Advertisement

Koratagere: ಹೇಮಾವತಿ ನೀರು ರಾಮನಗರಕ್ಕೆ ಹರಿಸುವ ಕನಸನ್ನು ಶೀಘ್ರವೇ ಕೈಬಿಡಬೇಕು

07:47 PM Jun 25, 2024 | Team Udayavani |

ಕೊರಟಗೆರೆ: ಹೇಮಾವತಿ ನೀರು ಜಿಲ್ಲೆಯ ರೈತರಿಗೆ ಅತ್ಯವಶ್ಯಕವಾಗಿದೆ. ರೈತರಿದ್ದರೆ ದೇಶ ಮತ್ತು ನಾಡು. ಹಾಗಾಗಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಮುಖಾಂತರ ಇನ್ನೂ ಮುಂದೆ ರಾಮನಗರಕ್ಕೆ ಒಂದು ಹನಿಯು ಸಹ ಬಿಡುವುದಿಲ್ಲ. ಇಂದೇ ಈ ಕಾಮಗಾರಿಯ ಕನಸು ಕೈ ಬಿಡದಿದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕ ಪಿಆರ್ ಸುಧಾಕರ್‌ಲಾಲ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Advertisement

ತುಮಕೂರು ಜಿಲ್ಲೆಯಲ್ಲಿ ಕಾವೇರಿ ನೀರಾವರಿ ನಿಗಮದಿಂದ ನಡೆಯುತ್ತಿರುವ ಹೇಮಾವತಿ ಲಿಂಕ್ ಕಾಮಗಾರಿ ವಿರೋಧಿಸಿ ಬಂದ್‌ಗೆ ರೈತ ಸಂಘಟನೆಗಳು, ಹೋರಾಟ ಸಮಿತಿ, ವಿವಿಧ ಕನ್ನಡಪರ ಸಂಘಟನೆಗಳು ತುಮಕೂರು ಬಂದ್‌ಗೆ ಕರೆ ನೀಡಿದ ಹಿನ್ನೆಲೆ ಮಂಗಳವಾರ ಕೊರಟಗೆರೆಯಲ್ಲೂ ಸಹ ಬಂದ್‌ಗೆ ಕರೆ ನೀಡಿ ಪಟ್ಟಣದ  ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಿಂದ ತಾಲೂಕು ಕಚೇರಿಯವರೆಗೆ ಬೃಹತ್ ಪ್ರತಿಭಟನೆ ನಡೆಸಿ ಮಾತನಾಡಿದರು.

ಬಿಜೆಪಿ ಮಾಜಿ ಅಧ್ಯಕ್ಷ ಪವನ್‌ಕುಮಾರ್ ಮಾತನಾಡಿ, ರೈತರ ವಿರೋಧಿಯಾಗಿ ರಾಜ್ಯ ಸರ್ಕಾರ ನಡೆಯುತ್ತಿದೆ. ಹೇಮಾವತಿ ಎಕ್ಸೆಪ್ರೆಸ್ ಚಾನಲ್ ಮುಖಾಂತರ ಇಲ್ಲಿನ ಹೇಮಾವತಿ ನೀರನ್ನು ರಾಮನಗರ, ಮಾಗಡಿಗೆ ಹರಿಸಲು ಡಿಸಿಎಂ ಡಿ.ಕೆ ಶಿವಕುಮಾರ್ ಯೋಜನೆ ರೂಪಿಸಿಕೊಂಡಿದ್ದಾರೆ. ಅದರಿಂದ ಇದನ್ನು ಖಂಡಿಸಿ ತುಮಕೂರು ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ನೀರಾವರಿ ವಿಚಾರಕ್ಕೆ ಮತ್ತೊಂದು ರಾಜ್ಯದ ಮೇಲೆ ಹೋರಾಟ ನಡೆಸಬೇಕಿತ್ತು. ಈಗ ರಾಜ್ಯದಲ್ಲಿಯೇ ನೀರಿಗಾಗಿ ಮತ್ತೊಂದು ಜಿಲ್ಲೆಯ ಜೊತೆ ಕಿತ್ತಾಡುವಂತೆ ಮಾಡಿದೆ ಈ ಸರ್ಕಾರ ಎಂದು ಆರೋಪ ಮಾಡಿದರು.

