Advertisement

ಸೆ. 5ರಿಂದ ಕಾಂತಮಂಗಲ ಸೇತುವೆ ದುರಸ್ತಿ

11:03 AM Aug 30, 2018 | Team Udayavani |

ಸುಳ್ಯ : ಕುಸಿದು ಬೀಳುವ ಹಂತದಲ್ಲಿರುವ ಅಂತಾರಾಜ್ಯ ಸಂಪರ್ಕ ರಸ್ತೆಯ ಕಾಂತಮಂಗಲ ಸೇತುವೆ ದುರಸ್ತಿಗೆ ಮುಹೂರ್ತ ಕೂಡಿ ಬಂದಿದೆ. ಮಂಜೂರಾತಿ 5 ಲಕ್ಷ ರೂ. ಅನುದಾನ ಸೇರಿ ಒಟ್ಟು 15 ಲಕ್ಷ ರೂ. ವೆಚ್ಚದಲ್ಲಿ ಸೆ. 5ರಿಂದ ಸೇತುವೆ ದುರಸ್ತಿ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಸುಳ್ಯ-ಅಜ್ಜಾವರ-ಮಂಡೆಕೋಲು ರಸ್ತೆಯ ಕಾಂತಮಂಗಲದಲ್ಲಿ ಪಯಸ್ವಿನಿ ನದಿಗೆ 35 ವರ್ಷಗಳ ಹಿಂದೆ ನಿರ್ಮಿಸಿರುವ ಸೇತುವೆ ಶಿಥಿಲಾವಸ್ಥೆಗೆ ತಲುಪಿತ್ತು. ಮೇಲ್ಪದರ ಶಿಥಿಲಗೊಂಡು, ದೊಡ್ಡದಾದ ಬಿರುಕು ಸೃಷ್ಟಿಯಾಗಿದೆ. ಸೇತುವೆ ಮೇಲೆ ನಿಂತರೆ ಬಿರುಕಿನಲ್ಲಿ ನದಿಯ ನೀರು ಕಾಣುತ್ತಿದೆ. ಕಬ್ಬಿಣದ ಪ್ಲೇಟುಗಳು ತುಕ್ಕು ಹಿಡಿದಿವೆ. ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿತ್ತು.

Advertisement

15 ಲಕ್ಷ ರೂ. ಅಗತ್ಯ
ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ 10 ಲಕ್ಷ ರೂ. ಪ್ರಸ್ತಾವನೆಯಲ್ಲಿ 5 ಲಕ್ಷ ರೂ. ಬಿಡುಗಡೆಯಾಗಿದೆ. ಜಿ.ಪಂ. ಯೋಜನೆಯಡಿ 5 ಲಕ್ಷ ರೂ. ಮಂಜೂರಾತಿ ಹಂತದಲ್ಲಿದ್ದು, ಬಿಡುಗಡೆಗೊಳ್ಳಲು ಬಾಕಿ ಇದೆ. ಶಾಸಕರ ಮೂಲಕ 5 ಲಕ್ಷ ರೂ.ಗೆ ಬೇಡಿಕೆ ಇಡಲಾಗಿದೆ. ಒಟ್ಟು 15 ಲಕ್ಷ ರೂ. ಅನುದಾನದಲ್ಲಿ ಈಗ 5 ಲಕ್ಷ ರೂ. ಬಿಡುಗಡೆಯಾಗಿದ್ದು, ಉಳಿದ ಅನುದಾನ ಮಂಜೂರುಗೊಳ್ಳಬೇಕಷ್ಟೆ ಎಂದು ಜಿ.ಪಂ. ಎಂಜಿನಿಯರಿಂಗ್‌ ವಿಭಾಗ ಮಾಹಿತಿ ನೀಡಿದೆ.

