ದಟ್ಟ ಕಾನನ, ಅಗ್ನಿ ಜ್ವಾಲೆ, ಕಂಬಳದ ಕೋಣಗಳನ್ನು ಓಡಿಸುತ್ತಿರುವ ರಿಷಭ್ ಶೆಟ್ಟಿ, ಇವೆಲ್ಲವನ್ನೂ ಆವರಿಸಿ ನಿಂತಿರುವ ದೈವದ ಕಾಲುಗಳು, ಹರಡಿರುವ ದಾಖಲೆ ಪತ್ರಗಳು, ಬೆಂಕಿ ಕೆನ್ನಾಲಿಗೆ ಮಧ್ಯೆ ಓಡುತ್ತಿರುವ ಹಂದಿಗಳು… ಇವಿಷ್ಟು ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸಲಿರುವ ಹೊಸ ಸಿನಿಮಾ ‘ಕಾಂತಾರ’ ದ ಮೊದಲ ಪೋಸ್ಟರ್ ನಲ್ಲಿ ಕಾಣಸಿಗುವ ಅಂಶಗಳು.
ನಿನ್ನೆ ಹೇಳಿದಂತೆ ಹೊಂಬಾಳೆ ಫಿಲಂಸ್ ಇಂದು ತಮ್ಮ 11ನೇ ಚಿತ್ರದ ಟೈಟಲ್ ಮತ್ತು ಪೋಸ್ಟರ್ ಬಿಡುಗಡೆ ಮಾಡಿದೆ. ‘ಕಾಂತಾರ’ ಚಿತ್ರಕ್ಕೆ ‘ಒಂದು ದಂತಕಥೆ’ ಎಂದು ಅಡಿಬರಹ ನೀಡಲಾಗಿದೆ.
ರಿಷಭ್ ಶೆಟ್ಟಿ ಚಿತ್ರದಲ್ಲಿ ಬರೆದು ನಿರ್ದೇಶನ ಮಾಡಲಿದ್ದು, ಅದರೊಂದಿಗೆ ಮುಖ್ಯಭೂಮಿಕೆಯಲ್ಲಿ ನಟಿಸಿಲಿದ್ದಾರೆ. ಹೊಂಬಾಳೆ ಫಿಲಂ ಬ್ಯಾನರ್ ನಡಿ ವಿಜಯ್ ಕಿರಗಂದೂರ್ ನಿರ್ಮಾಣ ಮಾಡಲಿದ್ದಾರೆ. ಆಗಸ್ಟ್ 27ರಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದ್ದಾರೆ.
“ಬಹಳ ಸಮಯದ ನಂತರ ಹೊಸ ಕಿಚ್ಚಿನೊಂದಿಗೆ ಮತ್ತೆ ನಿರ್ದೇಶಕನಾಗಿ ಕಥೆ ಹೇಳಲು ಬರುತ್ತಿದ್ದೇನೆ. ಈ ಕಿಚ್ಚು ನಮ್ಮ ಸುತ್ತಲೂ ಸದ್ಯ ಕವಿದಿರುವ ಕರಾಳತೆಯನ್ನು ದಹಿಸುತ್ತದೆ ಎಂಬ ನಂಬಿಕೆಯೊಂದಿಗೆ” ಎಂದು ರಿಚಭ್ ಶೆಟ್ಟಿ ಬರೆದುಕೊಂಡಿದ್ದಾರೆ.
ಕಾಂತಾರ ಎಂದರೆ ಕಾನನ ಎಂದರ್ಥ. ಪೋಸ್ಟರ್ ನಲ್ಲಿ ಕರಾವಳಿಯ ಜಾನಪದ ಮತ್ತು ಧಾರ್ಮಿಕ ಸಂಪ್ರದಾಯಗಳ ಕುರಿತು ಹೇಳಲಾಗಿದೆ. ವಿಭಿನ್ನ ಚಿತ್ರಗಳ ಮೂಲಕ ಇದುವರೆಗೆ ಗಮನ ಸೆಳೆದಿರುವ ರಿಷಭ್ ಶೆಟ್ಟಿ ಹೊಸ ಚಿತ್ರದ ಮೂಲಕ ಯಾವ ರೀತಿಯ ಕಮಾಲ್ ಮಾಡುತ್ತಾರೆ ಎನ್ನವುದನ್ನು ಕಾದುನೋಡಬೇಕಿದೆ.