ಬಿಜೆಪಿ ಅಧ್ಯಕ್ಷ ದರ್ಶನ್ ಮಾತನಾಡಿ, ಹೇಮಾವತಿ ನೀರು ಈವರೆಗೂ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಹಂಚಿಕೆಯಾಗಿಲ್ಲ. ಹೇಮಾವತಿ ತುಮಕೂರು ಜಿಲ್ಲೆಗೆ 24 ಟಿಎಂಸಿ ಮಾತ್ರ ಬಂದಿದೆ. ಇದರಲ್ಲಿ 7 ಟಿಎಂಸಿ ನೀರನ್ನು ರಾಮನಗರಕ್ಕೆ ಕೊಡುತ್ತಾ ಇದ್ದಾರೆ. ತುಮಕೂರು ಗ್ರಾಮಾಂತರಕ್ಕೆ 1.5 ಟಿಎಂಸಿ, ತುಮಕೂರು ನಗರಕ್ಕೆ 1 ಟಿಎಂಸಿ ನೀರು ಮಾತ್ರ ಬಂದಿದೆ. ರೈತರಿಗೆ ಮೀಸಲಿರುವಂತಹ ನೀರನ್ನು ಕೇಳಿದರೆ ಈ ಭಾಗದ ರೈತರು ಏನು ಮಾಡಬೇಕು? ಅದ್ದರಿಂದ ಈ ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.

ರೈತ ಸಂಘದ ಅಧ್ಯಕ್ಷ ಸಿದ್ದರಾಜು ಮಾತನಾಡಿ, ಹೇಮಾವತಿ ನೀರು ರೈತರ ಜೀವನಾಡಿ. ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಅವೈಜ್ಞಾನಿಕವಾಗಿದೆ. ಇದರಿಂದ ರಾಜ್ಯಕ್ಕೆ ನಷ್ಟ ಉಂಟಾಗುತ್ತಿದ್ದರು ಅನುದಾನ ಬಿಡುಗಡೆಗೊಳಿಸಿ ರಾಮನಗರ ಜಿಲ್ಲೆಗೆ ಹರಿಸಲು ಸಿದ್ದತೆ ಮಾಡಿಕೊಳ್ಳುತ್ತಿದೆ. ರಾಜ್ಯ ನಾಯಕರೇ ಬೆಂಬಲವನ್ನು ವ್ಯಕ್ತಪಡಿಸಿರುವುದನ್ನು ಗಮನಿಸಿದರೆ ದೊಡ್ಡ ಮಟ್ಟದ ಹಣಕಾಸಿನ ವ್ಯವಹಾರವನ್ನು ನಡೆಸಿದ್ದಾರೆಂದು ತಿಳಿಯುತ್ತದೆ. ಈ ಯೋಜನೆ ಇಲ್ಲಿಗೆ ಕೈ ಬಿಡದಿದ್ದರೆ ಮುಂದೆ ಆಗುವಂತಹ ಅನಾಹುತಕ್ಕೆ ಸರ್ಕಾರಕ್ಕೆ ನೆರಹೊಣೆಯಾಗಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ನೀಡಿದರು.

Advertisement

ಈ ಪ್ರತಿಭಟನೆಯಲ್ಲಿ ತೆಂಗು ನಾರು ನಿಗಮದ ಮಾಜಿ ಅಧ್ಯಕ್ಷ ವೆಂಕಟಾಚಲಯ್ಯ, ರೈತ ಸಂಘದ ಅಧ್ಯಕ್ಷ ರಂಗಹನುಮಯ್ಯ, ಶಬ್ಬೀರ್‌ಬಾಷಾ, ಮಾರುತಿ, ಕರವೇ ಅಧ್ಯಕ್ಷ ನಟರಾಜ್, ಪ್ರಸನ್ನಕುಮಾರ್, ಮುಖಂಡರಾದ ನರಸಿಂಹರಾಜು, ದಾಡಿವೆಂಕಟೇಶ್, ರವಿಕುಮಾರ್(ಕೆಂಗ), ಅಶ್ವತ್ಥ್ ನಾರಾಯಣ ರಾಜು (ಲಂಬುರಾಜು), ತುಂಬಾಡಿ ಲಕ್ಷ್ಮೀಶ್‌, ಕಾಮರಾಜು, ಗುರುದತ್ತ ಸೇರಿದಂತೆ ಇತರರು ಇದ್ದರು.

