ಹೊಸದಿಲ್ಲಿ: ಹೃದಯಾಘಾತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಲೆಜೆಂಡರಿ ಆಲ್‌ರೌಂಡರ್ ಕಪಿಲ್‌ದೇವ್ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಉತ್ತಮ ಮಟ್ಟದ ಸುಧಾರಣೆ ಕಂಡುಬಂದಿದೆ ಎಂಬುದಾಗಿ ವೈದ್ಯಕೀಯ ವರದಿ ತಿಳಿಸಿದೆ.
ತಮ್ಮ ಆರೋಗ್ಯದ ಕುರಿತು ಟ್ವೀಟ್ ಮಾಡಿರುವ ಕಪಿಲ್‌ದೇವ್, “ನಾನೀಗ ಚೇತರಿಕೆಯ ಹಾದಿಯಲ್ಲಿದ್ದೇನೆ. ಈ ಸಂದರ್ಭದಲ್ಲಿ ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ, ಶೀಘ್ರ ಚೇತರಿಕೆಗೆ ಹಾರೈಸಿದ ಅಭಿಮಾನಿಗಳಿಗೆ ಕೃತಜ್ಞತೆಗಳು. ನಿಮ್ಮೆಲ್ಲರ ಪ್ರೀತಿ ಹಾಗೂ ಹಾರೈಕೆಯಿಂದ ಹೃದಯ ತುಂಬಿಬಂದಿದೆ’ ಎಂದಿದ್ದಾರೆ.
ಈ ನಡುವೆ ಆಸ್ಪತ್ರೆಯ ಹಾಸಿಗೆಯಿಂದಲೇ “ಥಂಬ್ಸ್ ಅಪ್’ ಮಾಡುತ್ತಿದ್ದ ಕಪಿಲ್ ಅವರ ನಗುಮೊಗದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಪಿಲ್ ಪಕ್ಕದಲ್ಲೇ ಪುತ್ರಿ ಅಮಿಯಾ ಕೂಡ ನಗುತ್ತ ಕುಳಿತ್ತಿದ್ದಾರೆ. ಇದನ್ನು ಕಂಡ ಅವರ ಅಭಿಮಾನಿಗಳಿಗೆ ಖುಷಿಯಾಗಿದ್ದು, ಚಿಂತೆ ದೂರವಾಗಿದೆ.
ಇದನ್ನೂ ಓದಿ:ಹೈದರಾಬಾದ್ ವಿರುದ್ಧ ಪಂಜಾಬ್ ಗೆ ರೋಚಕ ಗೆಲುವು
ಕಳೆದ ಶುಕ್ರವಾರ ಮುಂಜಾನೆ ಕಪಿಲ್ ದೇವ್ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ದಿಲ್ಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಕಪಿಲ್ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದರು.