ಮೂಡುಬಿದಿರೆ: ಅನ್ಯಾಯ, ಅನಾಚಾರ ನಡೆದಾಗ ಪ್ರತಿರೋಧಿಸಬಲ್ಲವರಾಗಬೇಕು. ನಮ್ಮ ನಡೆನುಡಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಂಡಾಗ ಮಾತ್ರ ಆ ಆರ್ಹತೆ ಪ್ರಾಪ್ತಿಯಾಗುತ್ತದೆ. ವೈಯಕ್ತಿಕ ವಾಗಿ ಸ್ವಚ್ಛ ಬದುಕನ್ನು ರೂಢಿಸದೆ ಅನ್ಯರಿಗೆ ಬೋಧಿಸುವ ಚಪಲ ಸಲ್ಲದು ಎಂದು ರಂಗಕರ್ಮಿ, ಸಾಹಿತಿ ಎಸ್.ಎನ್. ಸೇತುರಾಮ್ ಅಭಿಪ್ರಾಯಪಟ್ಟರು.
ಕಾಂತಾವರ ಕನ್ನಡ ಸಂಘದ ಆಶ್ರಯದಲ್ಲಿ ಕನ್ನಡ ಭವನದಲ್ಲಿ ರವಿವಾರ ನಡೆದ ಮುದ್ದಣ ಸಾಹಿತ್ಯೋತ್ಸವ- 2022ರಲ್ಲಿ 43ನೇ ವರ್ಷದ ಮುದ್ದಣ ಕಾವ್ಯ ಪ್ರಶಸ್ತಿ ಮತ್ತು ಸಂಘದ ಇತರ ದತ್ತಿನಿಧಿಗಳ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ.ಸಾ.ಪ. ರಾಜ್ಯ ಮಾಜಿ ಅಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಪಠೇಲ್ ಪುನರೂರು ವಾಸುದೇವ ರಾವ್ ಸ್ಮಾರಕ ದತ್ತಿಯ ಮುದ್ದಣ ಕಾವ್ಯ ಪ್ರಶಸ್ತಿ ವಿಜೇತ ಕವನ ಸಂಕಲನ ಬಿಡುಗಡೆಗೊಳಿಸಿ, ಚಿತ್ರದುರ್ಗದ ಡಾ| ತಾರಿಣಿ ಶುಭದಾಯಿನಿ ಅವರಿಗೆ “ಮುದ್ದಣ ಕಾವ್ಯ ಪ್ರಶಸ್ತಿ’ ಪ್ರದಾನ ಮಾಡಿದರು.
ಹಿರಿಯ ಪತ್ರಕರ್ತ ರವೀಂದ್ರ ಭಟ್ ಐನಕೈ ಅವರಿಗೆ ಪಾ.ವೆಂ. ಆಚಾರ್ಯ ಹೆಸರಿನ “ಪತ್ರಿಕಾ ಮಾಧ್ಯಮ ಪ್ರಶಸ್ತಿ’ ಮತ್ತು ಡಾ| ಬೇಲೂರು ರಘನಂದನ ಅವರಿಗೆ ರಂಗಕರ್ಮಿ ಶ್ರೀಪತಿ ಮಂಜನಬೈಲ್ ಅವರ “ರಂಗಸಮ್ಮಾನ್ ಪ್ರಶಸ್ತಿ’ ಯನ್ನು ಹರಿಕೃಷ್ಣ ಪುನರೂರು ಪ್ರದಾನಗೈದರು.
ಸಾಹಿತಿ ಕೆ.ಇ. ರಾಧಾಕೃಷ್ಣ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದರು. ಡಾ| ತಾರಿಣಿ ಮತ್ತು ರವೀಂದ್ರ ಭಟ್ ಐನಕೈ ಅವರು ಪ್ರಶಸ್ತಿಯ ಮೊತ್ತವನ್ನು ಕನ್ನಡ ಸಂಘಕ್ಕೆ ದೇಣಿಗೆಯಾಗಿ ಮರಳಿಸಿದರೆ, ಡಾ| ಬೇಲೂರು ರಘುನಂದನ ಮೊತ್ತವನ್ನು ರಂಗಭೂಮಿಯಲ್ಲಿ ತಮ್ಮೊಂದಿಗೆ ದುಡಿಯುತ್ತಿರುವ ಐವರಿಗೆ ಹಂಚುವುದಾಗಿ ಪ್ರಕಟಿಸಿದರು.
ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ| ನಾ. ಮೊಗಸಾಲೆ ಪ್ರಸ್ತಾವಿಸಿದರು. ಪ್ರ. ಕಾರ್ಯದರ್ಶಿ ಸದಾನಂದ ನಾರಾವಿ ಸ್ವಾಗತಿಸಿ, ಜತೆ ಕಾರ್ಯದರ್ಶಿ ಸತೀಶ್ ಕುಮಾರ್ ಕೆಮ್ಮಣ್ಣು ವಂದಿಸಿದರು. ಮಹಾವೀರ ಪಾಂಡಿ ನಿರೂಪಿಸಿದರು.