ಕಾಪಾಡಿ ನರೇಂದ್ರ ನಾಯಕ್ ಅವರು ಉಡುಪಿಯ ನಿವಾಸಿ. ಅಯೋಧ್ಯೆ ರಾಮಮಂದಿರ ಹೋರಾಟದಲ್ಲಿ ಪಾಲ್ಗೊಂಡಿರುವ ಇವರು ಮೊದಲಿನಿಂದಲೂ ಸಂಘ ಪರಿವಾರ ಸಂಘಟನೆ, ಅದರಲ್ಲೂ ವಿಶ್ವಹಿಂದೂ ಪರಿಷತ್‌ನಲ್ಲಿ ಸಕ್ರಿಯರಾಗಿದ್ದರು. ಹಲವು ದಶಕಗಳಿಂದ ಉಡುಪಿ ನಗರ ವ್ಯಾಪ್ತಿಯಲ್ಲಿ ಸಂಘಟನ ಕಾರ್ಯ ವಿಸ್ತಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾನ್ಯ ಕಾರ್ಯಕರ್ತನಾದ ಇವರು ಅಯೋಧ್ಯೆಯ ಕರಸೇವೆ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಸದ್ಯ ಉಡುಪಿಯ ಐಡಿಯಲ್ ವೃತ್ತದಲ್ಲಿ ಕಬ್ಬಿನ ಹಾಲಿನ ಅಂಗಡಿ ಹಾಕಿಕೊಂಡಿದ್ದಾರೆ.
ನನ್ನ ಜೀವನದಲ್ಲಿ ಆ ಸುಯೋಗ ಇನ್ನೆಂದು ಬರಲು ಸಾಧ್ಯವೇ ಇಲ್ಲ. ಅಂದು ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಮೂರ್ತಿಯನ್ನು ತಾತ್ಕಾಲಿಕವಾಗಿ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಉಡುಪಿಯ ಶಿರೂರು ಮಠದ ಶಿರೂರು ಶ್ರೀಪಾದರ ಜತೆಗೆ ನಾನೂ ಇದ್ದೆ ಮತ್ತು ಆ ಗಳಿಗೆಯನ್ನು ಕಣ್ಣಾರೆ ಕಂಡು ಮನದಲ್ಲಿ ಧನ್ಯತೆಯಿಂದ ತುಂಬಿಕೊಂಡೆ. ಈಗ ಭವ್ಯ ಮಂದಿರದಲ್ಲಿ ಇನ್ನೊಮ್ಮೆ ಪ್ರತಿಷ್ಠಾಪನೆ ಕಣ್ಣು ತುಂಬಲು ಕಾಯುತ್ತಿರುವೆ.
1992ರ ಡಿ.6ರಂದು ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡ ಧ್ವಂಸಗೊಂಡ ತರುವಾಯ ಶ್ರೀರಾಮನ ಮೂರ್ತಿ ಪ್ರತಿಷ್ಠಾಪಿಸಲಾಯಿತು. ವಿಶ್ವಹಿಂದೂ ಪರಿಷತ್‌ನ ಕರಸೇವೆಗೆ ಅಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅನೇಕರು ಪಾಲ್ಗೊಂಡಿದ್ದರು. ಅವರಲ್ಲಿ ನಾನೂ ಒಬ್ಬನಾಗಿದ್ದೆ. ಸಂಘದ ನಿರಂತರ ಸಂಪರ್ಕ ಇದ್ದುದ್ದರಿಂದ ಕರಸೇವೆಯಲ್ಲಿ ಪಾಲ್ಗೊಂಡೆ. ಯೌವನದ ಉತ್ಸಾಹವೂ ಇತ್ತು. ಶಾಂತಾರಾಮ, ಕುಂದಾಪುರದ ರಘುವೀರ್ ನಗರ್‌ಕರ್ ಹಾಗೂ ಅವರ ಮಗ ಅಜಿತ್ ನಗರ್‌ಕರ್ ಹೀಗೆ ನಾವು ನಾಲ್ಕು ಮಂದಿ ಒಟ್ಟಿಗೆ ಉಡುಪಿಯಿಂದ ಮಂಗಳೂರಿನ ತಂಡದೊಂದಿಗೆ ಹೋಗಿದ್ದೆವು.
