ಕಂಪ್ಲಿ: ಭಾರಿ ಮಳೆಯಿಂದ ಜಲಾವೃತಗೊಂಡ ತಾಲೂಕಿನ ವಿವಿಧ ಗ್ರಾಮಗಳಿಗೆ ಹೊಸಪೇಟೆ ತಾಲೂಕು ಮತ್ತು ಕಂಪ್ಲಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿ ನೀರಿನಲ್ಲಿಮುಳುಗಿದ ಜಮೀನುಗಳನ್ನು ವೀಕ್ಷಿಸಿದರು.
ಶುಕ್ರವಾರ ಬೆಳಗಿನ ಜಾವ ಕಂಪ್ಲಿ ತಾಲ್ಲೂಕಿನಲ್ಲಿ ಸುಮಾರು 1 ಗಂಟೆಯಿಂದ ಬೆಳಗಿನ 5 ಗಂಟೆಯವರೆಗೆ ದಾಖಲೆಯ 81.ಮಿ.ಮೀನಷ್ಟು ಮಳೆಯಾಗುವ ಮೂಲಕ ತಾಲೂಕಿನ ಕೆರೆ, ಕಾಲುವೆಗಳು ತುಂಬಿ ಭಾರಿ ಪ್ರಮಾಣದಲ್ಲಿ ಮಳೆ ನೀರು ವಿವಿಧ ಜಮೀನುಗಳಿಗೆ ನುಗ್ಗಿತ್ತು.
ಮಳೆ ಪ್ರವಾಹದಿಂದಾಗಿ ತಾಲೂಕಿನ ನೂರಾರು ಎಕರೆ ಜಮೀನುಗಳಲ್ಲಿ ಬೆಳೆದ ವಿವಿಧ ಬೆಳೆಗಳು ನೀರಿನಲ್ಲಿ ಮುಳುಗಿದ್ದವು. ಈ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಹೊಸಪೇಟೆ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವಾಮದೇವಕೊಳ್ಳಿ, ಕಂಪ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಧರ್ ಹಾಗೂ ಇತರೆ ಅಧಿಕಾರಿಗಳು ಭಾರಿ ಪ್ರಮಾಣದಲ್ಲಿ ಮಳೆ ನೀರು ಹೊಕ್ಕಿರುವ ಜಮೀನುಗಳನ್ನು ಪರಿಶೀಲಿಸಿದರು.
ರಾಮಸಾಗರ, ನಂ. 10 ಮುದ್ದಾಪುರ, ಕಂಪ್ಲಿ, ಸಣಾಪುರ, ಸುಗ್ಗೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರ ಜಮೀನುಗಳನ್ನು ವೀಕ್ಷಿಸಿದ ಅಧಿಕಾರಿಗಳು ಮಳೆ ನೀರಿನಿಂದ ಜಲಾವೃತಗೊಂಡಿರುವ ಎಲ್ಲ ಜಮೀನುಗಳ ಪರಿಶೀಲನೆ ನಡೆಸಿದ್ದು, ಇನ್ನು ಸಮಗ್ರವಾಗಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ವಾಮದೇವಕೊಳ್ಳಿ ತಿಳಿಸಿದರು. ಭತ್ತದ ಜಮೀನಿನಲ್ಲಿ ನೀರು ನಿಂತಿದ್ದು, ಈ ಬೆಳೆಗೆ ಎರಡು ಮೂರು ದಿನಗಳ ಕಾಲ ನೀರು ನಿಂತರೂ ಯಾವುದೇ ತೊಂದರೆಯಿಲ್ಲ. ಆದರೆ ಇದಕ್ಕಿಂತ ಅಧಿಕ ದಿನಗಳ ಕಾಲ ನೀರು ನಿಂತರೆ ಭತ್ತದ ಬೆಳೆಗೆ ಹಾನಿಯಾಗಲಿದೆ ಎಂದರು.