ಬೆಳ್ತಂಗಡಿ: ಸದ್ಗುಣ, ಮಾನವೀಯ ಮೌಲ್ಯಗಳನ್ನು ಬೆಳೆಸುವ ದೃಷ್ಟಿಯಿಂದ ಪ್ರತಿವರ್ಷ ಆಯೋಜನೆಗೊಳ್ಳುತ್ತಿರುವ ವಿಶ್ವ ಹೃದಯ ಸಮ್ಮೇಳನ ಎಲ್ಲರ ಹೃದಯ ಸಮ್ಮಿಲನದ ಕಾರ್ಯವನ್ನು ಮಾಡುತ್ತಿದೆ. ಋಷಿ ಪ್ರಭಾಕರ್ ಅವರು ಜ್ಞಾನದ ಬೆಳಕನ್ನು ನೀಡುವ ದೃಷ್ಟಿಯಿಂದ ಈ ಸಮ್ಮೇಳನಕ್ಕೆ ನಾಂದಿ ಹಾಡಿದ್ದಾರೆ ಎಂದು ಉಡುಪಿ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ಬೆಂಗಳೂರಿನ ಋಷಿ ಸಂಸ್ಕೃತಿ ವಿದ್ಯಾಕೇಂದ್ರ ಟ್ರಸ್ಟ್ ವತಿಯಿಂದ ಮೂರು ದಿನಗಳ ಕಾಲ ಆಯೋಜನೆಗೊಂಡಿರುವ ವಿಶ್ವ ಹೃದಯ ಸಮ್ಮೇಳನವನ್ನು ಉದ್ಘಾಟಿಸಿ ಆಶೀರ್ವಚಿಸಿದರು. ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ನಮ್ಮ ಹೃದಯದಲ್ಲಿನ ಜೀವಾತ್ಮ ಕ್ರಿಯಾಶೀಲವಾಗಿದ್ದಾಗ ಮನಸ್ಸು ಕ್ರಿಯಾಶೀಲವಾಗಿ ಭಕ್ತಿಯ ಜ್ವಾಲೆ ಅರಳುವುದಕ್ಕೆ ಸಾಧ್ಯವಾಗುತ್ತದೆ. ಜತೆಗೆ ಮುಖದಲ್ಲಿ ಮಂದಹಾಸವೂ ನಮ್ಮನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದರು.
ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಹೊಸದುರ್ಗದ ಶ್ರೀ ಶ್ರೀಕಾಂತಾನಂದ ಸರಸ್ವತಿ ಮಹಾರಾಜ್, ಶಿವಮೊಗ್ಗದ ಶ್ರೀ ಬ್ರಹ್ಮಾನಂದತೀರ್ಥ ಭಿಕ್ಷು, ಹೊರನಾಡು ಕ್ಷೇತ್ರದ ಧರ್ಮಕರ್ತ ಡಾ| ಜಿ. ಭೀಮೇಶ್ವರ ಜೋಷಿ, ಬೆಂಗಳೂರಿನ ಶ್ರೀಕಂಠ ಗುರೂಜಿ, ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಸತೀಶ್, ಪ್ರಮುಖರಾದ ಚಿತ್ತರಂಜನ್ ಗರೋಡಿ, ಪೀತಾಂಬರ ಹೇರಾಜೆ, ಮೋಹನ್ ಉಜ್ಜೋಡಿ, ಸುಜಿತಾ ವಿ. ಬಂಗೇರ, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಉಪಸ್ಥಿತರಿದ್ದರು. ಟ್ರಸ್ಟ್‌ನ ಟ್ರಸ್ಟಿ ಎಚ್.ಎಸ್. ರಮೇಶಚಂದ್ರ ಸ್ವಾಗತಿಸಿ, ಎನ್. ನಾಗೇಂದ್ರಕುಮಾರ್ ನಿರೂಪಿಸಿದರು.
ಗಾಯತ್ರಿ ಯಜ್ಞ
ಸಮ್ಮೇಳನದ ಜತೆಗೆ ಗಾಯತ್ರಿ ಯಜ್ಞವನ್ನೂ ಮಾಡಲಾಗುತ್ತಿದ್ದು, ಅದು ಒಳ್ಳೆಯ ಬುದ್ಧಿ ನೀಡುತ್ತದೆ. ಇಂತಹ ಸಮ್ಮೇಳನವನ್ನು ರಾಮೇಶ್ವರದಷ್ಟೇ ಪುಣ್ಯ ಹೊಂದಿರುವ ಕನ್ಯಾಡಿಯಲ್ಲಿ ಆಯೋಜಿಸಿರುವುದು ಅತ್ಯಂತ ಸೂಕ್ತ.
– ಶ್ರೀ ವಿಶ್ವೇಶತೀರ್ಥ
ಸ್ವಾಮೀಜಿ ಶ್ರೀ ಪೇಜಾವರ ಮಠ, ಉಡುಪಿ