ಕಾಪು: ಉಡುಪಿಯಿಂದ ಪಲಿಮಾರಿಗೆ ಹೋಗುತ್ತಿದ್ದ ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದವರಿಗೆ ಹಲ್ಲೆ ನಡೆಸಿ ಕಾರಿಗೆ ಹಾನಿಯುಂಟು ಮಾಡಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೊಪ್ಪಲಂಗಡಿಯಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ.
ಪಲಿಮಾರು ನಿವಾಸಿ ಗಣೇಶ ಪ್ರಸಾದ್ ಅವರು ತನ್ನ ಸ್ನೇಹಿತರಾದ ನಿತಿನ್ ಮತ್ತು ಜಿತೇಶ್ ಎಂಬವರೊಂದಿಗೆ ಕಾರಿನಲ್ಲಿ ಉಡುಪಿಗೆ ಹೋಗಿ ಕೆಲಸ ಮುಗಿಸಿ ರಾತ್ರಿ ವಾಪಸ್ಸು ಪಲಿಮಾರಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಕಾಪು ಫ್ಲೈಓವರ್ ಬಳಿ ತೆರಳುತ್ತಿದ್ದ ಗಣೇಶ್ ಪ್ರಸಾದ್ ಅವರ ಕಾರಿನ ಎದುರುಗಡೆ ಹೋಗುತ್ತಿದ್ದ ಮಾರುತಿ ಎರ್ಟಿಗಾ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಆತಂಕವುಂಟು ಮಾಡಿದ್ದರು. ಆ ಕಾರನ್ನು ಹಿಂದಿಕ್ಕಿ ಮುಂದೆ ಹೋದ ಕಾರು ಕೊಪ್ಪಲಂಗಡಿ ತಲುಪುವಾಗ ಮತ್ತೆ ಎರ್ಟಿಗಾ ಕಾರಿನಲ್ಲಿದ್ದವರು ಕಾರನ್ನು ಎಡಗಡೆಯಿಂದ ಓವರ್ ಟೇಕ್ ಮಾಡಿಕೊಂಡು ಬಂದು ಮುಂದೆ ಕಾರು ಮುಂದೆ ಹೋಗದಂತೆ ಎದುರುಗಡೆ ತಂದು ತಡೆದಿದ್ದರು.
ಈ ವೇಳೆ ಗಣೇಶ್ ಪ್ರಸಾದ್ ಅವರ ಕಾರನ್ನು ಚಲಾಯಿಸುತ್ತಿದ್ದ ನಿತಿನ್ ಕಾರನ್ನು ರಸ್ತೆ ಬದಿ ನಿಲ್ಲಿಸಿದಾಗ ಎರ್ಟಿಗಾ ಕಾರನ್ನು ಕೂಡ ಅದರ ಚಾಲಕ ನಿಲ್ಲಿಸಿ, ಕಾರಿನಿಂದ ಇಳಿದು ಬಂದ 25-30 ಪ್ರಾಯದ 4 ಮಂದಿ ಅವಾಚ್ಯ ಶಬ್ದಗಳಿಂದ ಬೆ„ಯುತ್ತಾ ಗಣೇಶ್ ಪ್ರಸಾದ್ ಮತ್ತು ಅವರ ಸ್ನೇಹಿತರ ಮೈಗೆ ಕೈ ಹಾಕಿ ತಳ್ಳಾಡಿದ್ದರು. ಬಳಿಕ ಮೂರು ಮಂದಿ ಅವರ ಕಾರಿನ ಬಳಿ ಹೋಗಿ ಕಾರಿನಲ್ಲಿದ್ದ ತಲವಾರು, ಕಬ್ಬಿಣದ ರಾಡು ಮತ್ತು ಮತ್ತು ವ್ಹೀಲ್ ಬಾಕ್ಸ್ ರಾಡ್‌ನ್ನು ಹಿಡಿದುಕೊಂಡು ಬಂದು ಕಬ್ಬಿಣದ ರಾಡ್ ಹಿಡಿದುಕೊಂಡು ಬಂದು ಬೀಸಿದ್ದು ಅದು ನಿತಿನ್ ಅವರ ಬಲತೊಡೆಗೆ ತಾಗಿ ನೋವಾಗಿತ್ತು.
ಘಟನೆಯಿಂದ ಹೆದರಿದ ಗಣೇಶ್ ಪ್ರಸಾದ್ ಮತ್ತು ಅವರ ಸ್ನೇಹಿತರು ಕಾರಿನ ಒಳಗೆ ಲಾಕ್ ಮಾಡಿಕೊಂಡು ಕುಳಿತಿದ್ದು ಅಲ್ಲಿಗೆ ಬಂದ ನಾಲ್ಕು ಜನ ಆರೋಪಿಗಳು ಕೈಯಿಂದ ಮತ್ತು ಅವರ ಕೈಯಲ್ಲಿದ್ದ ಆಯುಧಗಳಿಂದ ಕಾರಿಗೆ ಹೊಡೆದು ಎದುರುಗಡೆ ಗ್ಲಾಸ್, ಕಿಟಕಿ ಗ್ಲಾಸ್, ಬಾಡಿ ಇತ್ಯಾದಿ ಜಖಂಗೊಳಿಸಿ ಕಾರಿನಿಂದ ಇಳಿಯಿರಿ, ನಿಮ್ಮನ್ನು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ನಂತರ ಅವರ ಆಯುಧಗಳ ಸಮೇತ ಅವರ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಯುವಕರ ಪುಂಟಾಟಿಕೆಗೆ ಕಾರು ಜಖಂಗೊಂಡಿದ್ದು ಒಂದು ಲಕ್ಷ ರೂ. ವರೆಗೆ ನಷ್ಟ ಉಂಟಾಗಿದೆ ಎಂದು ಗಣೇಶ್ ಪ್ರಸಾದ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.