Advertisement
ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಜೈಪುರದ ಎಸ್‌ಎಂಎಸ್ ವೈದ್ಯಕೀಯ ಕಾಲೇಜು, ದಿಲ್ಲಿ ಲ್ಯಾಬ್ ಮತ್ತು ಪುಣೆಯ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಜೀನೋಮ್‌ಗೆ ಕಳುಹಿಸಲಾಗಿದ್ದ 174 ಮಾದರಿಗಳಲ್ಲಿ 166 ಮಾದರಿಗಳು ಡೆಲ್ಟಾ ರೂಪಾಂತರಿ ಮತ್ತು 5 ಕಪ್ಪಾ ರೂಪಾಂತರಿ ವೈರಸ್ ಎಂಬುದು ದೃಢಪಟ್ಟಿದೆ. ಅಲ್ಲದೆ ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದ್ದ 109 ಮಾದರಿಗಳಲ್ಲಿ 107 ಡೆಲ್ಟಾ ಪ್ಲಸ್ ಮತ್ತು 2 ಮಾದರಿಗಳು ಕಪ್ಪಾ ರೂಪಾಂತರಿಗಳೆಂದು ಕಂಡು ಬಂದಿವೆ.
ಈಗಾಗಲೇ ದೇಶದಲ್ಲಿ ಎರಡನೇ ಅಲೆಯ ವೇಳೆ ಜನರನ್ನು ತೀವ್ರವಾಗಿ ಬಾಧಿಸಿದ ಡೆಲ್ಟಾ ವೈರಸ್‌ನಂತೆ ಕಪ್ಪಾ ಕೂಡ ಕೊರೊನಾ ವೈರಸ್‌ನ ದ್ವಿ ರೂಪಾಂತರಿಯಾಗಿದೆ, ಈ ವೈರಸ್ ಎರಡು ಬಾರಿ ಮಾರ್ಪಾಡು ಕಂಡಿದ್ದು ಇದನ್ನು ಬಿ.1.617.1 ಎಂದೂ ಕರೆಯಲಾಗುತ್ತದೆ. E484Q ಮತ್ತು L453R ಈ ವೈರಸ್‌ನ ಎರಡು ರೂಪಾಂತರಿಗಳಾಗಿವೆ. ಇದು ಕೊರೊನಾದ ಹೊಸ ರೂಪಾಂತರಿಯೇನಲ್ಲ. ಡಬ್ಲ್ಯುಎಚ್‌ಒ ಪ್ರಕಾರ ಕಪ್ಪಾ ರೂಪಾಂತರಿ ವೈರಸ್ ಭಾರತದಲ್ಲಿ 2020ರ ಅಕ್ಟೋಬರ್‌ನಲ್ಲಿ ಡೆಲ್ಟಾ ರೂಪಾಂತರಿಯ ಜತೆಯಲ್ಲಿಯೇ ಪತ್ತೆಯಾಗಿತ್ತು. ಈ ರೂಪಾಂತರಿಯ ಆನುವಂಶಿಕ ಬದಲಾವಣೆಯ ಬಗೆಗೆ ಅರಿವಿರುವುದರಿಂದ ಇದು ಅಷ್ಟೇನೂ ಅಪಾಯಕಾರಿಯಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದು ಕೊರೊನಾ ವೈರಸ್‌ನ ಇತರ ರೂಪಾಂತರಿಯಂತೆ ಸಹಜವಾಗಿದ್ದು ಈ ವೈರಸ್‌ನ ಹರಡುವಿಕೆಯ ತೀವ್ರತೆ, ಅದು ಮಾನವನ ದೇಹದ ಮೇಲೆ ಬೀರಬಹುದಾದ ಪರಿಣಾಮ ಇತ್ಯಾದಿಗಳ ಬಗ್ಗೆ ಸ್ಪಷ್ಟತೆ ಇರುವುದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಜನತೆಗೆ ವೈದ್ಯರು ಧೈರ್ಯ ತುಂಬಿದ್ದಾರೆ. ಆದರೆ ಈ ರೂಪಾಂತರಿ ವೈರಸ್ ಈಗಾಗಲೇ ಅನೇಕ ದೇಶಗಳಲ್ಲಿ ಪತ್ತೆಯಾಗಿದ್ದು ಸಮುದಾಯವನ್ನು ವ್ಯಾಪಿಸುವ ಸಾಧ್ಯತೆಗಳಿವೆಯಾದರೂ ಈ ಸೋಂಕು ತಗಲಿದವರು ಸೂಕ್ತ ಚಿಕಿತ್ಸೆ ಪಡೆದುಕೊಂಡದ್ದೇ ಆದಲ್ಲಿ ಶೀಘ್ರ ಗುಣಮುಖರಾಗಲು ಸಾಧ್ಯ. ಕೊರೊನಾ ನಿರೋಧಕ ಲಸಿಕೆಗಳು ಪರಿಣಾಮಕಾರಿಯೇ?