ರೈಲಿನ ಮೂಲಕ ಅಯೋಧ್ಯೆ ಕಡೆ ಪಯಣ ಬೆಳೆಸಿದೆವು. ಬಳಿಕ ಏನು ಮಾಡಬೇಕು ಮತ್ತು ಅಲ್ಲಿಂದ ಕರಸೇವೆಗೆ ಪಾಲ್ಗೊಳ್ಳುವುದು ಹೇಗೆ ಎಂಬಿತ್ಯಾದಿ ಸೂಚನೆಗಳು ಪ್ರಮುಖರಿಂದ ನಮಗೆ ಬರುತ್ತಿದ್ದವು. ನಾವು ಅದನ್ನು ಪಾಲಿಸುತ್ತಿದ್ದೆವು. ಹಲವು ರೀತಿಯ ದಿಗ್ಬಂಧನಗಳನ್ನು ದಾಟಿ ಅಯೋಧ್ಯೆಯನ್ನು ತಲುಪಿದೆವು. ಅದೇ ಧನ್ಯ. ಹಾಗಾಗಿ ನಮಗೆ ಶ್ರೀರಾಮ ಲಲ್ಲಾನ ಮೂರ್ತಿಯ ಪ್ರತಿಷ್ಠಾಪನೆ ಮಾಡಿದ್ದನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ದೊರೆಯಿತು. ಶಿರೂರು ಮಠಾಧೀಶರಾದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದ ರೊಂದಿಗೆ ಇದ್ದದ್ದೂ ರಾಮಲಲ್ಲಾನ ಪ್ರತಿಷ್ಠೆ ನೋಡಲು ಸಾಧ್ಯ ವಾಗಿರಬಹುದು. ಕರಸೇವೆಯ ನೆನಪಿಗಾಗಿ ಶ್ರೀರಾಮನ ಮೂರ್ತಿಗೆ ಮುಚ್ಚಿದ್ದ ಬಟ್ಟೆಯನ್ನು ತೆಗೆದುಕೊಂಡು ಬಂದಿ ದ್ದೆವು. ಅದರಲ್ಲಿ ಒಂದನ್ನು ಸಂಘದ ಕಾರ್ಯಾಲಯಕ್ಕೆ ನೀಡಿದ್ದೆವು ಹಾಗೂ ಇನ್ನೊಂದು ಬಟ್ಟೆಯನ್ನು ಇನ್ನೂ ನಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದೇವೆ.
ಕರಸೇವೆಗೆ ಹೋಗಿದ್ದ ನಾವು ಜೀವಂತವಾಗಿ ಮರಳಿ ಬರುತ್ತೇವೆ ಎಂದು ಕೊಂಡಿರಲಿಲ್ಲ. ಯಾವುದೇ ವ್ಯವಸ್ಥೆ ಇರಲಿಲ್ಲ. ಊಟ, ತಿಂಡಿ, ನಿದ್ದೆ ಇತ್ಯಾದಿ ಯಾವುದೂ ಲೆಕ್ಕಕ್ಕಿರಲಿಲ್ಲ. ನಮ್ಮ ಕಣ್ಣಮುಂದೆ ಇದ್ದದ್ದು ಎರಡೇ. ಅಯೋಧ್ಯೆಗೆ ಹೋಗಬೇಕು, ಶ್ರೀ ರಾಮನ ಮೂರ್ತಿ ಪ್ರತಿ ಷ್ಠಾಪಿಸಬೇಕು ಎಂಬುದು ಮಾತ್ರ. ಇದಕ್ಕೆ ಪೂರಕವಾಗಿ ಸಾಧ್ವಿ ಋತಂಬರಾ ಅವರ ಮಾತುಗಳು ನಮ್ಮಲ್ಲಿ ಇನ್ನಷ್ಟು ಸ್ಫೂರ್ತಿ, ಚೈತನ್ಯ ತುಂಬುತ್ತಿದ್ದವು. ಅಯೋಧ್ಯೆಗೆ ಬಂದು ಸರಯೂ ನದಿಯ ಮಣ್ಣನ್ನು ತೆಗೆದುಕೊಂಡು ಹೋಗುವುದಲ್ಲ. ರಾಮ ಮಂದಿರ ನಿರ್ಮಾಣದ ಶಪಥ ಮಾಡಬೇಕು ಮತ್ತು ಶ್ರೀರಾಮನ ಮೂರ್ತಿ ಪ್ರತಿಷ್ಠಾಪಿಸಿಯೇ ಹೋಗಬೇಕು ಎಂದು ಕರೆ ನೀಡಿದ್ದರು. ಆ ಮಾತುಗಳು ಇಂದಿಗೂ ನಮ್ಮ ಕಿವಿಯೊಳಗೆ ಪ್ರತಿಧ್ವನಿಸುತ್ತಿವೆ.
