Advertisement

ಕಾಞಂಗಾಡ್‌-ಕಾಣಿಯೂರು ರೈಲ್ವೇ ಯೋಜನೆಗೆ ಮರುಜೀವ

10:32 PM Aug 26, 2021 | Team Udayavani |

ಕಾಣಿಯೂರು: ಕೇರಳ-ಕರ್ನಾಟಕ ರಾಜ್ಯಗಳನ್ನು ಬೆಸೆಯುವ ಕಾಞಂಗಾಡ್‌-ಕಾಣಿಯೂರು ರೈಲ್ವೇ ಯೋಜನೆಯನ್ನು ಮುಂದುವರಿಸುವುದಾಗಿ ಕೇರಳ ಸರಕಾರ ತಿಳಿಸಿದ್ದು, ನೇಪಥ್ಯಕ್ಕೆ ಸರಿದಂತಿದ್ದ ಯೋಜನೆಯೊಂದು ಮತ್ತೆ ಮುನ್ನೆಲೆಗೆ ಬಂದಿದೆ.

Advertisement

ವಾಣಿಜ್ಯ, ಪ್ರವಾಸೋದ್ಯಮ ಅಭಿವೃದ್ಧಿ ಮೊದಲಾದ ಕಾರಣಗಳಿಂದ ಈ ಯೋಜನೆ ದಶಕಗಳ ಹಿಂದೆ ಪ್ರಸ್ತಾವಗೊಂಡಿದ್ದರೂ ಬಳಿಕ ಪೂರಕ ಪ್ರಕ್ರಿಯೆಗಳಾಗಿರಲಿಲ್ಲ. 2019-20ರ ಬಜೆಟ್‌ನಲ್ಲಿ ಕೇರಳದ ಭಾಗದಲ್ಲಿ ಯೋಜನೆಯ ಭೂ ಸ್ವಾ ಧೀನ ಮೊದಲಾದ ಪ್ರಕ್ರಿಯೆಗಳಿಗೆ 20 ಕೋಟಿ ರೂ. ಅನುದಾನ ಮೀಸಲಿರಿಸಿತ್ತು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಇತ್ತೀಚೆಗೆ ವಿಧಾನಸಭೆಯಲ್ಲಿ 92 ಕಿ.ಮೀ. ಉದ್ದದ ಈ ರೈಲ್ವೇ ಯೋಜನೆಯನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ.

1,300 ಕೋ.ರೂ. ಯೋಜನೆ:

ಕೇಂದ್ರ ಸರಕಾರ, ಕೇರಳ ಮತ್ತು ಕರ್ನಾಟಕ ಸರಕಾರಗಳ ಪಾಲುದಾರಿಕೆಯಲ್ಲಿ ಯೋಜನೆ ನಿರ್ವಹಿಸಬಹುದು ಎಂಬುದು ಕೇಂದ್ರ ಸರಕಾರದ ನಿಲುವು. 14 ವರ್ಷಗಳ ಹಿಂದೆ ಯೋಜನೆಯ ಆಶಯ ರೂಪುಗೊಂಡಾಗ 92 ಕಿ.ಮೀ. ಕಾಮಗಾರಿ 400 ಕೋಟಿ ರೂ.ಗಳಲ್ಲಿ ಪೂರ್ಣಗೊಳ್ಳಬಹುದು ಎಂದು ಅಂದಾಜಿಸಲಾಗಿತ್ತು. 2015ರಲ್ಲಿ ಸಮೀಕ್ಷೆ ಪೂರ್ತಿಗೊಂಡಾಗ 1,300 ಕೋ.ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಯೋಜನೆ ಆರಂಭಗೊಂಡ ಬಳಿಕ  ಇನ್ನಷ್ಟು ಏರಿಕೆಯಾಗಬಹುದು.