ಕಪ್ಪಾ ರೂಪಾಂತರಿ ವೈರಸ್ ಮಾನವ ದೇಹದಲ್ಲಿರುವ ರೋಗನಿರೋಧಕ ಶಕ್ತಿಯನ್ನು ಹಾನಿಗೊಳಿಸುತ್ತದೆ ಎಂದು ಹೇಳಲಾಗುತ್ತಿದೆಯಾದರೂ ಇದಕ್ಕೆ ಬಲವಾದ ಸಾಕ್ಷ್ಯಾಧಾರಗಳಿಲ್ಲ. ಆದರೆ ಕಪ್ಪಾ ರೂಪಾಂತರಿ ವಿರುದ್ಧ ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಐಸಿಎಂಆರ್ ಹೇಳಿದೆ. ಮತ್ತೂಂದೆಡೆ ಆಕ್ಸ್‌ಫರ್ಡ್ ವಿವಿ ನಡೆಸಿದ ಅಧ್ಯಯನದ ಪ್ರಕಾರ ಕೊವಿಶೀಲ್ಡ್ ಕೂಡ ಕಪ್ಪಾ ರೂಪಾಂತರಿಯಿಂದ ರಕ್ಷಣೆ ನೀಡುತ್ತದೆ. ಪ್ರಸ್ತುತ ಭಾರತದ ಹೆಚ್ಚಿನ ಜನರಿಗೆ ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆಯನ್ನು ನೀಡಲಾಗುತ್ತಿದೆ ಎಂಬುದು ಇಲ್ಲಿ ಗಮನಾರ್ಹ. ಕೆಲವೊಂದು ವೈದ್ಯಕೀಯ ಸಂಶೋಧನೆಗಳು ಮತ್ತು ಅಧ್ಯಯನದ ಪ್ರಕಾರ ಕೊರೊನಾ ಲಸಿಕೆಯ ಒಂದು ಡೋಸ್ ಸಾಮಾನ್ಯವಾಗಿ ಅಲ್ಫಾ ಮತ್ತು ಡೆಲ್ಟಾ ರೂಪಾಂತರಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಒಂದು ಡೋಸ್ ಲಸಿಕೆ ತೆಗೆದುಕೊಂಡವರ ಪೈಕಿ ಕೇವಲ ಶೇ.10ರಷ್ಟು ಮಂದಿಗೆ ಮಾತ್ರ ಈ ರೂಪಾಂತರಿಗಳನ್ನು ತಡೆದುಕೊಳ್ಳಲು ಸಾಧ್ಯವಾಗಿದ್ದರೆ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದವರ ಪೈಕಿ ಶೇ. 95ರಷ್ಟು ಮಂದಿ ಡೆಲ್ಟಾ ಮತ್ತು ಬೀಟಾ ವೈರಸ್‌ಗಳಿಂದ ರಕ್ಷಣೆಯನ್ನು ಪಡೆದುಕೊಂಡಿದ್ದಾರೆ. ಕಪ್ಪಾ ರೂಪಾಂತರಿ ಕೂಡ ಡೆಲ್ಟಾದಂತೆ ದ್ವಿ ರೂಪಾಂತರಿ ವೈರಸ್ ಆಗಿರುವುದರಿಂದ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದುಕೊಂಡರೆ ಉತ್ತಮ ಅಷ್ಟು ಮಾತ್ರವಲ್ಲದೆ ಎಲ್ಲ ರೀತಿಯ ಕೊರೊನಾ ರೂಪಾಂತರಿ ವೈರಸ್‌ಗಳಿಂದ ರಕ್ಷಣೆ ಸಾಧ್ಯ.