ಹೊಸದಿಲ್ಲಿ : ಆಮ್ ಆದ್ಮಿ ಪಕ್ಷದಿಂದ ಕಿತ್ತು ಹಾಕಲ್ಪಟ್ಟಿದ್ದ ಸಚಿವ ಕಪಿಲ್ ಮಿಶ್ರಾ ಅವರು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಸವಾಲು ಹಾಕಿದ್ದಾರೆ. “ನಾನೂ ನನ್ನ ಶಾಸಕತ್ವಕ್ಕೆ ರಾಜೀನಾಮೆ ನೀಡುತ್ತೇನೆ; ನೀವೂ ನಿಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿ; ನಾವಿಬ್ಬರೂ ಪರಸ್ಪರ ಎದುರಾಳಿಗಳಾಗಿ ಚುನಾವಣೆಯಲ್ಲಿ ಹೋರಾಡೋಣ’ ಎಂದು ಕಪಿಲ್ ಮಿಶ್ರಾ ಚ್ಯಾಲೆಂಜ್ ಹಾಕಿದ್ದಾರೆ.
ಇಂದಿಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಿಶ್ರಾ ಅವರು ಕೇಜ್ರಿವಾಲ್, ಸತ್ಯೇಂದ್ರ ಜೈನ್, ಗೌರವ್ ಛಡ್ಡಾ, ಸಂಜಯ್ ಸಿಂಗ್ ಮತ್ತು ಇತರ ಕೆಲವರು ಸೇರಿದಂತೆ ಹಲವು ಆಪ್ ನಾಯಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ, “ನಾನಿಂದು ಸಿಬಿಐ ಕಾರ್ಯಾಲಯಕ್ಕೆ ಹೋಗಿ ಅಲ್ಲಿ ಅಧಿಕೃತ ದೂರನ್ನು ದಾಖಲಿಸುತ್ತೇನೆ’ ಎಂದು ಹೇಳಿದ್ದಾರೆ.
“ನಾನು ಕಳೆದ 15 ವರ್ಷಗಳಿಂದ ಕೇಜ್ರಿವಾಲ್ ಅವರನ್ನು ಬಲ್ಲೆ; ಅವರ ಪ್ರತಿಯೊಂದು ನಡೆ – ನುಡಿಯ ಹಿಂದಿನ ಮರ್ಮವನ್ನು ನಾನು ಬಲ್ಲೆ ; ಕೇಜ್ರಿವಾಲ್ ವಿರುದ್ಧದ ಹೋರಾಟದಲ್ಲಿ ನಾನು ಒಂಟಿ ಎಂಬುದನ್ನೂ ಬಲ್ಲೆ; ಆತನಿಗೆ ಜನಬಲ ಇದೆ; ಧನ ಬಲ ಇದೆ; ಆದರೂ ಆತನ ವಿರುದ್ಧ ಹೋರಾಡುವ ನನ್ನ ದೃಢ ಸಂಕಲ್ಪದಿಂದ ನಾನು ಹಿಂದೆ ಸರಿಯುವುದಿಲ್ಲ’ ಎಂದು ಮಿಶ್ರಾ ಸುದ್ದಿ ಗೋಷ್ಠಿಯಲ್ಲಿ ಗುಡುಗಿದರು.
ದಿಲ್ಲಿಯಲ್ಲಿನ ಯಾವುದೇ ವಿಧಾನಸಭಾ ಕ್ಷೇತ್ರದಿಂದ ಬೇಕಿದ್ದರೂ ನಾನು ಕೇಜ್ರಿವಾಲ್ ವಿರುದ್ಧ ಚುನಾವಣೆ ಹೋರಾಡಲು ಸಿದ್ಧನಿದ್ದೇನೆ ಎಂದು ಮಿಶ್ರಾ ಚ್ಯಾಲೆಂಜ್ ಹಾಕಿದರು.
“ಕೇಜ್ರಿವಾಲರೇ, ನಾನು ನಿಮ್ಮಿಂದ ಕಲಿತಿದ್ದೇನೆ; ನನ್ನನ್ನು ಆಶೀರ್ವದಿಸಿ; ನಿಮ್ಮ ವಿರುದ್ಧ ನಾನು ಎಫ್ಐಆರ್ ದಾಖಲಿಸಲು ಹೋಗುತ್ತಿದ್ದೇನೆ’ ಎಂದು ಮಿಶ್ರಾ ಹೇಳಿದರು.