ತುಳು ಸಿನೆಮಾ ಲೋಕದಲ್ಲಿ ಹೊಸತನದೊಂದಿಗೆ ಪ್ರೇಕ್ಷಕರ ಮನಸ್ಸು ಗೆದ್ದ “ಜಬರ್ದಸ್ತ್ ಶಂಕರ’ ಸಿನೆಮಾ ಮಾಡಿದ ದೇವದಾಸ್ ಕಾಪಿಕಾಡ್ ಮತ್ತೆ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ತುಳು ಸಿನೆಮಾರಂಗದಲ್ಲಿ ವಿಭಿನ್ನತೆ ಹಾಗೂ ಹೊಸತನವನ್ನು ಪರಿಚಯಿಸಿದ ತೆಲಿಕೆದ ಬೊಳ್ಳಿ ಈಗ ಸ್ಯಾಂಡಲ್‌ವುಡ್‌ನತ್ತ ಕಣ್ಣಿಟ್ಟಿದ್ದಾರೆ.
ಜಬರ್ದಸ್ತ್ ಸಿನೆಮಾ ಕರಾವಳಿ ಹಾಗೂ ಇತರ ಭಾಗಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದ್ದಂತೆ ಕಾಪಿಕಾಡ್ ಅವರನ್ನು ಸ್ಯಾಂಡಲ್‌ವುಡ್‌ನ ಹಲವು ಸಿನೆಮಾ ನಿರ್ಮಾಪಕರು ಸಂಪರ್ಕಿಸಿ ಕನ್ನಡ ಸಿನೆಮಾ ಮಾಡಲು ಒತ್ತಾಯಿಸಿದ್ದಾರೆ. ಈ ಹಿಂದೆಯೇ ಜಬರ್ದಸ್ತ್ ಶಂಕರ ಸಿನೆಮಾವನ್ನು ಕನ್ನಡದಲ್ಲಿಯೇ ಮಾಡಬೇಕು ಎಂದು ನಿರ್ಧರಿಸಿದ್ದ ಕಾಪಿಕಾಡ್ ಅವರು ಕೊನೆಯ ಹಂತದಲ್ಲಿ ಅದನ್ನು ತುಳುವಿನಲ್ಲಿ ಮಾಡಿದ್ದರು. ಸದ್ಯ ಕಾಪಿಕಾಡ್ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಿನೆಮಾದ ಮೂಲಕ ಮತ್ತೆ ಸದ್ದು ಮಾಡಲು ಅಣಿಯಾಗಿದ್ದಾರೆ.
ಅಂದಹಾಗೆ; ಈ ಸಿನೆಮಾದ ಹೆಸರು “ಪುರುಷೋತ್ತಮನ ಪ್ರಸಂಗ’. ಹಲವು ಸಮಯದ ಹಿಂದಿನಿಂದಲೇ ಈ ಪ್ರಸಂಗವನ್ನು ಕನ್ನಡದಲ್ಲಿ ಪರಿಚಯಿಸಬೇಕು ಎಂದು ಕಾಪಿಕಾಡ್ ಉದ್ದೇಶಿಸಿದ್ದರು. ಆದರೆ, ಆ ಹೊತ್ತಿಗಾಗಲೇ ಜಬರ್ದಸ್ತ್ ಶಂಕರ ಸಿನೆಮಾ ಮಾಡುವ ಕಾರಣಕ್ಕಾಗಿ ಪ್ರಸಂಗವನ್ನು ಮುಂದೂಡಲಾಗಿತ್ತು. ಈಗ ಮತ್ತೆ ಪ್ರಸಂಗ ಕೈಗೆತ್ತಿಕೊಳ್ಳಲು ಕಾಪಿಕಾಡ್ ರೆಡಿಯಾಗಿದ್ದಾರೆ.