92 ಕಿ.ಮೀ. ಉದ್ದದ ಹಳಿ:

Advertisement

ಕಾಞಂಗಾಡ್‌ನಿಂದ ಪಾಣತ್ತೂರು ವರೆಗೆ 41 ಕಿ.ಮೀ. ಮತ್ತು ಪಾಣತ್ತೂರಿನಿಂದ ಕಾಣಿಯೂರಿಗೆ 51 ಕಿ.ಮೀ. ಸೇರಿದಂತೆ ಒಟ್ಟು 92 ಕಿ. ಮೀ. ಹಳಿ ನಿರ್ಮಿಸಿ ರೈಲ್ವೇ ಸಂಪರ್ಕ ಸಾ ಧಿಸುವುದು ಯೋಜನೆಯ ಉದ್ದೇಶ. ಕಾಞಂಗಾಡ್‌ನಿಂದ ಕೊಟ್ಟೋಡಿ, ಬಳಾಂತೋಡ್‌, ಪಾಣತ್ತೂರು, ಕಲ್ಲಪಳ್ಳಿ, ಆಲೆಟ್ಟಿ, ಸುಳ್ಯ ಮೂಲಕ ಕಾಣಿಯೂರಿನಲ್ಲಿ ಮಂಗಳೂರು-ಬೆಂಗಳೂರು ಹಳಿಯನ್ನು ಸಂಧಿಸಿ ರೈಲ್ವೇ ಸಂಪರ್ಕ ಸಾಧಿಸುವುದು ಯೋಜನೆಯ ರೂಪ.

ಹಳಿಯ ಹಾದಿ:

2006-07ರಲ್ಲಿ ಕಾಞಂಗಾಡ್‌-ಕಾಣಿಯೂರು ರೈಲ್ವೇ ಹಳಿ ಎಂಬ ಕನಸಿನ ಯೋಜನೆಯ ಆಶಯ ರೂಪುಗೊಂಡಿತು. ರೈಲ್ವೇ ಸಚಿವ ಲಾಲೂ ಪ್ರಸಾದ್‌ ಯಾದವ್‌ 2008-09ರ ರೈಲ್ವೇ ಬಜೆಟ್‌ನಲ್ಲಿ ಪ್ರಥಮವಾಗಿ ಸರ್ವೇಗೆ ಅನುದಾನ ಮೀಸಲಿರಿಸಿದ್ದರು. ಪ್ರಥಮ ಹಂತದಲ್ಲಿ ಕಾಞಂಗಾಡ್‌ನಿಂದ ಪಾಣತ್ತೂರು ವರೆಗೆ ಸಮೀಕ್ಷೆ ನಡೆಸಲಾಯಿತು. 2010-11ರ ಬಜೆಟ್‌ನಲ್ಲಿ ಎರಡನೇ ಹಂತದಲ್ಲಿ ಪಾಣತ್ತೂರಿನಿಂದ ಕಾಣಿಯೂರು ತನಕ ಸರ್ವೇಗೆ ಅನುದಾನ ಮೀಸಲಿರಿಸಿದರೂ ಸರ್ವೇ ನಡೆಯಲಿಲ್ಲ. 2012-2013ರಲ್ಲಿಯೂ ಸರ್ವೇಗೆ ಆದೇಶ ನೀಡಿದರೂ ಕೈಗೂಡಿಲ್ಲ. ಡಿ.ವಿ. ಸದಾನಂದ ಗೌಡರು ರೈಲ್ವೇ ಸಚಿವರಾಗಿ ಮಂಡಿಸಿದ 2014-15ನೇ ಸಾಲಿನ ರೈಲ್ವೇ ಬಜೆಟ್‌ನಲ್ಲಿ ಕಾಞಂಗಾಡ್‌ನಿಂದ ಕಾಣಿಯೂರು ವರೆಗೆ ಪೂರ್ತಿ ಸರ್ವೇಗೆ ಅನುದಾನ ಮೀಸಲಿರಿಸಿದರು. 2015ರ ಮಾರ್ಚ್‌ನಲ್ಲಿ ಸಮೀಕ್ಷೆ ಪೂರ್ತಿಗೊಳಿಸಿ ವರದಿ ಸಲ್ಲಿಸಲಾಗಿದೆ. ಬಳಿಕ ರಾಜ್ಯ ಸರಕಾರಗಳ ಪಾಲುದಾರಿಕೆಯ ಒಪ್ಪಿಗೆ ಮತ್ತಿತರ ಪ್ರಕ್ರಿಯೆಗಳು ನಡೆಯದ ಕಾರಣ ಯೋಜನೆ ಮುಂದೆ ಸಾಗಿಲ್ಲ.

