ಬೀದರ: ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಶಿವರಾಜ ಕಪಲಾಪುರೆ ನೇಮಕಗೊಂಡಿದ್ದಾರೆ. ಸಂಘದ ರಾಜ್ಯಾಧ್ಯಕ್ಷ ಕೆ. ಕೃಷ್ಣಪ್ಪ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಸಂಘದ ರಾಜಾಧ್ಯಕ್ಷ ಕೆ. ಕೃಷ್ಣಪ್ಪ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಸಿದ್ಧಾರೆಡ್ಡಿ ನಾಗೂರಾ (ಗೌರವಾಧ್ಯಕ್ಷ), ಚಿದಂಬರ ಶೇಖರ, ಸುಶೀಲಾಬಾಯಿ (ಉಪಾಧ್ಯಕ್ಷರು), ಮಹಮ್ಮದ್ ನಜಿಬೊದ್ದಿನ್ (ಪ್ರಧಾನ ಕಾರ್ಯದರ್ಶಿ), ಅಶೋಕ ಸಪಾಟೆ (ಸಹ ಕಾರ್ಯದರ್ಶಿ), ಸೈಯದ್ ಅಸ್ಲಂ, ಲಲಿತಾಬಾಯಿ (ಸಂಘಟನಾ ಕಾರ್ಯದರ್ಶಿಗಳು) ಮತ್ತು ನರಸಪ್ಪ ಕೀರ್ತಿ (ಖಜಾಂಚಿ).
ಪದಾಧಿಕಾರಿಗಳಿಗೆ ಸನ್ಮಾನ: ಇಲ್ಲಿನ ನೌಕರರ ಸಮುದಾಯ ಭವನದಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ಶಿವರಾಜ ಕಪಲಾಪೂರೆ ಅವರು ವಿವಿಧ ಸಂಘ, ಸಂಸ್ಥೆಗಳ ಅಧ್ಯಕ್ಷ, ಪದಾಧಿಕಾರಿಯಾಗಿ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಇದೀಗ ಅವರಿಗೆ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘವು ಜಿಲ್ಲಾಧ್ಯಕ್ಷ ಸ್ಥಾನದ ಹೊಣೆ ನೀಡಿದೆ ಎಂದು ಹೇಳಿದರು.
ನೂತನ ಅಧ್ಯಕ್ಷ ಶಿವರಾಜ ಕಪಲಾಪುರೆ ಮಾತನಾಡಿ, ಮುಖ್ಯೋಪಾಧ್ಯಾಯರ ಸಂಘ ವಹಿಸಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವೆ. ಜಿಲ್ಲೆಯಲ್ಲಿ ಮುಖ್ಯಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಶಕ್ತಿಮೀರಿ ಶ್ರಮಿಸುವೆ. ಮುಖ್ಯ ಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿ ರೂಪಿಸಬೇಕು. ಪದವೀಧರೇತರ ಮುಖ್ಯಶಿಕ್ಷಕರು ಇರುವ ಶಾಲೆಗಳ ಮಕ್ಕಳ ಸಂಖ್ಯೆಯನ್ನು 250 ರಿಂದ 120ಕ್ಕೆ ಇಳಿಸಬೇಕು. 20 ವರ್ಷ, 25 ವರ್ಷ ಹಾಗೂ 30 ವರ್ಷದ ಕಾಲಮಿತಿ ಬಡ್ತಿ ಕಲ್ಪಿಸಬೇಕು. ಬಿಸಿಯೂಟ ವೆಚ್ಚಕ್ಕಾಗಿ ಮುಂಗಡ ಹಣ ನೀಡಬೇಕು ಎನ್ನುವ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ನೌಕರರ ವಿವಿಧ ಸಂಘಗಳ ಪ್ರಮುಖರಾದ ಬಸವರಾಜ ಜಕ್ಕಾ, ರಾಜಶೇಖರ ಮಂಗಲಗಿ, ಪಾಂಡುರಂಗ ಬೆಲ್ದಾರ್, ಸುರೇಶ ಟಾಳೆ, ಸಂಜುಕುಮಾರ ಸೂರ್ಯವಂಶಿ, ವಿಜಯ ಕುಮಾರ ಮಲಶೆಟ್ಟೆ, ರಾಮಶೆಟ್ಟಿ ಕೆಂಚಾ, ಸರಸ್ವತಿ, ಸುಮತಿ ರುದ್ರಾ, ರಮೇಶ ಸಿಂದೆ ಇದ್ದರು.