Advertisement

Karnataka ಕಾಂತರಾಜ್‌ ವರದಿ ಬಿಡುಗಡೆಗೆ ಸಂಘರ್ಷಕ್ಕೂ ಸಿದ್ಧ

08:40 PM Nov 08, 2023 | Team Udayavani |

ಬೆಂಗಳೂರು: “ಜಾತಿ ಗಣತಿ ವರದಿಯು ಶೋಷಿತ ಸಮುದಾಯಗಳ ಪಾಲಿಗೆ ಬೈಬಲ್‌ ಇದ್ದಂತೆ. ಈ ವರದಿ ಬಿಡುಗಡೆ ವಿಚಾರದಲ್ಲಿ ಯಾವ ಹಂತದ ಹೋರಾಟಗಳಿಗೂ ಸಿದ್ಧ.

Advertisement

ಅಗತ್ಯಬಿದ್ದರೆ ಸಂಘರ್ಷಕ್ಕೂ ನಾವು ರೆಡಿ’ ಎಂದು ಎಚ್ಚರಿಸಿರುವ ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, “ಆದಷ್ಟು ಶೀಘ್ರ ವರದಿ ಬಿಡುಗಡೆ ಮಾಡುವುದರ ಜತೆಗೆ ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಸುದೀರ್ಘ‌ ಚರ್ಚೆಗೆ ವೇದಿಕೆ ಕಲ್ಪಿಸಬೇಕು’ ಎಂದು ಒತ್ತಾಯಿಸಿವೆ.

“ನೂರಾರು ವರ್ಷಗಳಿಂದ ಶೋಷಣೆ ಅನುಭವಿಸಿಕೊಂಡು ಬಂದಿದ್ದೇವೆ. ಈಗ ಸಮೀಕ್ಷೆಯಿಂದ ವಿವಿಧ ಜಾತಿಗಳ ನಿಖರ ಜನಸಂಖ್ಯೆ ತಿಳಿಯುವುದರ ಜತೆಗೆ ಯಾವ ಕ್ಷೇತ್ರದಲ್ಲಿ ಯಾವ ಸಮುದಾಯ ಮುಂದುವರಿದಿದೆ ಎಂಬುದೂ ಗೊತ್ತಾಗುತ್ತದೆ. ಆದ್ದರಿಂದ ವರದಿಯು ಮಹತ್ವ ಪಡೆದುಕೊಂಡಿದೆ. ಯಾವುದೇ ಪ್ರಬಲ ಸಮುದಾಯಗಳ ಬೆದರಿಕೆಗೆ ಬಗ್ಗುವ ಪ್ರಶ್ನೆಯೇ ಇಲ್ಲ. ಅಗತ್ಯಬಿದ್ದರೆ ಸಂಘರ್ಷಕ್ಕೂ ನಾವು ಸಿದ್ಧ’ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಪದಾಧಿಕಾರಿಗಳು ಒತ್ತಾಯಿಸಿದರು.

ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಮಾತನಾಡಿ, “ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿರುವುದೇ ಶೋಷಿತ ಸಮುದಾಯಗಳ ಬೆಂಬಲದಿಂದ. ಈಗ ಅದೇ ಸರ್ಕಾರದಲ್ಲಿದ್ದು ಜಾತಿ ಗಣತಿ ವರದಿ ವಿರೋಧಿಸುವವರು ನೆನಪಿಟ್ಟುಕೊಳ್ಳಬೇಕು ಎಂದ ಅವರು, “ವರದಿ ಬಿಡುಗಡೆಗೆ ಸ್ವತಃ ಮುಖ್ಯಮಂತ್ರಿ ಹಿಂದೇಟು ಹಾಕಿದರೆ, ಅವರ ವಿರುದ್ಧವೂ ಹೋರಾಟ ನಡೆಸಲಾಗುವುದು. ಯಾಕೆಂದರೆ, ಈ ವರದಿಯೇ ನಮ್ಮಂತಹ ಶೋಷಿತ ಸಮುದಾಯಗಳಿಗೆ ಬೈಬಲ್‌ ಇದ್ದಂತೆ’ ಎಂದು ಹೇಳಿದರು.

