Advertisement

Kapu 15 ಎಕ್ರೆಯ ಕಟ್ಟಿಂಗೇರಿ ಕೆರೆಯೀಗ ಬಟಾಬಯಲು!

01:30 AM May 30, 2024 | Team Udayavani |

ಕಾಪು: ಮೊದಲೆಲ್ಲ ವರ್ಷಪೂರ್ತಿ ತುಂಬಿ ತುಳುಕುತ್ತ ಪರಿಸರದಲ್ಲಿ ಹೇರಳ ಜಲಸಂಪನ್ಮೂಲ ವೃದ್ಧಿಗೆ ಕಾರಣವಾಗುತ್ತಿದ್ದ ಉಚ್ಚಿಲ ಬಡಾ ಗ್ರಾಮದ ಕಟ್ಟಿಂಗೇರಿ ಕೆರೆಯು ಇಂದು ಕೆೆರೆಯೋ ಆಟದ ಮೈದಾನವೋ ಎಂದು ಗುರುತಿಸಲಾಗದಷ್ಟು ಸೊರಗಿದೆ.

Advertisement

ದಾಖಲೆಯ ಪ್ರಕಾರ ಉಚ್ಚಿಲ ಬಡಾ ಗ್ರಾ.ಪಂ. ವ್ಯಾಪ್ತಿಯಲ್ಲಿರುವ 15 ಎಕರೆ ವಿಸ್ತೀರ್ಣದ ಕಟ್ಟಿಂಗೇರಿ ಕೆರೆಗೆ ಜಿಲ್ಲೆ ಮತ್ತು ತಾಲೂಕಿನ ಅತೀ ದೊಡ್ಡ ಕೆರೆಯೆಂಬ ಹೆಗ್ಗಳಿಕೆಯಿತ್ತು. ಆದರೆ ಪ್ರಸ್ತುತ ಮಳೆಗಾಲದಲ್ಲಿ ಮಾತ್ರ ಇಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಇರುತ್ತದೆ. ಈ ಕೆರೆಯು ಪುನರುಜ್ಜೀವನಗೊಂಡರೆ ಬಡಾ ಗ್ರಾಮ ಮಾತ್ರವಲ್ಲದೇ ಸುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಬಹುದಾಗಿದೆ.

ಮೂರೂ ಬೆಳೆಗೆ ನೀರಿತ್ತು
ಮಳೆಗಾಲದಲ್ಲಿ ಇಲ್ಲಿ ನೀರು ಸಂಗ್ರಹವಾದರೆ ಉಚ್ಚಿಲ, ಪೊಲ್ಯ, ಎರ್ಮಾಳು, ಕುಂಜೂರು, ಅದಮಾರು, ಬೆಳಪು, ಮೂಳೂರು ಸಹಿತ ಸುತ್ತಲಿನ ಹಲವು ಗ್ರಾಮಗಳಲ್ಲಿ ವರ್ಷಪೂರ್ತಿ ನೀರಿನ ಒರತೆ ಹೆಚ್ಚಾಗುತ್ತಿತ್ತು. ಸುತ್ತಲಿನ ಸಾವಿರಾರು ಎಕರೆ ಕೃಷಿ ಭೂಮಿ ಹಚ್ಚ ಹಸುರಿನಿಂದ ಕಂಗೊಳಿಸಿ, ಭತ್ತದ ಕೃಷಿಯನ್ನೇ ಅವಲಂಬಿಸಿರುವ ಕೃಷಿಕರಿಗೆ ಕಾರ್ತಿ, ಸುಗ್ಗಿ ಮತ್ತು ಕೊಳಕೆ ಮೂರು ಬೆಳೆಗಳನ್ನು ಬೆಳೆಸಲು ಹೇರಳ ನೀರು ಸಿಗಲಿದೆ.

ಅರ್ಧಕ್ಕೆ ನಿಂತ ಕಾಮಗಾರಿ
ಹಿಂದೊಮ್ಮೆ ನರೇಗಾದಲ್ಲಿ ತಡೆಗೋಡೆ ಕಟ್ಟುವ ಕೆಲಸ ನಡೆದಿದೆಯಾದರೂ ಅದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿತ್ತು. ಆ ಬಳಿಕ ಸಣ್ಣ ನೀರಾವರಿ ಇಲಾಖೆಯ ಮೂಲಕ ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದು ಹೂಳೆತ್ತಿ, ಮಳೆ ನೀರು ಸರಾಗವಾಗಿ ಹರಿದು ಬರಲು ಪೂರಕವಾಗಿ ತೋಡು ಬಿಡಿಸುವ ಕೆಲಸ ಆರಂಭಗೊಂಡಿದ್ದರೂ ಅದು ಕೂಡ ಕೊನೆ ಮುಟ್ಟಿಲ್ಲ.

