Advertisement

ಹೊಸ ನಾಯಕರಿಗೆ ದಾರಿ ಬಿಡಿ; ಗಾಂಧಿ ಕುಟುಂಬದ ವಿರುದ್ಧ ತಿರುಗಿಬಿದ್ದ ಕಪಿಲ್‌ ಸಿಬಲ್‌

10:49 PM Mar 15, 2022 | Team Udayavani |

ನವದೆಹಲಿ: ಪಂಚರಾಜ್ಯಗಳ ಸೋಲಿನ ಬಳಿಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಇನ್ನಷ್ಟು ವೇಗ ಪಡೆದುಕೊಂಡಿದೆ. ಪಕ್ಷದ ಹಿರಿಯ ನಾಯಕ ಕಪಿಲ್‌ ಸಿಬಲ್‌ ಅವರು, ಗಾಂಧಿ ಕುಟುಂಬದ ವಿರುದ್ಧ ಸಿಡಿದೆದ್ದು, ಹೊಸ ನಾಯಕರಿಗೆ ದಾರಿ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

Advertisement

ಕಾಂಗ್ರೆಸ್‌ ನಾಯಕತ್ವ ಸದ್ಯ ಭ್ರಮಾಲೋಕದಲ್ಲಿದೆ, ನಮಗೆ ಎಲ್ಲರ ಕಾಂಗ್ರೆಸ್‌ ಬೇಕಾಗಿದೆ. ಇನ್ನೂ ಕೆಲವರಿಗೆ ಕುಟುಂಬದ ಕಾಂಗ್ರೆಸ್‌ ಆಗಿಯೇ ಇರಲಿ ಅಂದುಕೊಳ್ಳುತ್ತಿದ್ದಾರೆ ಎಂದು ನಾಯಕತ್ವದ ವಿರುದ್ಧ ಜಿ23ನಲ್ಲಿನ ಪ್ರಮುಖ ನಾಯಕರಾಗಿರುವ ಸಿಬಲ್‌ ಕಿಡಿಕಾರಿದ್ದಾರೆ.

ಪಂಚರಾಜ್ಯ ಚುನಾವಣೆಯಲ್ಲಿನ ಸೋಲಿನ ನಂತರವೂ ಗಾಂಧಿ ಕುಟುಂಬದ ನಾಯಕತ್ವದ ಮೇಲೆ ಸಿಡಬ್ಲೂéಸಿ ನಿಷ್ಠೆ ಇಟ್ಟಿರುವುದು ನನಗೇನೂ ಅಚ್ಚರಿ ತಂದಿಲ್ಲ. ಇವರೆಲ್ಲರೂ ಅದನ್ನೇ ಬಯಸುತ್ತಿದ್ದಾರೆ. ಆದರೆ, ಈಗ ಗಾಂಧಿ ಕುಟುಂಬವೇ ನಾಯಕತ್ವದಿಂದ ಹಿಂದೆ ಸರಿಯಬೇಕಾಗಿದೆ. ಈ ಮೂಲಕ ಉಳಿದವರಿಗೆ ದಾರಿ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಬಜೆಟ್‌ ಅಧಿವೇಶನದ ಬಳಿಕ ಚಿಂತನ ಶಿಬಿರ ಆಯೋಜಿಸುವುದಾಗಿ ಪಕ್ಷ ಹೇಳಿದೆ. ಆದರೆ, ನಾವು ಕಳೆದ ಎಂಟು ವರ್ಷಗಳಿಂದಲೂ ದಿನದಿಂದ ದಿನಕ್ಕೆ ಕುಸಿಯುತ್ತಲೇ ಬಂದಿದ್ದೇವೆ. ಅಷ್ಟೇ ಅಲ್ಲ, ಪಕ್ಷದ ವಿಚಾರದಲ್ಲಿ ನಾವಿನ್ನೂ ಭ್ರಮಾಲೋಕದಲ್ಲೇ ಇದ್ದೇವೆ ಎಂದೂ ವ್ಯಂಗ್ಯ ಮಾಡಿದ್ದಾರೆ.

ಸಿಬಲ್‌ಗೆ ತಿರುಗೇಟು
ಲೋಕಸಭೆಯಲ್ಲಿ ಕಾಂಗ್ರೆಸ್‌ನ ಮುಖ್ಯ ಸಚೇತಕ ಮಾಣಿಕಂ ಠಾಗೋರ್‌ ಅವರು, ಸಿಬಲ್‌ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಾಯಕರ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್‌ ನಾಯಕತ್ವದಿಂದ ಗಾಂಧಿ ಕುಟುಂಬ ದೂರ ಸರಿದರೆ, ಜನತಾಪಕ್ಷದಂತಾಗಲಿದೆ. ಈ ಮೂಲಕ ಕಾಂಗ್ರೆಸ್‌ ಮತ್ತು ಭಾರತವನ್ನು ನಾಶ ಮಾಡುವುದು ಸುಲಭ ಎಂಬ ಕಾರಣಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದಿದ್ದಾರೆ.

Advertisement

ಇದನ್ನೂ ಓದಿ:ಮೀಡಿಯಾ ಒನ್‌ ಚಾನೆಲ್‌ ನಿಷೇಧಕ್ಕೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ

ನವಜೋತ್‌ ಸಿಧುಗೆ ಗೇಟ್‌ ಪಾಸ್‌
ಪಂಚರಾಜ್ಯಗಳ ಸೋಲನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್‌ ಹೈಕಮಾಂಡ್‌, ಪಂಜಾಬ್‌ ಸೇರಿದಂತೆ ಎಲ್ಲಾ ಐದು ರಾಜ್ಯಗಳ ಪ್ರದೇಶ ಕಾಂಗ್ರೆಸ್‌ ಮುಖ್ಯಸ್ಥರನ್ನು ಕಿತ್ತು ಹಾಕಿದೆ. ಇದರಲ್ಲಿ ವಿವಾದಾತ್ಮಕ ನಾಯಕ ನವಜೋತ್‌ ಸಿಂಗ್‌ ಸಿಧು ಕೂಡ ಸೇರಿದ್ದಾರೆ.

ಪಂಜಾಬ್‌ನಲ್ಲಿ ಆಡಳಿತದಲ್ಲಿದ್ದರೂ, ಕಾಂಗ್ರೆಸ್‌ ಹೀನಾಯ ಪ್ರದರ್ಶನ ನೀಡಿತ್ತು. ಇದಕ್ಕೆ ಸಿಧು ಅವರು, ಮಾಜಿ ಸಿಎಂ ಅಮರೀಂದರ್‌ ಸಿಂಗ್‌ ಮತ್ತು ಚರಣಜಿತ್‌ ಸಿಂಗ್‌ ಛನ್ನಿ ಅವರ ಜತೆ ಸಂಘರ್ಷಕ್ಕೆ ಇಳಿದಿದ್ದೂ ಕಾರಣವಾಗಿತ್ತು. ಹೀಗಾಗಿ, ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ ಪಂಜಾಬ್‌ನ ಪಿಸಿಸಿ ಮುಖ್ಯಸ್ಥರನ್ನು ತೆಗೆದುಹಾಕಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next