ನೈಜ ಪಾತ್ರಗಳು ಹಾಗೂ ನೈಜ ಕಥಾನಕವೇ ಪುರುಷೋತ್ತಮನ ಪ್ರಸಂಗ. ಅರ್ಜುನ್ ಕಾಪಿಕಾಡ್ ಪುರುಷೋತ್ತಮನಾಗಿ ಕಾಣಿಸಿಕೊಳ್ಳಲಿದ್ದಾರೆ. ದೇವದಾಸ್ ಕಾಪಿಕಾಡ್ ದುಬಾೖಯಿಂದ ವಾಪಸ್ ಬಂದ ಒಬ್ಬ ವ್ಯಕ್ತಿಯಾಗಿ ನಗಿಸಲಿದ್ದಾರೆ. ಇನ್ನು ತುಳುನಾಡಿನ ಖ್ಯಾತ ಕಲಾವಿದರು ಕೂಡ ಪ್ರಸಂಗದಲ್ಲಿ ಇರಲಿದ್ದಾರೆ. ಕನ್ನಡದ ಹೊಸ ಕಲಾವಿದರು ಜತೆಯಾಗಲಿದ್ದಾರೆ. ಕಲಾವಿದರಿಗೆ ಡಿಸೆಂಬರ್‌ನಲ್ಲಿ ಪ್ರತ್ಯೇಕ ತರಬೇತಿ ಕೂಡ ಇರಲಿದೆ. ಜನವರಿ ಮೊದಲ ವಾರದಲ್ಲಿ ಸಿನೆಮಾ ಶೂಟಿಂಗ್ ಆರಂಭವಾಗುವ ಸಾಧ್ಯತೆಯಿದೆ. ಮನಸ್ಸು ಮಾಡಿದರೆ ದೇಶದಲ್ಲಿಯೇ ಉತ್ತಮ ಉದ್ಯೋಗ ಹಾಗೂ ಆ ಮೂಲಕ ಸಾಧನೆ ಮಾಡಲು ಸಾಧ್ಯ ಇದೆ ಎಂಬ ಕಥಾನಕವೇ ಪುರುಷೋತ್ತಮನ ಪ್ರಸಂಗ.
ರಮೇಶ್ ಅರವಿಂದ್ ಜತೆಗೆ ವೆಂಕಟ ಇನ್ ಸಂಕಟ, ಯಶ್ ಜತೆಗೆ ತೂಫಾನ್ ಹಾಗೂ ಕಾರ್ತಿಕ್ ಎಂಬ ಸಿನೆಮಾದಲ್ಲಿ ಬಣ್ಣಹಚ್ಚಿದ ದೇವದಾಸ್ ಕಾಪಿಕಾಡ್ ಅವರಿಗೆ ಹೆಚ್ಚು ಕಡಿಮೆ 40ರಷ್ಟು ಕನ್ನಡ ಚಿತ್ರಗಳ ಆಫರ್ ಬಂದಿತ್ತು. ಆದರೆ, ತುಳು ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ಕರಾವಳಿ ಭಾಗದಲ್ಲಿಯೇ ಸಮಯ ಬೇಕಾಗಿರುವುದರಿಂದ ಸ್ಯಾಂಡಲ್‌ವುಡ್‌ನ ಆಫರ್‌ಗಳನ್ನು ಕಾಪಿಕಾಡ್ ನಯವಾಗಿ ನಿರಾಕರಿಸಿದ್ದರು. ಈಗ ಪೂರ್ಣಪ್ರಮಾಣದಲ್ಲಿ ಕಾಪಿಕಾಡ್ ಸ್ಯಾಂಡಲ್‌ವುಡ್ ಎಂಟ್ರಿಗೆ ಸಿದ್ಧತೆ ನಡೆಸಿದ್ದಾರೆ. ವಿಶೇಷವೆಂದರೆ ತಮಿಳು, ಮಲಯಾಳಂನಲ್ಲೂ ಇಂತಹದೇ ಆಫರ್ ಬಂದಿದ್ದು, ಕಾಪಿಕಾಡ್‌ಗೆ ಸಮಯ ಸಾಕಾಗದೆ, ಅತ್ತ ಗಮನಹರಿಸಿಲ್ಲ. ಇನ್ನು ಕೋಸ್ಟಲ್‌ವುಡ್‌ನ ಸ್ಟಾರ್ ಅರ್ಜುನ್ ಕಾಪಿಕಾಡ್ ಮಧುರ ಸ್ವಪ್ನ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶ ಪಡೆದಿದ್ದು, ಕೆಲವು ಸಿನೆಮಾಗಳಿಗೆ ಈಗಾಗಲೇ ಸೈನ್ ಕೂಡ ಮಾಡಿದ್ದಾರೆ.
- ದಿನೇಶ್ ಇರಾ