ರೈತರ ಹಿತ ಕಾಯುವುದು ಸರ್ಕಾರದ ಕೆಲಸ. ಆದರೆ ಒಂದು ಜಿಲ್ಲೆಯ ರೈತರಿಗಾಗಿ ಮತ್ತೊಂದು ಜಿಲ್ಲೆಯ ರೈತರಿಗೆ ಅನ್ಯಾಯ ಮಾಡಲು ಹೊರಟಿರುವುದು ಯಾವ ನ್ಯಾಯ. ಸರ್ಕಾರ ಕೂಡಲೇ ಈ ಹೇಮಾವತಿ ಕೆನಾಲ್ ಕಾಮಗಾರಿಯನ್ನು ನಿಲ್ಲಿಸಿ ರೈತರಿಗೆ ಶಕ್ತಿಯಾಗಿ ನಿಲ್ಲದೇ ರೈತರ ವಿರೋಧಿಯಾದರೆ, ಇದರಿಂದ ಯಾವುದೇ ಘಟನೆ ನಡೆದರೂ ಸರ್ಕಾರವೇ ಜವಬ್ದಾರಿಯಾಗಿರುತ್ತದೆ. –ದೇವರಾಜ್ ಕೆ.ಎನ್, ತಾ. ಅಧ್ಯಕ್ಷ, ನಮ್ಮ ಕರ್ನಾಟಕ ರಕ್ಷಣಾ ವೇದಿಕೆ

ರೈತರಿಗೆ ವಿಷವುಣಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಕೆನಾಲ್ ಯೋಜನೆ ಬೇಡವೆಂದು ರೈತರು ಗೋಗರೆದರೂ ಅವರ ಅಳಲನ್ನು ತಿರಸ್ಕರಿಸಲಾಗಿದೆ. ಈ ಸರ್ಕಾರಕ್ಕೆ ಕಣ್ಣು ಮತ್ತು ಕಿವಿ ಎರಡು ಇಲ್ಲಾ, ಅವರೆಡನ್ನು ತೆರೆಸುವ ಪ್ರಯತ್ನವನ್ನು ಇವತ್ತಿನ ಪ್ರತಿಭಟನೆಯ ಮೂಲಕ ಮಾಡುತ್ತಿದ್ದೇವೆ. – ಅಶ್ವತ್ಥ್ ನಾರಾಯಣ, ಮಾಜಿ ಪ.ಪಂ ಸದಸ್ಯ. ಕೊರಟಗೆರೆ

ಕೊರಟಗೆರೆ ಬಂದ್ ಯಶಸ್ವಿ: ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ನೀರಾವರಿ ಹೋರಾಟ ಸಮಿತಿ, ರೈತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ತುಮಕೂರು ಜಿಲ್ಲೆ ಬಂದ್‌ಗೆ ಕರೆ ನೀಡಿದ ಹಿನ್ನೆಲೆ, ಕೊರಟಗೆರೆಯ ನೀರಾವರಿ ಹೋರಾಟ ಸಮಿತಿ ಸೇರಿದಂತೆ ಇತರೆ ಸಂಘಟನೆಗಳು ಬೆಂಬಲ ಸೂಚಿಸಿ ಬಂದ್‌ಗೆ ಕರೆ ನೀಡಲಾಗಿತ್ತು. ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ತಾಲೂಕು ಕಚೇರಿಯವರೆಗೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿದ್ದು, ಅಂಗಡಿ-ಮುಗ್ಗಟ್ಟುಗಳು ಸ್ವಯಂಪ್ರೇರಿತರಾಗಿ ಬಾಗಿಲು ಮುಚ್ಚಿ ಬೆಂಬಲ ಸೂಚಿಸಿದ್ದು, ಬಂದ್ ಯಶಸ್ವಿಯನ್ನು ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next