Advertisement

ಸರ್‌ಎಂವಿ ಕನ್ನಂಬಾಡಿ ಆರಂಭಿಸಲಿಲ್ಲ, ಮುಗಿಸಲೂ ಇಲ್ಲ; ಎಸ್‌.ಜಿ.

03:51 PM Feb 12, 2018 | Sharanya Alva |

ಮುಂಬೈ: ಸರ್‌ಎಂ.ವಿಶ್ವೇಶ್ವರಯ್ಯ ಕನ್ನಂಬಾಡಿ ಅಣೆಕಟ್ಟೆಯನ್ನು ಆರಂಭಿಸಲೂ ಇಲ್ಲ, ಪೂರ್ಣಗೊಳಿಸಲೂ ಇಲ್ಲ. ಪೂರ್ಣಗೊಳಿಸಿದ್ದು ಮಧ್ಯದಲ್ಲಿ ಬಂದುಹೋದ ಎಂಜಿನಿಯರ್‌ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ 
ಎಸ್‌.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

Advertisement

ಇಲ್ಲಿನ ಮೊಗವೀರ ಸಭಾಭವನದಲ್ಲಿ ನಡೆಯುತ್ತಿರುವ ಹೊರನಾಡ ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶದಲ್ಲಿ ಭಾನುವಾರ “ಹೊರನಾಡ ಕನ್ನಡಿಗರ ಭಾಷಾ ಸಂಘರ್ಷ ಮತ್ತು ಸಾಮರಸ್ಯ’ ಕುರಿತ ಚರ್ಚಾಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿಶ್ವೇಶ್ವರಯ್ಯ ಬರುವ ಮೊದಲೇ ನಾಲ್ವಡಿ ಕೃಷ್ಣರಾಜ ಒಡೆಯರು ಕನ್ನಂಬಾಡಿ ಅಣೆಕಟ್ಟೆ ಕಟ್ಟಲು ಆರಂಭಿಸಿದ್ದರು.

ಮೂವರು ಎಂಜಿನಿಯರ್‌ಗಳು ಕೆಲಸ ಮಾಡಿ ಹೋದ ಮೇಲೆ ವಿಶ್ವೇಶ್ವರಯ್ಯ ಎಂಜಿನಿಯರ್‌ ಆಗಿ ಕೆಲಸ ಮಾಡಿದರು. ಆದರೆ, ಮೀಸಲಾತಿ ವಿರೋಧಿಸಿದ್ದರಿಂದ ಅವರು ರಾಜೀನಾಮೆ ನೀಡಬೇಕಾಯಿತು. ಆಮೇಲೆ ನಾಲ್ಕು ವರ್ಷದ ಮೇಲೆ ಕನ್ನಂಬಾಡಿ ಅಣೆಕಟ್ಟೆ ಕೆಲಸ ಮುಗಿಯಿತು. ಆದರೆ, ಚರಿತ್ರೆ ಬರೆಯುವವರು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕಾರ್ಯವನ್ನು ಮರೆಮಾಚಿ ವಿಶ್ವೇಶ್ವರಯ್ಯ ಅವರನ್ನು ವಿಜೃಂಭಿಸುವ ಕೆಲಸ ಮಾಡಿದರು ಎಂದು ಹೇಳಿದರು.

ಟಿಪ್ಪು ಕನ್ನಡ ಪ್ರೇಮಿ: ಟಿಪ್ಪು ಕನ್ನಡ ವಿರೋಧಿಯಾಗಿರಲಿಲ್ಲ; ಕನ್ನಡ ಪ್ರೇಮಿಯಾಗಿದ್ದ. ಆದರೆ, ಅದನ್ನು ಸಾಹಿತಿಗಳು ತಿರುಚುವ ಕೆಲಸ ಮಾಡಿದ್ದಾರೆ. ಅದನ್ನೇ ಲೇಖಕನಾಗಿ ಪ್ರಶ್ನೆ ಮಾಡುವ ಅಧಿಕಾರ ನನಗಿದೆ ಎಂದು ಎಸ್‌.ಎಲ್ ಭೈರಪ್ಪ ಅವರ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

ಕಲಚೂರಿ ರಾಜ ಬಿಜ್ಜಳನ ಕಾಲದಿಂದಲೂ  ಸಾಹಿತಿಗಳು ಚರಿತ್ರೆಯನ್ನು ತಿರುಚುವ ಕೆಲಸ ಮಾಡಿದರು. ಬಿಜ್ಜಳ ಬಸವಣ್ಣನ ಸಮಾನತೆಯ ಹೋರಾಟಕ್ಕೆ ಬೆಂಬಲ ನೀಡಿದ್ದ. ಆದರೆ, ಸಾಹಿತಿಗಳು ಅವನನ್ನು ವಿಲನ್‌ ಮಾಡಿದರು. ಜನಪದ ಸಾಹಿತ್ಯ ಮಾತ್ರ ಸತ್ಯವನ್ನು ಹೇಳಿ ಬಿಜ್ಜಳನನ್ನು ನಾಯಕನನ್ನಾಗಿ ಮಾಡಿದೆ ಎಂದು ಸಮರ್ಥನೆ ನೀಡಿದರು.

