ಸುಳ್ಯ: ಅಜ್ಜಾವರ ಗ್ರಾಮ ಸಂಪರ್ಕಿಸುವ ಮಾರ್ಗ ನಡುವೆ ಇರುವ ಕಾಂತಮಂಗಲ ಸೇತುವೆ ಶಿಥಿಲಗೊಂಡಿದ್ದು, 15 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಆಗುವ ಹಿನ್ನೆಲೆಯಲ್ಲಿ ಈ ರಸ್ತೆಯನ್ನು ಬಂದ್ ಮಾಡಲಾಗುತ್ತಿದೆ. ಸೆ. 7ರಿಂದ ಈ ಮಾರ್ಗದಲ್ಲಿ ಸಂಚಾರ ನಿಷೇಧಗೊಳ್ಳಲಿದೆ ಎಂದು ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ವಿಭಾಗ ತಿಳಿಸಿದೆ. ಒಂದು ತಿಂಗಳ ಕಾಲ ಕಾಮಗಾರಿ ನಡೆಯಲಿದೆ. ಸೇತುವೆ ಮೇಲ್ಭಾಗವನ್ನು ಅಗೆದು, ಕಬ್ಬಿಣದ ಬೆಲ್ಟ್‌ಗಳನ್ನು ಅಳವಡಿಸಿ, ಬಳಿಕ ಮೂರು ಇಂಚಿನಲ್ಲಿ ಕಾಂಕ್ರೀಟ್ ಹಾಕಿ ಸೇತುವೆ ಸರಿಪಡಿಸುವ ಕಾಮಗಾರಿ ನಡೆಯಲಿದೆ.
ಬದಲಿ ಮಾರ್ಗ ವ್ಯವಸ್ಥೆ
ಮಂಡೆಕೋಲು, ಅಜ್ಜಾವರ ಗ್ರಾಮದ ಜನರು ಸುಳ್ಯ ನಗರ ತಲುಪಲು ಕಾಂತಮಂಗಲ ಸೇತುವೆಯನ್ನು ಅವಲಂಬಿಸಿದ್ದಾರೆ. ಕಾಮಗಾರಿಯಿಂದ ಸಂಚಾರ ನಿಷೇಧವಾಗುವುದರಿಂದ ಜನರು ಬದಲಿ ಮಾರ್ಗವನ್ನು ಬಳಸಬೇಕಿದೆ. ಮಂಡೆಕೋಲು- ಮುರೂರು- ಜಾಲ್ಸೂರು ಮಾರ್ಗವಾಗಿ ಸುಳ್ಯಕ್ಕೆ ಸಂಚರಿಸಬಹುದು. ಅಡ್ಪಂಗಾಯ- ಪೇರಾಲು-ಬೈತಡ್ಕ ಮಾರ್ಗವಾಗಿ ಸುಳ್ಯ, ಅಜ್ಜಾವರ- ಪೇರಾಲು- ಬೈತಡ್ಕ- ಸುಳ್ಯ, ಅಜ್ಜಾವರ- ನಾರ್ಕೋಡು- ಸುಳ್ಯ ರಸ್ತೆಯನ್ನು ಬಳಸಿಕೊಳ್ಳಬಹುದು.