ಒಟ್ಟು 15 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಕಾರ್ಯ ಆರಂಭಿಸಲಾಗುತ್ತದೆ. ಸೇತುವೆಯಲ್ಲಿ ತುಕ್ಕು ಹಿಡಿದ ಕಬ್ಬಿಣದ ಪ್ಲೇಟ್‌ ಬದಲಾವಣೆ, ಎರಡು ಕಡೆಗಳಲ್ಲಿ ಕಾಂಕ್ರೀಟ್‌ ಮೊದಲಾದ ದುರಸ್ತಿ ಕಾಮಗಾರಿ ನಡೆಯಲಿದೆ. ದುರಸ್ತಿ ಸಂದರ್ಭ ಬೇರೆ ಅವಶ್ಯಕತೆ ಕಂಡು ಬಂದಲ್ಲಿ ಆ ಕೆಲಸವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

ಒಂದು ತಿಂಗಳು ಬಂದ್‌
ಸುಳ್ಯದಿಂದ ಕಾಂತಮಂಗಲ-ಅಜ್ಜಾವರ, ಮಂಡೆಕೋಲು ಮೂಲಕ ಕಾಸರಗೋಡು ಸಂಪರ್ಕಿಸುವ ಅಂತಾರಾಜ್ಯ ಸಂಪರ್ಕ ರಸ್ತೆ ಸೆ. 5ರಿಂದ ಅ. 5ರ ತನಕ ಬಂದ್‌ ಆಗಲಿದೆ. ಇಲ್ಲಿ ಘನ ಮತ್ತು ಲಘು ವಾಹನ ಓಡಾಟ ನಿರ್ಬಂಧಿಸಲಾಗುತ್ತದೆ.

ಪರ್ಯಾಯ ರಸ್ತೆಗಳು
ಕಾಂತಮಂಗಲ ಸೇತುವೆ ಮೂಲಕ ಸಂಚರಿಸುವ ವಾಹನಗಳಿಗೆ ನಾಲ್ಕು ಪರ್ಯಾಯ ರಸ್ತೆಯನ್ನು ಗುರುತಿಸಲಾಗಿದೆ. ಜಿ.ಪಂ. ಎಂಜಿನಿಯರಿಂಗ್‌ ವಿಭಾಗ ಈ ಕುರಿತು ಮಾಹಿತಿ ನೀಡಿದೆ. ದುರಸ್ತಿ ವೇಳೆಸಂಚರಿಸಲು ಬಳಸಬಹುದಾದ ರಸ್ತೆಗಳು ಈ ಕೆಳಗಿನಂತಿವೆ.

Advertisement

1. ಮಂಡೆಕೋಲು-ಮುರೂರು- ಜಾಲ್ಸೂರು-ಸುಳ್ಯ
2. ಅಡ್ಪಂಗಾಯ – ಪೇರಾಲು- ಬೈತಡ್ಕ- ಸುಳ್ಯ
3. ಅಜ್ಜಾವರ-ಪೇರಾಲು-ಬೈತಡ್ಕ- ಸುಳ್ಯ
4. ಅಜ್ಜಾವರ-ನಾರ್ಕೋಡು- ಸುಳ್ಯ

ಸಹಕಾರ ಅಗತ್ಯ
ಕಾಂತಮಂಗಲ ಸೇತುವೆ ದುರಸ್ತಿ ಸೆ. 5ರಿಂದ ಆರಂಭಗೊಳ್ಳುತ್ತದೆ. ಮುಂದಿನ ಒಂದು ತಿಂಗಳು ವಾಹನ ಸಂಚಾರ ಬಂದ್‌ ಮಾಡಲಾಗಿದೆ. ಪರ್ಯಾಯ ರಸ್ತೆ ವ್ಯವಸ್ಥೆ ಮಾಡಲಾಗಿದೆ. ವಾಹನ ಸವಾರರು ಆ ರಸ್ತೆ ಬಳಸಿಕೊಳ್ಳಬಹುದು. ದುರಸ್ತಿ ಸಂದರ್ಭದಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ.
– ಮಣಿಕಂಠ,
ಜಿ.ಪಂ. ಎಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next