ಹೊಸದಿಲ್ಲಿ : ಆಮ್ ಆದ್ಮಿ ಪಕ್ಷದಿಂದ ಕಿತ್ತು ಹಾಕಲ್ಪಟ್ಟಿರುವ ಮಾಜಿ ಸಚಿವ ಕಪಿಲ್ ಮಿಶ್ರಾ ಅವರು ಭಾನುವಾರ ಇನ್ನೊಂದು ಬಾಂಬ್ ಸಿಡಿಸಿದ್ದಾರೆ.
ಪಕ್ಷಕ್ಕೆ ನಕಲಿ ಕಂಪೆನಿಗಳ ಮೂಲಕ ಹವಾಲ ಹಣ ದೇಣಿಗೆ ರೂಪದಲ್ಲಿ ಹರಿದು ಬಂದಿದ್ದು, ಈ ಪೈಕಿ 187 ಕಂಪೆನಿಗಳು ಒಂದೇ ಹೆಸರಿನಲ್ಲಿವೆ ಎಂದು ದಾಖಲೆ ತೋರಿಸಿದ್ದಾರೆ. ಕೆಲವು ಬ್ಲ್ಯಾಂಕ್ ಚೆಕ್ ಗಳಾಗಿವೆ ಎಂದು ಆರೋಪಿಸಿದ್ದಾರೆ.
ಕೇಜ್ರಿವಾಲ್ ಅವರು ಪಕ್ಷಕ್ಕೆ ದೇಣಿಯಾಗಿ ಕಪ್ಪು ಹಣ ಮತ್ತು ಹವಾಲ ಹಣವನ್ನು ಪಡೆದಿದ್ದಾರೆ. ನಕಲಿ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ. ಈ ಬಗ್ಗೆ ನನ್ನಲ್ಲಿ ದಾಖಲೆಗಳಿವೆ. ನಾಳೆ ದಾಖಲೆ ಸಮೇತ ಸಿಬಿಐಗೆ ದೂರು ಸಲ್ಲಿಸುವುದಾಗಿ ಮಿಶ್ರಾ ಘೋಷಿಸಿದರು.
45 ಕೋಟಿ ರೂಪಾಯಿ ಹಣ ಡಿಪಾಸಿಟ್ ಮಾಡಿ 19 ಕೋಟಿ ರೂಪಾಯಿ ಹಣ ಪಡೆದ ವಿವರ ಸಲ್ಲಿಸಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯ ಕೊನೆಯ ಹಂತದಲ್ಲಿ ಮಿಶ್ರಾ ಅವರು ತಲೆ ತಿರುಗಿ ಕುಸಿದು ಬಿದ್ದ ಘಟನೆ ನಡೆದಿದೆ. ಕಳೆದ ನಾಲ್ಕು ದಿನಗಳಿಂದ ಮಿಶ್ರಾ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹಿನ್ನಲೆಯಲ್ಲಿ ಬಳಲಿ ಕುಸಿದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಿಶ್ರಾ ಅವರು ಕೇಜ್ರಿವಾಲ್ ವಿರುದ್ಧ ಸತ್ಯೇಂದ್ರ ಜೈನ್ ಅವರಿಂದ 2 ಕೋಟಿ ರೂಪಾಯಿ ಲಂಚ ಪಡೆದದ್ದು ,ಅಲ್ಲದೆ ಭಾವನ ಜಮೀನು ಖರೀದಿ ಡೀಲ್‌ಗೆ 50 ಕೋಟಿ ರೂ. ನಿಗದಿಗೊಳಿಸಲಾಗಿತ್ತು ಎಂದು ಆರೋಪ ಮಾಡಿದ್ದರು.