Advertisement

ಉಂಡ ಮನೆಯಗಳ ಎಣಿಸುವ ಕೆಲಸ  ನಡೆಯುತ್ತಿದೆ: ರಾಜ್ಯದಲ್ಲಿ ಕನ್ನಡವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು
ಮಠಾಧೀಶರಿಂದ ಕಡೆಗಣಿಸುವ ಕೆಲಸ ನಡೆಯುತ್ತಿದೆ. ರಾಜ್ಯ ಸರ್ಕಾರ 2015ರಲ್ಲಿಯೇ 1ರಿಂದ 10ನೇ ತರಗತಿವರೆಗೆ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸಬೇಕು ಎಂದು ಕಾನೂನು ತರಲಾಗಿದೆ. ಆದರೆ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅದನ್ನು ಅನುಷ್ಠಾನಗೊಳಿಸದೆ ಇಟ್ಟುಕೊಂಡಿದ್ದರು. ಅದಕ್ಕೆ ಕ್ರಿಯಾಲೋಪ ಎತ್ತಿದಾಗ ಸರ್ಕಾರಿ ಆದೇಶ ಹೊರಡಿಸಿದ್ದಾರೆ. ಈಗ ಖಾಸಗಿ ಶಾಲೆಗಳನ್ನು ನಡೆಸುತ್ತಿರುವ ಪ್ರಭಾವಿ ರಾಜಕಾರಣಿಗಳು ಮತ್ತು ಮಠಾಧೀಶರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯ ಸರ್ಕಾರದ ಯಾವ ಸಚಿವರಿಗೂ ಕನ್ನಡದ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಆಸಕ್ತಿ ಇಲ್ಲ. ರಾಜ್ಯದ ಪ್ರವಾಸೋದ್ಯಮ ಪ್ರಚಾರಕ್ಕೆ ಉತ್ತರ ಭಾರತದ ರೂಪದರ್ಶಿಯನ್ನು ಕರೆದುಕೊಂಡು ಬಂದು ರೋಡ್‌ ಶೋ ನಡೆಸುತ್ತಾರೆ ಎಂದು ಬೇಸರ
ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯಲ್ಲಿ ಏಕ ಭಾಷೆ ಏಕ ಧರ್ಮ ಎಂಬ ನೀತಿಯಿಂದ ಪ್ರಾಂತೀಯ ಭಾಷೆಗಳನ್ನು ಹತ್ತಿಕ್ಕಿ ಹಿಂದಿ ಹೇರಿಕೆ ಮಾಡುತ್ತಿದೆ. ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆ ತಡೆಯಲು ದ್ರಾವಿಡ ಭಾಷೆಗಳ ಒಕ್ಕೂಟ ರಚನೆಯ
ಅಗತ್ಯವಿದೆ. ರಾಜ್ಯದಲ್ಲಿ ನಡೆಯುವ ರೈಲ್ವೆ ಮತ್ತು ಬ್ಯಾಂಕ್‌ ನೇಮಕಾತಿಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‌ ನಲ್ಲಿ ಪರೀಕ್ಷೆ ನಡೆಸುವುದರಿಂದ ಕನ್ನಡದ ಮಕ್ಕಳು ಉದ್ಯೋಗ ವಂಚಿತರಾಗುತ್ತಿದ್ದಾರೆ ಎಂದರು.

ಪ್ರಾಥಮಿಕ ಹಂತದಲ್ಲಿ ಕನ್ನಡ ಉಳಿದರೆ ಮಾತ್ರ ಕನ್ನಡ ಉಳಿಯಲು ಸಾಧ್ಯವಿದೆ. ಆದರೆ, ಸರ್ಕಾರ ಆರ್‌ಟಿಇ ಜಾರಿಗೆ ತಂದು ಕನ್ನಡ ಶಾಲೆಗಳನ್ನು ಮುಚ್ಚುವ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.

*ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next