Advertisement
ಷ. ಶೆಟ್ಟರ್ ತಿಳಿಸುವಂತೆ ದಕ್ಷಿಣ ಹಾಗೂ ಪೂರ್ವ ಏಷ್ಯಾದ ಇತಿಹಾಸದಲ್ಲಿ ರಾಜಮನೆತನದ ಸೇವೆಯಲ್ಲಿದ್ದ ಮೊದಲ ಶಿಲ್ಪಿ ಕರ್ನಾಟಕದಲ್ಲಿ ಇದ್ದು ಚಪಡನೆಂಬ ಶಿಲ್ಪಿಯು ಕೆತ್ತಿದ ಮೂರು ಶಾಸನಗಳ ಮೂಲಕ ಭಾರತದ ಶಿಲ್ಪಿಗಳ ಲಿಖೀತ ಚರಿತ್ರೆ ಆರಂಭವಾಗುತ್ತದೆ. ಸದ್ಯೋಜಾತರು ಭಾರತದ ಅಕ್ಷರ ಇತಿಹಾಸದ ಮೊದಲ ಸಾದೃಶ್ಯ ಇದಾಗಿರುವುದರಿಂದ, ಇದನ್ನು ಬರೆದವನು ಮತ್ತು ಬರೆಸಿದ ಸ್ಥಳಗಳು ಲಿಪಿ ಇತಿಹಾಸದಲ್ಲಿ ಅಜರಾಮರವಾಗಿ ಉಳಿದು ಬಿಡುತ್ತದೆ. ಈ ಹಿನ್ನೆಲೆಯಲ್ಲಿ ಭಾರತದ ಲಿಪಿಕಾರರ ಇತಿಹಾಸದ ಪ್ರಾರಂಭಕ್ಕೆ ನಾಂದಿ ಹಾಡಿದ ನಾಡೇ ಕನ್ನಡನಾಡು ಎನ್ನಬಹುದು ಎನ್ನುತ್ತಾರೆ. ಹಾಗಾಗಿ ಶಾಸನಗಳಿರುವ ಸ್ಥಳಗಳಾದ ಕನ್ನಡನಾಡಿನ ಬ್ರಹ್ಮಗಿರಿ ಮತ್ತು ಸುತ್ತಲಿನ ಪ್ರದೇಶಗಳಿಗೆ ಭಾರತದ ಶಾಸನಗಳ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವಿದೆ. ಈ ಮೂಲಕ ಈ ಶಾಸನಗಳು ಕನ್ನಡನಾಡಿನ ಗೌರವವನ್ನು ಹೆಚ್ಚಿಸಿವೆ.
Related Articles
Advertisement
ಇದನ್ನೂ ಓದಿ:ಒಂದೇ ದಿನದಲ್ಲಿ ಕೇಸ್ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು
ಶಾಸನಗಳಲ್ಲಿ ಶಿಲ್ಪಿಯ ಉಲ್ಲೇಖ: ಶಾಸನ ಸಿದ್ಧಪಡಿ ಸುವಲ್ಲಿ ಲೇಖಕ, ಲಿಪಿಕಾರ, ಕಂಡರಣೆಗಾರರ ಪಾತ್ರ ಮಹತ್ವವಾದುದು. ಲಿಪಿಕಾರ ಶಾಸನದಲ್ಲಿ ಸಾಲುಗಳನ್ನು ಬರೆದರೆ, ಕಂಡರಣೆಗಾರ ಆ ಸಾಲುಗಳನ್ನು ತನ್ನ ಕೌಶಲದಿಂದ ಕೆತ್ತುತ್ತಾನೆ. ಹೆಚ್ಚಾಗಿ ಕಂಡರಣೆಗಾರನು ಅನಕ್ಷರಸ್ಥ. ಹಾಗಾಗಿ ಲಿಪಿಕಾರ ಏನನ್ನು ಬರೆಯುತ್ತಾನೋ ಅದನ್ನು ಕೆತ್ತುವುದಷ್ಟೇ ಈತನ ಕೆಲಸ. ಆದರೆ ಚಪಡನು ಈ ಕ್ಷೇತ್ರದಲ್ಲಿ ಪ್ರತಿಭಾವಂತನು. ಆತನು ಲಿಪಿಕಾರನೂ ಹೌದು, ಕಂಡರಣೆಗಾರನೂ ಹೌದು. ಸಾಮಾನ್ಯವಾಗಿ ಶಾಸನಗಳಲ್ಲಿ ಅರಸನಿಗೆ ಕೊಟ್ಟಷ್ಟು ಪ್ರಾಶಸ್ತ್ಯವನ್ನು ಶಿಲ್ಪಿಗೆ ಕೊಡುತ್ತಿರಲಿಲ್ಲ. ಶಿಲ್ಪಿಗಳ ಹೆಸರು ಅಜ್ಞಾತವಾಗಿಯೇ ಉಳಿದ ಪ್ರಕರಣಗಳೇ ಅಧಿಕ. ಆದರೆ ಬ್ರಹ್ಮಗಿರಿಯ ಶಾಸನದಲ್ಲಿ ಚಪಡನ ಹೆಸರು ಉಲ್ಲೇಖವಾಗಿರುವುದು ಈ ದೃಷ್ಟಿಯಿಂದ ಕುತೂಹಲಕ್ಕೆ ಎಡೆ ಮಾಡಿದೆ.
