Advertisement

ಕೀರ್ತಿ ಆಜಾದ್ ಮೆಲುಕು:ಭಾರತದ ವಿಕೆಟ್‌ ಬೀಳುತ್ತಿದ್ದಾಗ ಕಪಿಲ್‌ ಸ್ನಾನ ಮಾಡುತ್ತಿದ್ದರು!

10:22 AM Dec 08, 2021 | Team Udayavani |

ಮುಂಬಯಿ: ಭಾರತದ 1983ರ ಏಕದಿನ ವಿಶ್ವಕಪ್‌ ಜಯಭೇರಿಯನ್ನು ಆಧರಿಸಿದ ಹಿಂದಿ ಚಿತ್ರ “83’ರ ಟ್ರೇಲರ್‌ ಬಿಡುಗಡೆಯಾಗಿದೆ. ಇದರ ಸನ್ನಿವೇಶವೊಂದರಂತೆ, ಜಿಂಬಾಬ್ವೆ ಎದುರಿನ ಲೀಗ್‌ ಪಂದ್ಯದ ವೇಳೆ ಭಾರತದ ವಿಕೆಟ್‌ಗಳು ತರಗೆಲೆಯಂತೆ ಉದುರುತ್ತಿದ್ದಾಗ ನಾಯಕ ಕಪಿಲ್‌ದೇವ್‌ ಸ್ನಾನ ಮಾಡುತ್ತಿದ್ದರು; ಆಟಗಾರರೆಲ್ಲ ಕಪ್ತಾನನಿಗಾಗಿ ಹೊರಗೆ ಕಾಯುತ್ತಿದ್ದರು!

Advertisement

ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವಕಪ್‌ ವಿಜೇತ ತಂಡದ ಸದಸ್ಯ ಕೀರ್ತಿ ಆಜಾದ್‌, “ಇದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ, ಇದು ನಿಜ’ ಎಂದಿದ್ದಾರೆ.

ನಮ್ಮ ನಡೆ ಬಾತ್‌ರೂಮ್‌ ಕಡೆ!
“ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡೊಡನೆ ಕಪಿಲ್‌ದೇವ್‌ ಬಾತ್‌ರೂಮ್‌ಗೆ ತೆರಳಿದರು. ಫ್ರೆಶ್‌ ಆಗಿ ಬ್ಯಾಟಿಂಗಿಗೆ ಇಳಿಯುವುದು ಅವರ ಉದ್ದೇಶವಾಗಿತ್ತು. ಆದರೆ ಜಿಂಬಾಬ್ವೆ ನಮ್ಮ ಮೇಲೆ ಘಾತಕವಾಗಿ ಎರಗಿತ್ತು. 9 ರನ್‌ ಆಗುವಷ್ಟರಲ್ಲಿ ಗಾವಸ್ಕರ್‌, ಶ್ರೀಕಾಂತ್‌, ಮೊಹಿಂದರ್‌ ಮತ್ತು ಸಂದೀಪ್‌ ಪಾಟೀಲ್‌ ವಿಕೆಟ್‌ ಉರುಳಿತ್ತು. ಇದೇನು ಗ್ರಹಚಾರವಪ್ಪ ಎಂದು ಒತ್ತಡಕ್ಕೊಳಗಾದ ನಾವೆಲ್ಲ ಸೀದಾ ಬಾತ್‌ರೂಮ್‌ ಕಡೆ ಹೆಜ್ಜೆ ಹಾಕಿದೆವು. ಹೊರಗಿನಿಂದಲೇ
ಕಪಿಲ್‌ಗೆ ವಿಷಯ ತಿಳಿಸಿದೆವು. ಅವರು ಅರ್ಧಕ್ಕೆ ಸ್ನಾನ ಮುಗಿಸಿ ಪ್ಯಾಡ್‌ ಕಟ್ಟಿ ಅಂಗಳಕ್ಕಿಳಿದರು. ಮುಂದಿನದು ನಿಮಗೇ ತಿಳಿದೇ ಇದೆ’ ಎಂದು ಅಂದಿನ ಘಟನೆಯನ್ನು ನೆನಪಿಸಿಕೊಂಡರು ಕೀರ್ತಿ ಆಜಾದ್‌.

ಇದನ್ನೂ ಓದಿ:ಐಎಸ್‌ಎಸ್‌ನಲ್ಲಿ ಮತ್ತೆ ಮೆಣಸು ಬೆಳೆಯಿತು!

“ಭಾರತದ ವಿಕೆಟ್‌ಗಳು ಉದುರಿದ ರೀತಿ ಕಂಡು ಕಪಿಲ್‌ ಆಕ್ರೋಶಕ್ಕೊಳಗಾದಂತಿತ್ತು. ಹೀಗಾಗಿಯೇ ಅವರಿಂದ ಅಂಥದೊಂದು ಅಸಾಮಾನ್ಯ ಆಟ ಹೊರಹೊಮ್ಮಿತು’ ಎಂದರು.

Advertisement

ಕಪಿಲ್‌ ಸುಂಟರಗಾಳಿ
ಆ ಪಂದ್ಯದಲ್ಲಿ ಭಾರತದ 5 ವಿಕೆಟ್‌ 17 ರನ್ನಿಗೆ ಬಿದ್ದಾಗ ಕಪಿಲ್‌ ಸುಂಟರಗಾಳಿಯಂಥ ಬೀಸುಗೆಯಲ್ಲಿ ಅಜೇಯ 175 ರನ್‌ ಬಾರಿಸಿದ್ದರು. ಇದು ಭಾರತೀಯ ಏಕದಿನ ಚರಿತ್ರೆಯ ಮೊದಲ ಶತಕವಾದರೆ, ಆ ಕಾಲಕ್ಕೆ ವಿಶ್ವದಾಖಲೆಯೂ ಆಗಿತ್ತು. ಕಬೀರ್‌ ಖಾನ್‌ ನಿರ್ದೇಶನದ, ರಣವೀರ್‌ ಸಿಂಗ್‌-ದೀಪಿಕಾ ಪಡುಕೋಣೆ ಅಭಿನಯದ “83′ ಚಿತ್ರ ಡಿಸೆಂಬರ್‌ 24ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next