ಬೆಂಗಳೂರು: ʼಕಾಂತಾರʼ ಸಿನಿಮಾ ಹಿಂದಿ ಹಾಗೂ ತೆಲುಗಿನಲ್ಲಿ ಮೋಡಿ ಮಾಡುತ್ತಿದೆ. ಭರ್ಜರಿ ಪ್ರದರ್ಶನದೊಂದಿಗೆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ರಿಷಬ್ ಶೆಟ್ಟಿ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.
ಚಿತ್ರ ಬಿಡುಗಡೆ ಆದ ದಿನದಿಂದ ಇವತ್ತಿನವರೆಗೂ ಸಿನಿಮಾದ ಬಗ್ಗೆ ಹತ್ತಾರು ವಿಮರ್ಶೆ, ಸಂದರ್ಶನಗಳು ಬಂದಿವೆ. ಸಿನಿಮಾದ ಕುರಿತು ರಿಷಬ್ ಶೆಟ್ಟಿಗೆ ನಾನಾ ಕಡೆಯಿಂದ ಖ್ಯಾತ ಸ್ಟಾರ್ ಗಳು ಪ್ರೇಕ್ಷಕರಾಗಿ ಸಿನಿಮಾವನ್ನು ನೋಡಿ ಶ್ಲಾಘಿಸಿದ್ದಾರೆ.
ಪ್ರಭಾಸ್, ಅನುಷ್ಕಾ ಶೆಟ್ಟಿ,ಕಾರ್ತಿ ಸೇರಿದಂತೆ ಹಲವರು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ಕನ್ನಡದ ಬಳಿಕ ʼಕಾಂತಾರʼ ಈಗ ಹಿಂದಿ – ತೆಲುಗಿನಲ್ಲಿ ಕಮಾಲ್ ಮಾಡುತ್ತಿದೆ.
ಇತ್ತೀಚೆಗೆ ಹಿಂದಿಯ ಖ್ಯಾತ ಯೂಟ್ಯೂಬರ್ ಸೂರಜ್ ಕುಮಾರ್ ರಿಷಬ್ ಅವರನ್ನು ಸಂದರ್ಶನ ಮಾಡುವಾಗ ಅವರ ಕಾಲಿಗೆ ಬಿದ್ದು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದರು. ಈಗ ಮತ್ತೊಬ್ಬ ಹಿಂದಿಯ ಜನಪ್ರಿಯ ವಿಮರ್ಶಕ ಸಿನಿಮಾವನ್ನು ನೋಡಿ ಅಭಿಪ್ರಾಯವನ್ನು ತಿಳಿಸಿದ್ದಾರೆ.
“ಆ್ಯಂಗ್ರಿ ರಾಂಟ್ಮ್ಯಾನ್” ಎನ್ನುವ ಯೂಟ್ಯೂಬ್ ಚಾನೆಲ್ ನ ವಿಮರ್ಶಕ ಸಿನಿಮಾವನ್ನು ನೋಡಿ ʼಕಾಂತಾರʼದಲ್ಲಿ ದೈವ ಅಬ್ಬರಿಸುವ ರೀತಿ ನಟಿಸಿರುವ ರಿಷಬ್ ಶೆಟ್ಟಿ ಶ್ರಧ್ದೆ, ಭಕ್ತಿಯಿಂದ ಪಾತ್ರವನ್ನು ಮಾಡಿದ್ದಾರೆ. ಅಲ್ಲಿ ಎಲ್ಲೂ ದೈವ ಆರಾಧನೆ ಹಾಗೂ ಆಚರಣೆಯ ಉಲ್ಲಂಘನೆ ಮಾಡಿಲ್ಲ. ರಿಷಭ್ ಈ ಹಿಂದೆ ದೈವದ ಹಾಗೆ ಅನುಕರಿಸಿ ವಿಮರ್ಶೆ, ರೀಲ್ಸ್ ಮಾಡಬೇಡಿ ಎಂದು ಮನವಿಯನ್ನು ಮಾಡಿಕೊಂಡಿದ್ದರು. “ಆ್ಯಂಗ್ರಿ ರಾಂಟ್ಮ್ಯಾನ್” ಚಿತ್ರವನ್ನು ನೋಡಿ ಚಿತ್ರದಲ್ಲಿ ದೈವ ಅಬ್ಬರಿಸುವ ಹಾಗೆ ಕೂಗಿಕೊಂಡು ವಿಮರ್ಶೆಯನ್ನು ಮಾಡಿರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.
ವಿಮರ್ಶೆಯನ್ನು ಅಚ್ಚುಕಟ್ಟಾಗಿ ಹೇಳಿದ್ದರೂ, ಅಲ್ಲಿ ದೈವದ ಹಾಗೆ ಅನುಕರಣೆ ಹಾಗೂ “ಭೂತ ಕೋಲ” ವನ್ನು “ಭೂತ ಕಲಾ” ಎಂದು ಹೇಳಿದ್ದು ಸರಿಯಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
“ಆ್ಯಂಗ್ರಿ ರಾಂಟ್ಮ್ಯಾನ್” ಅವರ ವಿಮರ್ಶೆಗಳು ಭಿನ್ನವಾಗಿರುತ್ತದೆ. ಕಿರುಚಿಕೊಂಡು ಅಂದರೆ, ಗಟ್ಟಿ ಧ್ವನಿಯಲ್ಲಿ ವಿಮರ್ಶೆ ಮಾಡುರುವುದರಿಂದಲೇ “ಆ್ಯಂಗ್ರಿ ರಾಂಟ್ಮ್ಯಾನ್” ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಅವರ ವಿಮರ್ಶೆಯೇ ಹೀಗೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಕೆಲವರು ಕಮೆಂಟ್ ಮೂಲಕವೇ ವಿಮರ್ಶಕನ ತಪ್ಪನ್ನು ತಿದ್ದಿದ್ದಾರೆ.