜನೆಯಲ್ಲಿ ಉಡುಪಿ ಜಿಲ್ಲೆಯಲ್ಲಿ 58.02 ಕೋ. ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ ಹಾಕಲಾಗಿದೆ ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

Advertisement

ಅವರು ಜೂ. 18ರಂದು ಉಡುಪಿ ಜಿಲ್ಲಾಡಳಿತ, ಜಿ.ಪಂ., ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಉಡುಪಿ ಇವರ ವತಿಯಿಂದ ಕಾಪು ಪಡು ಸರಕಾರಿ ಉನ್ನತ ಪ್ರಾಥಮಿಕ ಶಾಲೆಯ ಬಳಿಯಲ್ಲಿ ನಿರ್ಮಾಣಗೊಂಡ ವಿವಿಧೋದ್ದೇಶ ಚಂಡಮಾರುತ ಆಶ್ರಯ ಕಟ್ಟಡ ಮತ್ತು ಹೆಜಮಾಡಿ ಕೋಡಿ ಮೀನುಗಾರಿಕಾ ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.

2 ಆಶ್ರಯತಾಣ, 15 ಕೊಂಡಿ
ರಸ್ತೆ ನಿರ್ಮಾಣ
ಕಾಪು ಸರಕಾರಿ ಹಿ.ಪ್ರಾ. ಶಾಲೆ ಮತ್ತು ತೆಕ್ಕಟ್ಟೆ ಕುವೆಂಪು ಸರಕಾರಿ ಹಿ. ಪ್ರಾ. ಶಾಲೆಯಲ್ಲಿ 5.05 ಕೋ. ರೂ. ವೆಚ್ಚದಲ್ಲಿ ಚಂಡಮಾರುತ ಆಶ್ರಯ ಕಟ್ಟಡ ನಿರ್ಮಿಸಲಾಗಿದೆ. ಇದರ ಜತೆಗೆ ಕಡಲ ತೀರದಿಂದ ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ 22.97 ಕೋ. ರೂ. ವೆಚ್ಚದಲ್ಲಿ 7 ಪ್ಯಾಕೇಜ್‌ನಡಿ 15 ಕಡಲ ತೀರ ಕೊಂಡಿ ರಸ್ತೆಗಳ ಅಭಿವೃದ್ಧಿ ಕಾರ್ಯ ವೇಗದಿಂದ ನಡೆಯುತ್ತಿದೆ. ಇದರಲ್ಲಿ ಕಾಪುವಿನ ಆಶ್ರಯತಾಣ ಕಟ್ಟಡ,6 ಪ್ಯಾಕೇಜ್‌ನ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ ಎಂದರು.

ಸಿಆರ್‌ಝಡ್‌, ಸಿಂಗಲ್‌
ಲೇಔಟ್‌ ಸಮಸ್ಯೆಗೆ ಮುಕ್ತಿ
ಕರಾವಳಿ ಜನರನ್ನು ಕಾಡುತ್ತಿರುವ ಸಿಆರ್‌ಝಡ್‌ ಕಾಯ್ದೆಯನ್ನು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಸರಕಾರ ಕರಡು ನೀತಿ ತಿದ್ದುಪಡಿ ಮಾಡಿದೆ. ಅದರಂತೆ ಈಗಿನ 200 ಮೀ. ವ್ಯಾಪ್ತಿಯನ್ನು 50 ಮೀ. ವ್ಯಾಪ್ತಿಯೊಳಗೆ ಕುಗ್ಗಿಸಿದ್ದು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ನಡೆಯಬೇಕಿದೆ. ಕಾಪು ಪುರಸಭೆ ವ್ಯಾಪ್ತಿಯ ಜನರನ್ನು ಕಾಡುತ್ತಿರುವ ಸಿಂಗಲ್‌ ಲೇಔಟ್‌ನ ತೊಂದರೆ ಪರಿಶೀಲಿಸಿ, ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಮಳೆ ವಿರಳವಾಗಿದ್ದು, ಕುಡಿಯುವ ನೀರಿನ ಬರ ಎದುರಾಗಿದೆ. ಈ ಸಮಸ್ಯೆ ಪರಿಹಾರಕ್ಕಾಗಿ ಟಾಸ್ಕ್ ಪೋರ್ಸ್‌ ಮಾದರಿಯಲ್ಲಿ ಕುಡಿಯುವ ನೀರು ಪೂರೈಸುವಂತೆ ಸಚಿವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವುದು ಸ್ವಾಗತಾರ್ಹ. ಅದೇ ರೀತಿಯಲ್ಲಿ ಕಾಪು ತಾಲೂಕಿನ ಜನತೆ ಸಿಆರ್‌ಝಡ್‌, ಸಿಂಗಲ್‌ ಲೇಔಟ್‌ ಸಮಸ್ಯೆ ಸಹಿತವಾಗಿ ಕಂದಾಯ ಇಲಾಖೆಗೆ ಸಂಬಂಧಿಸಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೂ ಸೂಕ್ತವಾಗಿ ಸ್ಪಂದಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.