ಏನು ಪ್ರಯೋಜನ?:

  • ಕೇರಳ, ಕರ್ನಾಟಕದ ಗಡಿಯಲ್ಲಿರುವ ಗ್ರಾಮಗಳಿಗೆ ರೈಲು ಸಂಪರ್ಕ ಕಲ್ಪಿಸಿ ಸಂಚಾರ ಕ್ರಾಂತಿ ಸಾಧ್ಯವಾಗಿಸುವುದರ ಜತೆಗೆ ಎರಡೂ ರಾಜ್ಯಗಳ ಗ್ರಾಮಗಳ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಬಹುದು
  • ಕೇರಳಕ್ಕೆ ಬೆಂಗಳೂರು, ಮೈಸೂರು ಇನ್ನಷ್ಟು ಹತ್ತಿರ
  • ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ, ಮಾರುಕಟ್ಟೆ ದೊರೆಯಲಿದೆ
  • ಶಿಕ್ಷಣ ಕೇಂದ್ರವಾದ ಸುಳ್ಯಕ್ಕೆ ಕೇರಳದಿಂದ ಬರುವವರಿಗೆ ಸುಲಭ ಪ್ರಯಾಣ
  • ಬೇಕಲ ಕೋಟೆ, ರಾಣಿಪುರಂ, ಕೊಡಗಿನ ಪ್ರವಾಸೀ ತಾಣಗಳ ಅಭಿವೃದ್ಧಿಗೆ ವಿಪುಲ ಅವಕಾಶ
  • ಶಬರಿಮಲೆ, ತಲಕಾವೇರಿ, ಸುಬ್ರಹ್ಮಣ್ಯ, ಧರ್ಮಸ್ಥಳ ಯಾತ್ರಿಕರಿಗೆ ಹೆಚ್ಚಿನ ಅನುಕೂಲ

ಕಾಞಂಗಾಡ್‌-ಕಾಣಿಯೂರು ರೈಲು ಹಳಿ ನಿರ್ಮಾಣಕ್ಕೆ ಕೇರಳ ಸರಕಾರ ಒಪ್ಪಿಗೆ ನೀಡಿದ್ದು ಬಜೆಟ್‌ನಲ್ಲಿ ಅನುದಾನವನ್ನೂ ಮೀಸಲಿರಿಸಿದೆ. ಯೋಜನೆಗೆ ಕರ್ನಾಟಕ ಸರಕಾರವೂ ಅನುದಾನ ಬಿಡುಗಡೆ ಮಾಡಿ ಅನುಷ್ಠಾನಕ್ಕೆ ಪ್ರಯತ್ನ ನಡೆಸಬೇಕಾಗಿದೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯದ ಸಚಿವರು, ಸಂಸದರು ಮತ್ತು ಶಾಸಕರ ಪ್ರಯತ್ನ ಅಗತ್ಯ.ಪಿ.ಬಿ. ಸುಧಾಕರ ರೈ, ಕಾರ್ಯದರ್ಶಿ ಕಾಞಂಗಾಡ್‌-ಕಾಣಿಯೂರು ರೈಲ್ವೇ ಹಳಿ ಕ್ರಿಯಾ ಸಮಿತಿ

 

-ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next