ವರದಿ ಬಿಡುಗಡೆಗೆ ಪ್ರತಿರೋಧ ವ್ಯಕ್ತಪಡಿಸುತ್ತಿರುವವರ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ಅದಕ್ಕೆ ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿ ಶೋಷಿತ ಸಮುದಾಯಗಳ ದೊಡ್ಡ ಸಮಾವೇಶ ಆಯೋಜಿಸಲಾಗುವುದು. ಇದರಲ್ಲಿ ಸುಮಾರು ಹತ್ತು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದ ಅವರು, ಈಗಾಗಲೇ ವರದಿ ಬಿಡುಗಡೆಗೆ ಆಗ್ರಹಿಸಿ 22 ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದೆ. ಮುಂದಿನ ಹೋರಾಟ ತೀವ್ರವಾಗಿ ಇರಲಿದೆ ಎಂದರು.

Advertisement

ಈ ಹಿಂದೆ ಕೆ.ಎಸ್‌. ಈಶ್ವರಪ್ಪ ಸಚಿವರಾಗಿದ್ದಾಗ, ವರದಿಯನ್ನು ತಾವು ಒಪ್ಪಿಕೊಳ್ಳುವುದಾಗಿ ಹೇಳಿದ್ದರಲ್ಲದೆ, ಈ ಸಂಬಂಧ ಅಂದು ಸರ್ಕಾರದ ಮೇಲೆ ಒತ್ತಡ ತರೋಣ ಎಂದೂ ತಿಳಿಸಿದ್ದರು. ಈಗ ಆ ವರದಿಯ ಪ್ರತಿಯನ್ನೇ ಸುಟ್ಟುಹಾಕಬೇಕು ಎಂದು ಹೇಳುತ್ತಿದ್ದಾರೆ. ಈ ದ್ವಂದ್ವನೀತಿ ಯಾಕೆ? ವರದಿ ಒಪ್ಪಿಕೊಳ್ಳುವುದು ಬಿಡುವುದು ಸರ್ಕಾರಕ್ಕೆ ಬಿಟ್ಟಿದ್ದು. ಆದರೆ, ಅದಕ್ಕಿಂತ ಮುಖ್ಯವಾಗಿ ಅದರಲ್ಲಿ ಏನಿದೆ ಎಂಬುದು ತಿಳಿಯಬೇಕು. ನಂತರ ಅದರ ಬಗ್ಗೆ ಸುದೀರ್ಘ‌ ಚರ್ಚೆಯಾಗಲಿ. ಅದಾದ ಮೇಲೆ ಸ್ವೀಕರಿಸಲಿ’ ಎಂದು ತಿಳಿಸಿದರು.

ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್‌, ಬಿಹಾರ ಈಗಾಗಲೇ ಜಾತಿ ಸಮೀಕ್ಷೆ ಪೂರ್ಣಗೊಳಿಸಿ ವರದಿಯನ್ನೂ ಬಿಡುಗಡೆ ಮಾಡಿದೆ. ಕರ್ನಾಟಕ ಕೂಡ ಈ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್‌, ಒಕ್ಕೂಟದ ಸದಸ್ಯರಾದ ಜಿ.ಡಿ. ಗೋಪಾಲ್‌, ಪ್ರೊ.ಎಂ.ವಿ. ನರಸಿಂಹಯ್ಯ ಮತ್ತಿತರರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಒಂದೆಡೆ ಜಾತಿ ಗಣತಿಯು ದೇಶವನ್ನು ಒಡೆಯುವ ಪ್ರಯತ್ನ ಎಂದು ಆರೋಪಿಸುತ್ತಾರೆ. ಮತ್ತೂಂದೆಡೆ ತಾವೊಬ್ಬ ಹಿಂದುಳಿದ ಸಮುದಾಯಕ್ಕೆ ಸೇರಿದವರು ಅಂತ ಬಿಂಬಿಸಿಕೊಳ್ಳಲು ಯತ್ನಿಸುತ್ತಾರೆ. ಈ ದ್ವಂದ್ವ ಯಾಕೆ? ಸಂವಿಧಾನದ ಪ್ರಕಾರ ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕಾದರೆ, ದೇಶಾದ್ಯಂತ ಜಾತಿ ಸಮೀಕ್ಷೆ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next