ಕಾಪು: ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಕಾಪು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಪು ಪಡು ಮತ್ತು ದಿ. ಆರ್.ಡಿ. ಮೆಂಡನ್ ಕಾಪು ಸ್ಮರಣಾರ್ಥ ಜನ್ಮ ಶತಮಾನೋತ್ಸವ ಆಚರಣಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್16, 17 ಮತ್ತು 18 ರಂದು ಕಾಪು ಬೀಚ್ ನಲ್ಲಿ ಕಡಲ ಐಸಿರ ಬೀಚ್ ಫೆಸ್ಟ್ – 2022 ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ, ಶಾಸಕ ಲಾಲಾಜಿ ಆರ್. ಮೆಂಡನ್ ತಿಳಿಸಿದರು.
ಮಂಗಳವಾರ ಕಾಪು ಬೀಚ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಡಲ ಐಸಿರ ಕಾರ್ಯಕ್ರಮದ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ, ನೂತನ ಶಾಲಾ ವಾಹನ ಖರೀದಿ, ಸಂಸ್ಥೆಗೆ ನೂತನ ಕಟ್ಟಡ ನಿರ್ಮಾಣ ಹಾಗೂ ಇತರ ಸಮಾಜ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಡಿ. 16 ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶಾಲಾ ವಾರ್ಷಿಕೋತ್ಸವ ನಡೆಯಲಿದೆ. ಡಿ.17 ರಂದು ರಾಜ್ಯ ಮಟ್ಟದ ಸಮೂಹ ನೃತ್ಯ ಸ್ಪರ್ಧೆ, ಫಲಪುಷ್ಪ ಕಲಾ ಸ್ಪರ್ಧೆ, ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಚಿತ್ರ ಬಿಡಿಸುವ ಸ್ವರ್ಧೆ, ಬಲೆ ಬೀಸಿ ಮೀನು ಹಿಡಿಯುವುದು, ಗಾಳ ಹಾಕಿ ಮೀನು ಹಿಡಿಯುವುದು, ಮಹಿಳೆಯರಿಗಾಗಿ ಸಂಗೀತ ಕುರ್ಚಿ, ಬಾಳೆ ಹಣ್ಣು ತಿನ್ನುವುದು, ಬಾಟಲ್ ಬ್ಯಾಲೆನ್ಸ್ ಸ್ಪರ್ಧೆ ಮತ್ತು ತ್ರೋಬಾಲ್ ಪಂದ್ಯಾಟ ನಡೆಯಲಿದೆ.
ಡಿ. 18 ರಂದು ಚೆಂಡೆ ಸ್ಪರ್ಧೆ, ಬೀಚ್ ವಾಲಿಬಾಲ್ ಸ್ಪರ್ಧೆ, ಕೊಳಲು ಮತ್ತು ತಬಲ ತಂಡ ಸ್ಪರ್ಧೆ, ಶ್ವಾನ ಸ್ಪರ್ಧೆ, ಈಜು ಸ್ಪರ್ಧೆ, ಮರಳಿನಲ್ಲಿ ಕಲಾಕೃತಿ, ಹುಟ್ಟು ದೋಣಿ ಸ್ಪರ್ಧೆ, ಗಾಳಿ ಪಟ ಸ್ಪರ್ಧೆ ಮತ್ತು ಪ್ರದರ್ಶನ ನಡೆಯಲಿದೆ.
ವಿಶೇಷ ಆಕರ್ಷಣೆಯಾಗಿ ಕರಾವಳಿ ಶೈಲಿಯ ಪುಡ್ ಪೆಸ್ಟಿವಲ್, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಲಾವಿದರಿಂದ ಸಂಗೀತ ರಸಮಂಜರಿ, ವೈಶಿಷ್ಡ್ಯ ಪೂರ್ಣವಾಗಿ ಕಾಪು ದೀಪಸ್ತಂಭದ ಆವರಣದಲ್ಲಿ ಲೇಸರ್ ಶೋ, ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಲಿದೆ.
ಕಾಪು ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ನ ಅಧ್ಯಕ್ಷ ಶೀಲರಾಜ್ ಪುತ್ರನ್, ಉಪಾಧ್ಯಕ್ಷ ಆನಂದ ಶ್ರೀಯಾನ್, ಪ್ರಧಾನ ಕಾರ್ಯದರ್ಶಿ ಸಚಿನ್ ಪುತ್ರನ್, ಪದಾಧಿಕಾರಿಗಳಾದ ಸುಜಿತ್ ಸುವರ್ಣ, ಉದಯ ಶಂಕರ್, ಮಧುಕರ್ ಎಸ್., ನವೀನ್ ಅಮೀನ್, ದಿನೇಶ್ ಸುವರ್ಣ, ಲಾಲಾಜಿ ಪುತ್ರನ್, ರಾಜೇಶ್ ಸುವರ್ಣ, ನಿತೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.