ಮುಂಬಯಿ: ಟೀಮ್ ಇಂಡಿಯಾದ ಮಾಜಿ ಕಪ್ತಾನ, 1983 ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರನ್ನು ಅಪಹರಣ ಮಾಡಿಕೊಂಡು ಹೋಗುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರನ್ನು ಕಿಡ್ನಾಪ್ ಮಾಡಲಾಗಿದ್ದು, ಅವರ ಕೈ ಹಾಗೂ ಬಾಯಿಯನ್ನು ಕಟ್ಟಿ ಅವರನ್ನು ಇಬ್ಬರು ಅಪರಿಚಿತರು ಕರೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋವನ್ನು ನೋಡಿ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.
ಕಪಿಲ್ ದೇವ್ ಅವರನ್ನು ಯಾಕಾಗಿ ಈ ರೀತಿ ಕಟ್ಟಿ ಕರೆದುಕೊಂಡು ಹೋಗಲಾಗುತ್ತಿದೆ ಎಂದು ಕೆಲ ಅಭಿಮಾನಿಗಳು ಟ್ವಿಟರ್ ನಲ್ಲಿ ವಿಡಿಯೋ ಹಂಚಿಕೊಂಡು ಕೇಳಿದ್ದಾರೆ.
ಇದೊಂದು ಜಾಹೀರಾತಿಗೆ ಸಂಬಂಧಿಸಿದ ವಿಡಿಯೋ ಎನ್ನಲಾಗುತ್ತಿದ್ದು, ಕಪಿಲ್ ದೇವ್ ವಿಡಿಯೋದಲ್ಲಿ ಕ್ಯಾಮೆರಾದತ್ತ ಮುಖ ಮಾಡಿಕೊಂಡು ಹೋಗುವುದನ್ನು ನೋಡಬಹುದು. ಜಾಹೀರಾತು ಚಿತ್ರೀಕರಣ ನಡೆಯುತ್ತಿರುವ ವೇಳೆ ಯಾರೋ ಇದನ್ನು ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ ಎನ್ನಲಾಗುತ್ತಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡ ವಿಡಿಯೋವನ್ನು ಹಂಚಿಕೊಂಡಿದ್ದು, “ಈ ಕ್ಲಿಪ್ ನ್ನು ಬೇರೆ ಯಾರಾದರೂ ಸ್ವೀಕರಿಸಿದ್ದೀರಾ? ಇದು ನಿಜವಾಗಿ ಕಪಿಲ್ ದೇವ್ ಅಲ್ಲ ಮತ್ತು ಕಪಿಲ್ ಪಾಜಿ ಚೆನ್ನಾಗಿದ್ದಾರೆ ಎಂದು ಭಾವಿಸುತ್ತೇವೆ” ಎಂದು ಗೌತಮ್ ಗಂಭೀರ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.