Advertisement
ಕಾಂತಮಂಗಲ ಸೇತುವೆ ದುರಸ್ತಿ 15 ಲಕ್ಷ ರೂ. ವೆಚ್ಚದಲ್ಲಿ ನಡೆಯಲಿದೆ. ಒಂದು ತಿಂಗಳ ಅವಧಿಯಲ್ಲಿ ಸೇತುವೆ ಮೇಲ್ಭಾಗವನ್ನು ಅಗೆದು, ಕಬ್ಬಿಣದ ಬೆಲ್ಟ್‌ಗಳನ್ನು ಅಳವಡಿಸಿ, ಮೂರು ಇಂಚಿನ ಕಾಂಕ್ರೀಟ್ ಹಾಕುವ ಕಾಮಗಾರಿ ನಡೆಯಲಿದ್ದು, ಸೆ. 7ರಿಂದ ಸುಳ್ಯ – ಮಂಡೆಕೋಲು ರಸ್ತೆ ಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಪರ್ಯಾಯ ಮಾರ್ಗ ಅನುಸರಿಸಬೇಕು ಎಂದು ಜಿ.ಪಂ. ಎಂಜಿನಿಯರಿಂಗ್ ವಿಭಾಗ ತಿಳಿಸಿದೆ. ಈ ಭಾಗದ ಜನರು ಕಾಂತಮಂಗಲ- ಅಜ್ಜಾವರ ರಸ್ತೆಯನ್ನೆ ನೆಚ್ಚಿಕೊಂಡಿದ್ದಾರೆ. ಹೀಗಾಗಿ, ಕಾಂತಮಂಗಲ ಸೇತುವೆ ತನಕ ಒಂದು ವಾಹನದಲ್ಲಿ ಸಂಚರಿಸಿ, ಕಾಲ್ನಡಿಗೆಯಲ್ಲಿ ಸೇತುವೆ ದಾಟಿ, ಅದರಾಚೆಗೆ ಮತ್ತೊಂದು ವಾಹನ ಹಿಡಿದು ಹೋಗುತ್ತಿದ್ದಾರೆ.
ಮಂಡೆಕೋಲು ಗ್ರಾಮದಿಂದ ಕಾಂತಮಂಗಲ ಸೇತುವೆ ವರೆಗೆ ಬಸ್ ಓಡಾಟ ಇದೆ. ಸೇತುವೆಯ ಎರಡೂ ಭಾಗಗಳಲ್ಲಿ ಜನರ ಅನುಕೂಲಕ್ಕಾಗಿ ಆಟೋ ರಿಕ್ಷಾಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಜನ ದೊಡ್ಡೇರಿ, ಕಾಂತಮಂಗಲಕ್ಕೆ ತೆರಳುತ್ತಿದ್ದಾರೆ. ಸಂಚಾರ ವೆಚ್ಚ ದುಬಾರಿ
ಕೆಲಸ ಕಾರ್ಯಗಳಿಗೆ ದಿನನಿತ್ಯ ಸುಳ್ಯ ಕಡೆಗೆ ಬರುವ ಜನರು ಎರಡು ವಾಹನಗಳನ್ನು ಬದಲಾಯಿಸಬೇಕಿದ್ದು, ಪ್ರಯಾಣ ದರ ಬಿಸಿ ಮುಟ್ಟಿಸಿದೆ. ಮಂಡೆಕೋಲು, ಅಜ್ಜಾವರದಿಂದ ಕಾಂತ ಮಂಗಲದವರೆಗೆ ಒಂದು ವಾಹನದಲ್ಲಿ ಹಾಗೂ ಸೇತುವೆಯ ಇನ್ನೊಂದು ಭಾಗದಿಂದ ಸುಳ್ಯಕ್ಕೆ ಮತ್ತೊಂದು ವಾಹನದಲ್ಲಿ ಸಂಚರಿಸಬೇಕಿದೆ. ಆಟೋಗಳ ದರ ಭರಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯರಾದ ವೆಂಕಟ್ರಮಣ ಭಟ್.