ಒತ್ತುವರಿಗೆ ಪ್ರಯತ್ನ
ಕೆಲವು ದಶಕಗಳ ಹಿಂದೆ ಕಟ್ಟಿಂಗೇರಿ ಕೆರೆಯ ಪಕ್ಕದಲ್ಲಿ ಕಾಲನಿ ನಿರ್ಮಿಸಿ ಕೊಡುವ ಪ್ರಯತ್ನ ನಡೆದಿತ್ತು. ಆದರೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿ ಒತ್ತುವರಿಯನ್ನು ಕೈಬಿಡಲಾಗಿತ್ತು. ದಶಕಗಳ ಹಿಂದೆ ವ್ಯಕ್ತಿಯೋರ್ವರು ಕಟ್ಟಿಂಗೇರಿ ಕೆರೆ ಮತ್ತು ಪೋಂಕ್ರಡು³ ನಡುವಿನ ತೋಡನ್ನು ಮುಚ್ಚಿ ಅತಿಕ್ರಮಿಸುವ ಪ್ರಯತ್ನಕ್ಕೂ ಕೈ ಹಾಕಿದ್ದರು. ಮತ್ತೆ ಹೋರಾಟ ನಡೆದು ತಡೆಯೊಡ್ಡಲಾಗಿತ್ತು. ಆದರೂ 15 ಎಕ್ರೆ ವಿಸ್ತೀರ್ಣದ ಕಟ್ಟಿಂಗೇರಿ ಕೆರೆಯು 11 ಎಕ್ರೆಗೆ ತನ್ನ ಗಾತ್ರವನ್ನು ಕುಗ್ಗಿಸಿಕೊಂಡಿದೆ ಎನ್ನುತ್ತಾರೆ ಸ್ಥಳೀಯರು.

Advertisement

ಮದುವೆಗೆ ಬಂಗಾರ ನೀಡುತ್ತಿದ್ದ ಕೆರೆ !
ಹಿಂದಿನ ಕಾಲದಲ್ಲಿ ಕಟ್ಟಿಂಗೇರಿ ಕೆರೆಯಲ್ಲಿ ಮದುಮಗಳಿಗೆ ಮದುವೆಗೆ ಬೇಕಾಗುವ ಬಂಗಾರ ಸಿಗುತ್ತಿತ್ತೆೆಂಬ ಪ್ರತೀತಿಯಿದೆ. ಮದುವೆಯ ಮುನ್ನಾದಿನ ಪ್ರಾರ್ಥಿಸಿ ಹರಿವಾಣದಲ್ಲಿ ಹೂ ಹಿಂಗಾರ ಇಟ್ಟು ಹೋದಲ್ಲಿ ಮರುದಿನ ಬೆಳಗ್ಗೆ ಬಂದು ನೋಡುವಾಗ ಹರಿವಾಣದಲ್ಲಿ ಬಂಗಾರ ಇರುತ್ತಿತ್ತು. ಮದುವೆ ಮುಗಿಸಿ ಸಂಜೆ ಬಂಗಾರವನ್ನು ಮರಳಿಸಬೇಕಿತ್ತು. ಆದರೆ ಯಾರಿಂದಲೋ ವಂಚನೆಯಾದ ಹಿನ್ನೆಲೆಯಲ್ಲಿ ಬಂಗಾರ ಸಿಗುವುದು ನಿಂತು ಹೋಗಿದೆ ಎಂಬ ಕಥೆಯನ್ನು ಗ್ರಾ.ಪಂ. ಮಾಜಿ ಸದಸ್ಯ ಸುಧಾಕರ್‌ ಚೌಟ ಹಿರಿಯರು ನೆನಪಿಸಿಕೊಳ್ಳುತ್ತಾರೆ.

ಸ್ಪಂದಿಸದ ಇಲಾಖೆ!
ಕಟ್ಟಿಂಗೇರಿ ಕೆರೆ ಅಭಿವೃದ್ಧಿಯಾದರೆ ಕಾಪು ತಾಲೂಕಿಗೇ ನೀರು ಸರಬರಾಜು ಸಾಧ್ಯವಿದೆ. ಕೆರೆ ಅಭಿವೃದ್ಧಿ ಬಗ್ಗೆ ಸಣ್ಣ ನೀರಾವರಿ ಇಲಾಖೆ, ತಾಲೂಕು ಆಡಳಿತ, ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರಕ್ಕೂ ಪತ್ರ ಬರೆದು ಮನವಿ ಮಾಡಿದ್ದೇವೆ. ಒತ್ತುವರಿ ತೆರವಿಗೆ ತಾಲೂಕು ಆಡಳಿತಕ್ಕೂ ಹಿಂದೆಯೇ ಪತ್ರ ಬರೆದಿದ್ದೇವೆ. ಅದಕ್ಕೂ ಸ್ಪಂದನೆಯಿಲ್ಲ.
– ಶಿವಕುಮಾರ್‌ ಮೆಂಡನ್‌,
ಅಧ್ಯಕ್ಷ, ಬಡಾ ಗ್ರಾ.ಪಂ.

ಅತಿಕ್ರಮಣಕ್ಕೆ ಹೊಂಚು
ಕಟ್ಟಿಂಗೇರಿ ಕೆರೆ ನಿರ್ವಹಣೆಯಿಲ್ಲದೆ ಸೊರಗಿದೆ. 2017ರಲ್ಲಿ ಅತಿಕ್ರಮಣ ತಡೆಯಲು ಹೋರಾಟಗಾರರಿಗೆ ರಕ್ಷಣೆ ನೀಡುವಂತೆ ಗ್ರಾ.ಪಂ.ನಿಂದ ಜಿ.ಪಂ., ಶಾಸಕರು, ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಪೊಲೀಸ್‌ ಇಲಾಖೆಯ ಕದವನ್ನೂ ತಟ್ಟಿದ್ದೇವೆ. ಹಾಗಾಗಿ ಕಟ್ಟಿಂಗೇರಿ ಕೆರೆ ಉಳಿದಿದೆ.
– ಯಶೋಧರ ಶೆಟ್ಟಿ ಎರ್ಮಾಳು ಬಗ್ಗೇಡಿಗುತ್ತು, ಕಟ್ಟಿಂಗೇರಿ ಕೆರೆ ರಕ್ಷಣೆ ಸಮಿತಿ

-ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next