ಕರಸೇವೆಯ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ವಾಪಸ್ ಆಗುವ ಸಂದರ್ಭದಲ್ಲಿ ನಮ್ಮ ಸಂಭ್ರಮ ಮುಗಿಲು ಮುಟ್ಟಿತ್ತು. ಎಲ್ಲ ರೀತಿಯ ಪ್ರತಿಕೂಲ ವಾತಾವರಣದ ನಡುವೆಯೂ ಕನಸು ಸಾಕಾರಗೊಳಿಸಿಕೊಂಡ ಧನ್ಯತಾ ಭಾವ ಮೂಡಿತ್ತು. ಅಂದು ಕರಸೇವೆಯಲ್ಲಿ ಪಾಲ್ಗೊಂಡು, ಶ್ರೀರಾಮ ಮೂರ್ತಿ ಪ್ರತಿಷ್ಠಾಪಿಸಿದ್ದನ್ನು ಕಂಡ ನಾವು ಪ್ರಸ್ತುತ ಅದೇ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯುತ್ತಿರುವುದನ್ನು ಕಾಣಲಿದ್ದೇವೆ. ಜೀವನದಲ್ಲಿ ಇದಕ್ಕಿಂತ ಸೌಭಾಗ್ಯ, ಪುಣ್ಯ ಇನ್ನೇನಿರಲು ಸಾಧ್ಯ? ಒಂದು ಬದುಕಿನಲ್ಲಿ ಎರಡು ಪ್ರತಿಷ್ಠೆ ಕಾಣುವ ಸುಯೋಗ ನಮಗೆ ಸಿಕ್ಕಿತೆಂಬುದೇ ಅದೃಷ್ಟ.
ಸಾಧ್ವಿ ಪೀತಾಂಬರ ಅವರ ಮಾತುಗಳು ನಮ್ಮಲ್ಲಿ ಇನ್ನಷ್ಟು ಸ್ಫೂರ್ತಿ, ಚೈತನ್ಯ ತುಂಬುತ್ತಿದ್ದವು. ಅಯೋಧ್ಯೆಗೆ ಬಂದು ಸರಯೂ ನದಿಯ ಮಣ್ಣನ್ನು ತೆಗೆದುಕೊಂಡು ಹೋಗುವುದಲ್ಲ. ರಾಮ ಮಂದಿರ ನಿರ್ಮಾಣದ ಶಪಥ ಮಾಡಬೇಕು ಮತ್ತು ಶ್ರೀರಾಮನ ಮೂರ್ತಿ ಪ್ರತಿಷ್ಠಾಪಿಸಿಯೇ ಹೋಗಬೇಕು ಎಂದು ಕರೆ ನೀಡಿದ್ದರು. ಆ ಮಾತುಗಳು ಇಂದಿಗೂ ನಮ್ಮ ಕಿವಿಯೊಳಗೆ ಪ್ರತಿಧ್ವನಿಸ್ತುವೆ.
ಕಾಪಾಡಿ ನರೇಂದ್ರ ನಾಯಕ್,
ತೆಂಕುಪೇಟೆ, ಉಡುಪಿ
ನಿರೂಪಣೆ: ರಾಜು ಖಾರ್ವಿ ಕೊಡೇರಿ