ಈತನಿಗೆ ಮಾತ್ರ ಈ ವಿಶಿಷ್ಟವಾದ ಗೌರವ ಅಂದಿನ ಅರಸರಿಂದ ಲಭಿಸಿರಬಹುದೇ?. ಈ ಬಗ್ಗೆ ಸದ್ಯೋಜಾತರು ಕೊಡುವ ಅಭಿಪ್ರಾಯಗಳಲ್ಲಿ ಗಮನಾರ್ಹ. ಅವರು ತಿಳಿಸುವಂತೆ ಅಶೋಕನು ಯಾವುದೇ ಶಾಸನದಲ್ಲಿ ತನ್ನ ಮತ್ತು ಮಕ್ಕಳ ಹೆಸರನ್ನು ಬಿಟ್ಟು ಬೇರೆ ಯಾರ ಹೆಸರನ್ನೂ ಕೆತ್ತಕೂಡದೆಂದು ಕಟ್ಟಾಜ್ಞೆ ಮಾಡಿದ್ದನು. ಈ ಆಜ್ಞೆಯಿಂದ ಚಪಡನೂ ಹೊರತಾಗಿಲ್ಲ. ಆದರೆ ಚಪಡನು ಕರ್ನಾಟಕದ ಬ್ರಹ್ಮಗಿರಿಗೆ ಬರುವ ಕಾಲದಲ್ಲಿ ಅಶೋಕನಿಗೆ ವಯಸ್ಸಾಗಿತ್ತು. ಆತನು ತನ್ನ ಇಳಿವಯಸ್ಸಿನಲ್ಲಿ ದೂರದ ಮಗಧದಿಂದ ಕರ್ನಾಟಕಕ್ಕೆ ಬರುವ ಸಾಧ್ಯತೆಗಳು ಕಡಿಮೆ ಎಂಬ ಧೈರ್ಯ ಚಪಡನಿಗಿತ್ತು. ಇದರೊಂದಿಗೆ ತನ್ನ ಹೆಸರನ್ನು ಕೆತ್ತಲೇಬೇಕೆಂಬ ತುಡಿತ ಅವನಲ್ಲಿ ಬಲವಾಯಿತು. ಇದರ ಪರಿಣಾಮವಾಗಿ ಅಂದಿನವರೆಗೆ ಅಡಗಿಸಿಟ್ಟಿದ್ದ ತನ್ನ ಬಯಕೆಯನ್ನು ನಿಯಂತ್ರಿಸಲು ಆತನಿಗೂ ಅಸಾಧ್ಯವಾಯಿತು. ಹಾಗಾಗಿ ಧೈರ್ಯದಿಂದ ಅಶೋಕನ ಆಜ್ಞೆಯನ್ನು ಮೀರಿ ತನ್ನ ಹೆಸರನ್ನು ಕೆತ್ತಿಯೇ ಬಿಟ್ಟನು. “ಚಪಡೇನ ಲಿಖೀತೇ ಲಿಪಿಕರೇಣ’ ಎಂಬ ಸಾಲು ಆತನ ಒಳಮನಸ್ಸಿನ ತುಡಿತದ ಪರಿಣಾಮವಾಗಿ ಮೂಡಿಬಂದಿತು. ಈ ಸಾಲಿನಲ್ಲಿ ಮೊದಲ ಎರಡು ಪದಗಳು ಬ್ರಾಹ್ಮಿ ಲಿಪಿಯಲ್ಲಿದ್ದರೆ; ಕೊನೆಯ ಪದವು ಖರೋಷ್ಠಿ ಲಿಪಿಯಲ್ಲಿದೆ ಎಂದು ಶಾಸನ ಸಂಶೋಧಕರು ಗುರುತಿಸಿದ್ದಾರೆ. ಈ ಮೂಲಕ ಕರ್ನಾಟಕವು ಲಿಪಿಕಾರರ ಚರಿತ್ರೆಯಲ್ಲಿ ವಿಶೇಷ ಸ್ಥಾನವನ್ನು ಪಡೆಯುವಂತಾಯಿತು.
ನಾಡು ನುಡಿಗೆ ಸೇವೆ ಸಲ್ಲಿಸಿದ ಅನೇಕ ಸಾಧಕರು ಅಜ್ಞಾತರಾಗಿಯೇ ಉಳಿದಿದ್ದಾರೆ. ಅವರ ಕುರಿತು ಹೆಚ್ಚಿನ ಅಧ್ಯಯನಗಳಾಗಬೇಕು. ಅಂಥವರೆಲ್ಲರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವೂ ಕೂಡ. ಶಿಲ್ಪಿಗಳ ಇತಿಹಾಸದಲ್ಲಿ ಕರ್ನಾಟಕವು ರಾಷ್ಟ್ರದ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದವನು ಅರಸ ಅಶೋಕ. ಇದರೊಂದಿಗೆ ಈತನ ಕಾಲದಲ್ಲಿದ್ದ ಶಿಲ್ಪಿ ಚಪಡ ಮತ್ತು ಈತನು ಕೆತ್ತಿದ ಬ್ರಹ್ಮಗಿರಿಯ ಶಾಸನ. ಈ ಶಾಸನವು ಕನ್ನಡ ಭಾಷೆಯ ಮೊದಲ ಶಬ್ದದ ಬಗ್ಗೆ ಬೆಳಕು ಚೆಲ್ಲುವುದರೊಂದಿಗೆ ಶಿಲ್ಪಿಗಳ ಇತಿಹಾಸಕ್ಕೂ ನಾಂದಿ ಹಾಡಿದೆ. ಈ ದೃಷ್ಟಿಯಿಂದ ಕರ್ನಾಟಕದ ಬ್ರಹ್ಮಗಿರಿ ಶಾಸನವು ವಿಶೇಷ ಮಹತ್ವ ಪಡೆಯುವುದರೊಂದಿಗೆ ಕನ್ನಡನಾಡಿನ ಕೀರ್ತಿಯನ್ನೂ ಹೆಚ್ಚಿಸಿತು.
– ಡಾ| ಶ್ರೀಕಾಂತ್ ಸಿದ್ದಾಪುರ