Related Articles
ಬದಲಿ ಮಾರ್ಗವೂ ಕಾಂತಮಂಗಲ ರಸ್ತೆಗೆ ಹೋಲಿಸಿದರೆ ದೂರವೇ. ಅಜ್ಜಾವರ- ನಾರ್ಕೋಡು – ಸುಳ್ಯ ರಸ್ತೆ 14 ಕಿ.ಮೀ. ಉದ್ದವಿದ್ದರೆ ಅಲ್ಲಿಂದ ಅಜ್ಜಾವರ, ಮಂಡೆಕೋಲಿಗೆ 6 ಕಿ.ಮೀ. ದೂರವಿದೆ. ಮಂಡೆಕೋಲು – ಮುರೂರು – ಜಾಲ್ಸೂರು ಮಾರ್ಗವಾಗಿ ಸಂಚರಿಸಿದರೆ 18 ಕಿ.ಮೀ. ದೂರವಾಗುತ್ತದೆ. ಪೇರಾಲು – ಆಡ್ಕಾರು ಮಾರ್ಗವೂ 16 ಕಿ.ಮೀ. ಆಗುತ್ತದೆ. 14 ಕಿ.ಮೀ. ಇರುವ ಸುಳ್ಯ- ಕಾಂತಮಂಗಲ – ಮಂಡೆಕೋಲು ರಸ್ತೆಯೇ ಎಲ್ಲರಿಗೂ ಅನುಕೂಲ.
Advertisement
ಸುಳ್ಯ- ನಾರ್ಕೋಡು ರಸ್ತೆ ಶಿಥಿಲಸುಳ್ಯದಿಂದ ನಾರ್ಕೋಡು ಮಾರ್ಗವಾಗಿ ಅಜ್ಜಾವರ ತಲುಪುವ ರಸ್ತೆಯ ಡಾಮರು ಕಿತ್ತುಹೋಗಿ ಸಂಪೂರ್ಣ ಹಾಳಾಗಿದೆ. ಈ ಭಾಗದಲ್ಲಿ ಲಾರಿಗಳ ಓಡಾಟವೂ ಜಾಸ್ತಿ. ಅಜ್ಜಾವರ, ಮಂಡೆಕೋಲು ಗ್ರಾಮಸ್ಥರು ಈ ರಸ್ತೆಯನ್ನು ಅಷ್ಟಾಗಿ ಆಶ್ರಯಿಸಿಲ್ಲ. ದುರಸ್ತಿಯಾದರೆ ಈ ಮಾರ್ಗವನ್ನು ಬದಲಿ ರಸ್ತೆಯಾಗಿ ಉಪಯೋಗಿಸಬಹುದು ಎನ್ನುತ್ತಾರೆ ಸ್ಥಳೀಯರು. ಅಡ್ಕಾರು ಪ್ರದೇಶದಿಂದ ಪೇರಾಲುವರೆಗೆ ರಸ್ತೆ ಚೆನ್ನಾಗಿದೆ. ಅಜ್ಜಾವರ – ಮಂಡೆಕೋಲು ಭಾಗದ ಜನರು ಈ ರಸ್ತೆಯನ್ನು ಬದಲಿ ಮಾರ್ಗವಾಗಿ ಬಳಸುತ್ತಿದ್ದಾರೆ. ತುಸು ದೂರವೆನಿಸಿದರೂ ಸ್ವಂತ ವಾಹನವಿದ್ದವರು ಇದರಲ್ಲೇ ಓಡಾಡುತ್ತಿದ್ದಾರೆ. ದ್ವಿಚಕ್ರ ವಾಹನ ಗಳು, ಕಾರು, ಪಿಕಪ್, ಸಣ್ಣ ಲಾರಿಗಳು ಈ ಮಾರ್ಗವಾಗಿ ಸಂಚರಿಸುತ್ತಿವೆ. ಜಾಲ್ಸೂರು- ಮುರೂರು – ಮಂಡೆಕೋಲು ರಸ್ತೆ ಸುಗಮವಾಗಿದ್ದರೂ ಸುಳ್ಯ ಭಾಗದ ಜನರು ಸಂಚರಿಸುವುದು ಕಡಿಮೆ. ಸುಳ್ಯದಿಂದ 18 ಕಿ.