Advertisement

Falls: ಕಪಿಲತೀರ್ಥ ಜಲಪಾತ…: ಇದು ಕಲ್ಯಾಣ ಕರ್ನಾಟಕದಲ್ಲಿ ಇರೋ ಏಕೈಕ ಜಲಪಾತ

08:01 PM Jun 12, 2024 | Team Udayavani |

ದೋಟಿಹಾಳ: ಉತ್ತರ ಕರ್ನಾಟಕದವರು ಸಾಮಾನ್ಯವಾಗಿ ಜಲಪಾತಗಳನ್ನು ನೋಡಬೇಕು ಎಂದರೆ, ನಾವು ಮಲೆನಾಡಿಗೆ ಹೋಗಬೇಕು. ಆದರೆ, ಬಿಸಿಲನಾಡು ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ಜಲಪಾತ ನೋಡಲು ಸಿಗುತ್ತೆ ಅಂದರೆ ನಂಬುವುದೇ ಕಷ್ಟ. ಆದರೂ ಇದು ನಿಜ.

Advertisement

ಅದು ಕಲ್ಯಾಣ ಕರ್ನಾಟಕದಲ್ಲಿ ಇರೋ ಏಕೈಕ ಜಲಪಾತ ಇದು ಆಗಿದೆ. ಅರೇ ಇದೇನಪ್ಪ ಬರದ ನಾಡಲ್ಲಿ ಜಲಪಾತ ಅಂತೀರಾ…? ಹೌದು ಇಂತಹದ್ದೊಂದು ಅಪರೂಪದ ಜಲಪಾತವನ್ನು ನಾವು ಬಿಸಿಲ ನಾಡಾದ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿ ಕಾಣಬಹುದು.

ಒಂದೆಡೆ ಹಚ್ಚ ಹಸಿರಿನ ಕಾಡು, ಇನ್ನೊಂದಡೆ ರಭಸವಾಗಿ ಭೋರ್ಗರೆಯುತ್ತಿರುವ ಜಲಪಾತ, ಇನ್ನೊಂದಡೆ ಭೋರ್ಗೆರೆಯೋ ನೀರಿನಲ್ಲಿ ಮನಸು ಬಿಚ್ಚಿ ಆಟ ಆಡುತ್ತಿರೋ ಜನ. ಮತ್ತೊಂದೆಡೆ ಜಲಪಾತದ ದೃಶ್ಯ ವೈಭೋಗವನ್ನು ತಮ್ಮ ಮೊಬೈಲ್ ಅಥವಾ ಇನ್ಯಾವುದೋ ಕ್ಯಾಮೆರಾದಲ್ಲಿ ಸೆರೆಹಿಡಿಯಲು ತಲ್ಲೀನವಾಗಿರೋ ಪ್ರವಾಸಿಗರ ದೃಶ್ಯ ಇಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದೆ.

ಇದನ್ನೆಲ್ಲ ನೋಡಿ ಇದ್ಯಾವುದೋ ಮಲೆನಾಡಿನ ಜಲಪಾತ ಎಂದು ಭಾವಿಸಿದಲ್ಲಿ ಅದು ಅವರ ತಪ್ಪು ಕಲ್ಪನೆ. ಈ ಜಲಪಾತ ಯಾವುದೇ ಮಲೆನಾಡಿನಲ್ಲಿ ಇರುವ ಜಲಪಾತವಲ್ಲ. ಇದು ಬಿಸಿಲನಾಡು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದ ಬೆಟ್ಟದ ಮೇಲಿರುವ ಕಪೀಲತೀರ್ಥ ಜಲಪಾತ. ಮಹಾಭಾರತ ಕಾಲದಲ್ಲಿ ಕಪಿಲಮುನಿಗಳು ಈ ಸ್ಥಳದಲ್ಲಿ ತಪಸ್ಸು ಮಾಡಿ, ಗಂಗೆಯನ್ನು ಇಲ್ಲಿಗೆ ಕರೆತಂದರು. ಇದರಿಂದಾಗಿಯೇ ಇಲ್ಲಿ ಜಲಪಾತ ಸೃಷ್ಠಿಯಾಯಿತೆಂಬ ನಂಬಿಕೆ ಜನರಲ್ಲಿ ಮನೆ ಮಾಡಿದೆ.