Advertisement

ಉಡುಪಿ ಜಿ.ಪಂ. ಸದಸ್ಯರಾದ ಶಿಲ್ಪಾ ಜಿ. ಸುವರ್ಣ, ಗೀತಾಂಜಲಿ ಎಂ. ಸುವರ್ಣ, ವಿಲ್ಸನ್‌ ರೋಡ್ರಿಗಸ್‌, ಶಶಿಕಾಂತ್‌ ಪಡುಬಿದ್ರಿ, ಉಡುಪಿ ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌, ಪಲಿಮಾರು ಗ್ರಾ.ಪಂ. ಅಧ್ಯಕ್ಷ ಜಿತೇಂದ್ರ ಫ‌ುರ್ಟಾಡೊ, ತಾ.ಪಂ. ಸದಸ್ಯ ಶೇಖಬ್ಬ, ಪುರಸಭೆ ಮಾಜಿ ಉಪಾಧ್ಯಕ್ಷ ಕೆ. ಎಚ್‌. ಉಸ್ಮಾನ್‌, ಸಹಾಯಕ ಕಮಿಷನರ್‌ ಡಾ| ಮಧುಕೇಶ್ವರ್‌, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಗೋಕುಲ್‌ದಾಸ್‌, ಸಹಾಯಕ ಕಾರ್ಯಪಾಲಕ ಅಭಿಯಂತರ ಜಗದೀಶ್‌ ಭಟ್‌, ಅಸಿಸ್ಟೆಂಟ್‌ ಎಂಜಿನಿಯರ್‌ ಮಿಥುನ್‌ ಶೆಟ್ಟಿ, ಪುರಸಭೆ ಸದಸ್ಯರು, ವಿವಿಧ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಸ್ವಾಗತಿಸಿದರು. ಕಾಪು ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ವಂದಿಸಿದರು. ಎಲ್ಲೂರು ಗ್ರಾ.ಪಂ. ಕಾರ್ಯದರ್ಶಿ ಚಂದ್ರಶೇಖರ್‌ ಸಾಲ್ಯಾನ್‌ ಮಣಿಪುರ ನಿರೂಪಿಸಿದರು.

ಎರಡು ಸೇತುವೆಗಳ ಕಾಮಗಾರಿಗೆ ಶೀಘ್ರ ಚಾಲನೆ
ಹೆಚ್ಚುವರಿಯಾಗಿ ಮಣೂರು ಗೋದನಗುಂಡಿ ಹೊಳೆಗೆ ಸೇತುವೆ ಮತ್ತು ಕೂಡುರಸ್ತೆ ನಿರ್ಮಾಣಕ್ಕೆ 13.50 ಕೋ. ರೂ., ಕೋಡಿ ಕನ್ಯಾಣ ಕೆಳಗೇರಿ – ಸಾಲಿಗ್ರಾಮ ಸೇತುವೆ ಮತ್ತು ಕೂಡು ರಸ್ತೆ ನಿರ್ಮಾಣಕ್ಕೆ 16 ಕೋ. ರೂ. ಅನುದಾನ ಹಾಗೂ ಆಡಳಿತ ಅನುಮೋದನೆ ಸರಕಾರದ ಮುಂದಿದ್ದು, ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ದೇಶಪಾಂಡೆ ಹೇಳಿದರು.

ಉಡುಪಿಗೆ ಉಪ ವಿಭಾಗ, ಕಾಪುವಿಗೆ ಮಿನಿ ವಿಧಾನಸೌಧ
ಉಡುಪಿ ಜಿಲ್ಲೆ ವಿಸ್ತಾರವಾಗಿ ಬೆಳೆಯುತ್ತಿದ್ದು ಉಡುಪಿಗೆ ಪ್ರತ್ಯೇಕ ಉಪ ವಿಭಾಗ ರಚನೆಯಾಗಬೇಕೆಂಬ ಬೇಡಿಕೆ ಸರಕಾರದ ಮುಂದಿದೆ. ಈ ಬಗ್ಗೆ ಜನಪ್ರತಿನಿಧಿಗಳಿಂದಲೂ ಒತ್ತಡವಿದ್ದು ಅತಿ ಶೀಘ್ರ ಉಡುಪಿಗೆ ಉಪವಿಭಾಗ ಕಚೆೇರಿ ಹಾಗೂ ಅದಕ್ಕೆ ಬೇಕಾಗುವ ಸಮಗ್ರ ವ್ಯವಸ್ಥೆ ಮಂಜೂರುಗೊಳಿಸಲು ಪ್ರಯತ್ನಿಸಲಾಗುವುದು. ಕಾಪು ತಾಲೂಕಿಗೆ ಮಂಜೂರಾಗಿರುವ ಮಿನಿ ವಿಧಾನಸೌಧ ರಚನೆಗೆ ಶೀಘ್ರ 10 ಕೋ. ರೂ. ಅನುದಾನ ಬಿಡುಗಡೆಗೊಳಿಸುವುದಾಗಿ ಸಚಿವ ದೇಶಪಾಂಡೆ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next