ಮೀ. ದೂರ ಇರುವುದೇ ಇದಕ್ಕೆ ಕಾರಣ. ಬದಲಿ ವ್ಯವಸ್ಥೆ ಇಲ್ಲ
ಸೇತುವೆಯನ್ನು ಮುಚ್ಚಿಸಿ ಸಂಚಾರ ನಿಷೇಧಿಸಿದರೂ ಜನರ ಓಡಾಟಕ್ಕೆ ಬದಲಿ ವ್ಯವಸ್ಥೆ ಮಾಡಿಲ್ಲ. ಮೊದಲೇ ಈ ಭಾಗದಲ್ಲಿ ಬಸ್ ಸಂಚಾರ ವಿರಳ. ರಸ್ತೆ ಬಂದ್ ಆದ ಮೇಲೆ ಜನರು ಪರದಾಡುವಂತಾಗಿದೆ. ಹೀಗಾಗಿ, ಶಿಥಿಲಗೊಂಡಿರುವ ನಾರ್ಕೋಡು, ಅಡ್ಪಾಂಗಾಯ ಅಜ್ಜಾವರ ರಸ್ತೆ ದುರಸ್ತಿ ಮಾಡಿಸಬೇಕು. ಮಂಡೆಕೋಲು ಅಜ್ಜಾವರ ಪೇರಾಲು ಅಡ್ಕಾರು ಸುಳ್ಯಕೆ ಹೆಚ್ಚಿನ ಬಸ್ ಸೇವೆ ಒದಗಿಸಬೇಕು. ಶೀಘ್ರವಾಗಿ ಸೇತುವೆ ದುರಸ್ತಿ ಕಾರ್ಯ ಮುಗಿಸಬೇಕು ಎಂದು ಸ್ಥಳೀಯರಾದ ನವೀನ್ ಆಗ್ರಹಿಸಿದ್ದಾರೆ. ಸೇತುವೆಯಲೇ ಓಡಾಟ
ಜನರು ಸೇತುವೆಯ ಮೇಲೆ ಓಡಾಡುವುದರಿಂದ ದುರಸ್ತಿ ಕಾಮಗಾರಿಗೆ ಅಡ್ಡಿಯಾಗುತ್ತಿದೆ. ರಸ್ತೆ ಮುಚ್ಚಿದ್ದರೂ ಜನರ ಸಂಚಾರ ಕಡಿಮೆ ಯಾಗಿಲ್ಲ. ದ್ವಿಚಕ್ರ ವಾಹನಗಳಲ್ಲಿ ಬರುವವರೂ ಸೇತುವೆಯ ಒಂದು ಭಾಗದಲ್ಲಿ ವಾಹನ ನಿಲ್ಲಿಸಿ, ನಡೆದು ಬರುತ್ತಿದ್ದಾರೆ ಎಂದು ಕಾರ್ಮಿಕರು ಹೇಳುತ್ತಿದ್ದಾರೆ. ಅವಲಂಬನೆ
ಸೇತುವೆ ದುರಸ್ತಿ ಆರಂಭವಾದ ಮೇಲೆ ಜನರು ಹೆಚ್ಚಾಗಿ ಆಟೋ ಅವಲಂಬಿಸಿದ್ದಾರೆ. ಜನರು ಅಜ್ಜಾವರ, ಮಂಡೆಕೋಲು ಭಾಗಕ್ಕೂ ಆಟೋದಲ್ಲಿ ಹೋಗುತ್ತಿದ್ದಾರೆ.
– ಸದಾನಂದ, ಆಟೋ ಚಾಲಕ ಶಿವಪ್ರಸಾದ್ ಮಣಿಯೂರು