ಬಹುತೇಕ ಜಲಪಾತಗಳನ್ನು ದೂರದಿಂದಲೇ ನಿಂತು ನೋಡಿ ಆನಂದಿಸಬಹುದು. ಆದರೆ ಇಲ್ಲಿ ಜಲಧಾರೆಯ ಅಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಾಸುಬಂಡೆ ಇರುವುದರಿಂದ ಜಲಪಾತಕ್ಕೆ ಮೈಯೊಡ್ಡಿ ಮೈ-ಮನ ಹಗುರ ಮಾಡಿಕೊಳ್ಳಲು ಯಾವುದೇ ಅಪಾಯವಿಲ್ಲ. ಸುಮಾರು 25 ಅಡಿ ಎತ್ತರದಿಂದ ಬೀಳುವ ನೀರು ನೋಡಲು ಮನೋಹರವಾಗಿ ಕಾಣುತ್ತದೆ. ಬಂಡೆಗೆ ಅಪ್ಪಳಿಸಿದ ನೀರು ಹನಿ-ಹನಿಯಾಗಿ ಮೇಲಕ್ಕೆ ಚಿಮ್ಮುವ ದೃಶ್ಯ ಆಕರ್ಷಕವಾಗಿರುತ್ತದೆ. ಈ ಸೊಬಗು ಸವಿಯುತ್ತ ಸ್ನಾನವನ್ನೂ ಸಹ ಮಾಡಬಹುದಾಗಿದೆ. ಇಲ್ಲಿನ ವೈಶಿಷ್ಟ್ಯ ಎಂದರೆ, ಕೇವಲ 25ಅಡಿ ಎತ್ತರದಿಂದ ರಭಸವಾಗಿ ಹರಿಯುವ ನೀರಿನ ಕೆಳಗೆ ನಿಂತು ಸ್ನಾನ ಮಾಡುವುದು. ಜಲಪಾತದ ನೀರು ಮುಂದೆ ಹರಿದು ಹೋಗಿ ದೊಡ್ಡಕರೆಯನ್ನು ಸೇರುತ್ತದೆ. ಈ ಕೆರೆ ತುಂಬಿದರೆ ಸುತ್ತಲಿನ ಕೊಳವೆಬಾವಿಗಳಿಗೆ ವರ್ಷಪೂರ್ತಿ ನೀರಿನ ಆಶ್ರಯ ದೊರತಂತಾಗುತ್ತದೆ.

Advertisement

ಮಳೆಗಾಲದಲ್ಲಿ ಜಿಲ್ಲೆಯ ಮುಖ್ಯ ಪ್ರವಾಸಿ ತಾಣವಾಗುವ ಎಲ್ಲ ಅರ್ಹತೆ ಪಡೆದಿರುವ ಈ ಜಲಪಾತಕ್ಕೆ ಇಲ್ಲಿಯವರೆಗೆ ರಸ್ತೆಯದ್ದೆ ದೊಡ್ಡ ತೊಂದರೆ ಇತ್ತು. ಕಬ್ಬರಗಿ ಗ್ರಾಮದಿಂದ ಸುಮಾರು ನಾಲ್ಕು ಕಿ.ಮೀ ನಡೆದುಕೊಂಡೇ ಹೋಗಬೇಕಾಗಿತ್ತು. ಸದ್ಯ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ಬೆಟ್ಟದವರೆಗೆ ಮಾತ್ರ ಸಿ.ಸಿ ರಸ್ತೆ ಮಾಡಿದ್ದರೆ, ಅರಣ್ಯ ಇಲಾಖೆಯ ಅನುಮತಿ ದೊರೆಯದ ಬೆಟ್ಟದಿಂದ ಜಲಪಾತದವರೆಗೂ ಕಚ್ಚಾ ರಸ್ತೆ ಇದ್ದು ಜಾಗೃತಿಯಿಂದ ವಾಹನ ಚಲಾಯಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಒಂದು ಬಾರಿ ಈ ಜಲಪಾತಕ್ಕೆ ಮೈಯೊಡ್ಡಿ ಜಳಕ ಮಾಡಿದರೆ ಸಾಕು ಮೈಮನವೆಲ್ಲಾ ಹಿತವಾಗುತ್ತದೆ ಎಂದು ಪ್ರವಾಸಿಗರು ತಿಳಿಸುತ್ತಾರೆ.

ಕೇವಲ ಮಳೆಗಾಲದಲ್ಲಿ ಮಾತ್ರ ಸೃಷ್ಟಿಯಾಗುವ ಈ ಜಲಪಾತವನ್ನು ನೋಡಲು ಕೊಪ್ಪಳ ಜಿಲ್ಲೆ ಸೇರಿದಂತೆ ಗದಗ, ಬಾಗಲಕೋಟೆ, ವಿಜಯಪುರ ಹಾಗೂ ಬಳ್ಳಾರಿ ಸೇರಿದಂತೆ ನೆರೆ ಹೊರೆಯ ವಿವಿಧ ಜಿಲ್ಲೆಗಳ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ.

ವರದಿ: ಮಲ್ಲಿಕಾರ್ಜುನ ಮೆದಿಕೇರಿ ದೋಟಿಹಾಳ.

Advertisement

Udayavani is now on Telegram. Click here to join our channel and stay updated with the latest news.

Next