Advertisement

ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ: ರಮಾನಾಥ ರೈ

03:45 AM Feb 09, 2017 | |

ವಿಧಾನ ಪರಿಷತ್‌: ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ಮೀಸಲು ಅರಣ್ಯಕ್ಕೆ ಕಾಯ್ದಿರಿಸಲು ಉದ್ದೇಶಿಸಿರುವ ಪ್ರದೇಶದಲ್ಲಿ ಗಣಿಗಾರಿಕೆ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

Advertisement

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ವಿ.ಎಸ್‌. ಉಗ್ರಪ್ಪ ಪ್ರಶ್ನೆಗೆ ಉತ್ತರಿಸಿದ ಅವರು, ಗಣಿಗಾರಿಕೆಗೆ ಅಲ್ಲಿ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ಮೀಸಲು ಅರಣ್ಯವಾಗಿ ಕಾಯ್ದಿರಿಸುವ ಸಂಬಂಧ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ವರದಿ ಬಂದ ನಂತರ ವನ್ಯಜೀವಿ ಮಂಡಳಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

“ಈ ಹಿಂದೆ ವನ್ಯಜೀವಿಧಾಮವೆಂದು ಘೋಷಿಸಲು 2011ರಲ್ಲೇ ನಿರ್ಧಾರ ಕೈಗೊಂಡಿದ್ದರೂ ಹಿಂದಿನ ಸರ್ಕಾರ ಘೋಷಣೆ ಮಾಡಿರಲಿಲ್ಲ. ಆದರೆ ನಮ್ಮ ಸರ್ಕಾರ ಮೀಸಲು ಅರಣ್ಯವೆಂದು ಘೋಷಿಸಿತ್ತು’ ಎಂದು ತಿಳಿಸಿದರು.

ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಉಗ್ರಪ್ಪ, “ಸಚಿವರಿಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿದಂತಿಲ್ಲ. ಒಟ್ಟು 32,093 ಹೆಕ್ಟೇರ್‌ ಪ್ರದೇಶದಲ್ಲಿ 17,872 ಹೆಕ್ಟೇರ್‌ ಪ್ರದೇಶವನ್ನು ಮೀಸಲು ಅರಣ್ಯ ಎಂದು 2015ರಲ್ಲಿ ಗುರುತಿಸಲಾಗಿದೆ. ಒಂದೆಡೆ ಈ ಪ್ರದೇಶದಲ್ಲಿ 639 ಮಂದಿ 765 ಹೆಕ್ಟೇರ್‌ ಒತ್ತುವರಿ ಮಾಡಿಕೊಂಡಿದ್ದಾರೆ ಎಂದಿದ್ದರೆ, ಇನ್ನೊಂದೆಡೆ 1001 ಹೆಕ್ಟೇರ್‌ ಒತ್ತುವರಿಯಾಗಿದೆ ಎಂಬ ಮಾಹಿತಿ ಇದೆ. ಆದರೆ ಮೀಸಲು ಅರಣ್ಯವೆಂದು ಘೋಷಿಸಿದ್ದ ಆದೇಶವನ್ನು 2016ರ ನ.4ರಂದು ಹಿಂಪಡೆದಿರುವುದು ಸರಿಯಲ್ಲ. ರಾಜಕೀಯ ಪ್ರಭಾವಕ್ಕೆ ಮಣಿದು ಗಣಿಗಾರಿಕೆ ಚಟುವಟಿಕೆಗೆ ಭೂಮಿ ಕೊಡುತ್ತೀರಾ’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ರಮಾನಾಥ ರೈ, “ಗಣಿಗಾರಿಕೆ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ. 2011ರ ಜುಲೈನಲ್ಲಿ ರಾಜ್ಯ ವನ್ಯಜೀವಿ ಮಂಡಳಿ ತೀರ್ಮಾನದಂತೆ ವನ್ಯಜೀವಿ ಧಾಮ ಮಾಡಲು ತೀರ್ಮಾನಿಸಲಾಗಿತ್ತು. ಬಳಿಕ ಮಂಡಳಿ ಸೂಚನೆಯಂತೆ ಸಾರ್ವಜನಿಕ ಅಭಿಪ್ರಾಯವನ್ನೂ ಪಡೆದು ಘೋಷಣೆಯಷ್ಟೇ ಬಾಕಿ ಉಳಿದಿತ್ತು. ಈ ನಡುವೆ ವನ್ಯಜೀವಿ ಧಾಮವನ್ನಾಗಿ ಅಭಿವೃದ್ಧಿಪಡಿಸಿದರೆ ಆ ಪ್ರದೇಶದಲ್ಲಿ ನೆಲೆಸಿದವರನ್ನು ತೆರವುಗೊಳಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಅನಿವಾರ್ಯವಾಗಿತ್ತು’ ಎಂದರು.

Advertisement

“ಈ ನಡುವೆ 2014-15ರಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಪರಿಶೀಲನೆ ನಡೆಸಿದ ಬಳಿಕ ವನ್ಯಜೀವಿಧಾಮಕ್ಕೆ ಬದಲಾಗಿ ಮೀಸಲು ಅರಣ್ಯವಾಗಿ ಕಾಯ್ದಿರಿಸಲು ನಿರ್ಧರಿಸಲಾಯಿತು. ಅದರಂತೆ 2015ರ ಡಿ.19ರಂದು ಮೀಸಲು ಅರಣ್ಯವೆಂದು ಘೋಷಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ರಾಜ್ಯ ವನ್ಯಜೀವಿ ಮಂಡಳಿ ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕೆಂದು ಸೂಚಿಸಿದ ಹಿನ್ನೆಲೆಯಲ್ಲಿ 2016ರ ನ.4ರಂದು ಆದೇಶ ಹಿಂಪಡೆದು ಕಳೆದ ಜ.16ರಂದು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗಿದೆ’ ಎಂದು ಸದನಕ್ಕೆ ವಿವರ ನೀಡಿದರು.

ಬಿಜೆಪಿಯ ಎಸ್‌.ವಿ. ಸಂಕನೂರ, “ಕಪ್ಪತಗುಡ್ಡವನ್ನು ಹಿಂದೆಯೇ ಮೀಸಲು ಅರಣ್ಯವೆಂದು ಘೋಷಿಸಲಾಗಿತ್ತು. ಒತ್ತಡ ಬಂದ ಹಿನ್ನೆಲೆಯಲ್ಲಿ ಆದೇಶ ಹಿಂಪಡೆದಂತಿದೆ. ಈ ಹಿಂದೆಯೇ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಫೆ.12, 13, 14ರಂದು ಹಲವು ಮಠಾಧಿಪತಿಗಳು ಸ್ಥಳೀಯ ಹೋರಾಟಗಾರರು ಅಹೋರಾತ್ರಿ ಧರಣಿಗೆ ಮುಂದಾಗಿದ್ದು, ಕೂಡಲೇ ಇತ್ತ ಗಮನ ಹರಿಸಬೇಕು’ ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next