ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಕನ್ವರ್‌ಯಾತ್ರೆ ಸಾಗುವ ಮಾರ್ಗದಲ್ಲಿರುವ ಹೊಟೇಲ್‌ಗಳು ಮುಂಭಾಗದಲ್ಲಿ ಅವುಗಳ ಮಾಲಕರ ಹೆಸರಿನ ಫಲಕ ಹಾಕಬೇಕೆಂದು ಉತ್ತರ ಪ್ರದೇಶದ ಪೊಲೀಸರು ಆದೇಶಿಸಿದ ವಿಚಾರದ ಕುರಿತು ಪರ-ವಿರೋಧದ ಚರ್ಚೆ ತೀವ್ರವಾಗಿದ್ದು, ನಟ ಸೋನು ಸೂದ್ ಅವರು ಮಾಡಿರುವ ಪೋಸ್ಟ್ ವೊಂದಕ್ಕೆ ನಟಿ, ಸಂಸದೆ ಕಂಗನಾ ರಣಾವತ್ ತಿರುಗೇಟು ನೀಡಿದ್ದಾರೆ.
ಸೋನು ಸೂದ್ ಅವರು ಎಕ್ಸ್ ಪೋಸ್ಟ್ ನಲ್ಲಿ ಅಂಗಡಿಗಳ ನಾಮಫಲಕಗಳಲ್ಲಿ ಕೇವಲ “ಮಾನವೀಯತೆ”(humanity)ಯನ್ನು ಪ್ರದರ್ಶಿಸಬೇಕು ಎಂದು ಪೋಸ್ಟ್ ಮಾಡಿದ್ದರು. ಇದಕ್ಕೆ ಕಂಗನಾ ರಣಾವತ್ ನಟನ ನಿಲುವನ್ನು ಪ್ರಶ್ನಿಸಿ ಮತ್ತೊಂದು ಪೋಸ್ಟ್ ಮಾಡಿದ್ದಾರೆ. “ಒಪ್ಪುತ್ತೇನೆ, ಹಲಾಲ್ ಅನ್ನು ಕೂಡ “ಮಾನವೀಯತೆ” ಎಂದು ಬದಲಿಸಬೇಕು” ಎಂದು ಎಕ್ಸ್ ಪೋಸ್ಟ್ ಮಾಡಿ ತಿರುಗೇಟು ನೀಡಿದ್ದಾರೆ.
ಸಂಸದೆ ಮತ್ತೊಂದು ಪೋಸ್ಟ್ ನಲ್ಲಿ ”ದೇವರು ಮತ್ತು ಧರ್ಮದ ಬಗ್ಗೆ ತನ್ನದೇ ಆದ ವೈಯಕ್ತಿಕ ಸಂಶೋಧನೆಗಳ ಆಧಾರದ ಮೇಲೆ ಸೋನು ಜಿ ತನ್ನದೇ ಆದ ರಾಮಾಯಣವನ್ನು ನಿರ್ದೇಶಿಸುತ್ತಾರೆ ಎಂದು ನಿಮಗೆ ತಿಳಿದಿದೆ. ವಾಹ್ ಕ್ಯಾ ಬಾತ್ ಹೇ, ಬಾಲಿವುಡ್ ಸೆ ಏಕ್ ಔರ್ ರಾಮಾಯಣ” ಎಂದು ಬಹಿರಂಗ ಆಕ್ರೋಶ ಹೊರ ಹಾಕಿದ್ದಾರೆ.
ಯಾತ್ರಿಕರಿಗೆ ಗೊಂದಲವಾಗದಂತೆ, ಭವಿಷ್ಯದಲ್ಲಿ ಯಾವುದೇ ಆರೋಪ ಕೇಳಿ ಬರದಂತೆ ತಡೆಯಲು ಹೊಟೇಲ್, ಢಾಬಾ, ರಸ್ತೆಬದಿಯ ತಳ್ಳುಗಾಡಿಗಳು ತಮ್ಮ ಮಾಲಕರ ಹೆಸರನ್ನು ಸ್ಪಷ್ಟವಾಗಿ ಕಾಣುವಂತೆ ಅಳವಡಿಸಿ ಎಂದು ಪೊಲೀಸರು ಆದೇಶಿಸಿದ್ದರು. ಈ ವಿಚಾರ ಕಾಂಗ್ರೆಸ್, ಸಮಾಜವಾದಿ ಪಕ್ಷ, ಮುಸ್ಲಿಂ ಸಂಘಟನೆಗಳು ಸೇರಿ ಹಲವರು ತೀವ್ರವಾಗಿ ಖಂಡಿಸಿದ್ದರು. ಚಿತ್ರಕಥೆಗಾರ ಜಾವೇದ್ ಅಖ್ತರ್ ಕೂಡ ಘಟನೆಯ ಕುರಿತು ಆಡಳಿತವನ್ನು ತೀವ್ರವಾಗಿ ಟೀಕಿಸಿದ್ದರು.