Advertisement
ಬೆಂಗಳೂರು: ಅರವತ್ಮೂರನೇ ಕರ್ನಾಟಕ ರಾಜ್ಯೋತ್ಸವವನ್ನು ನಗರದೆಲ್ಲೆಡೆ ಗುರುವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಉದ್ಯಾನ, ಮೈದಾನ, ವೃತ್ತ, ಸಾರ್ವಜನಿಕ ಸ್ಥಳ, ಬಸ್ ನಿಲ್ದಾಣ, ಆಟೋನಿಲ್ದಾಣ, ಬಡಾವಣೆಗಳಲ್ಲಿ ಧ್ವಜಾರೋಹಣ ನೇರವೇರಿಸಿದ ಸಾರ್ವಜನಿಕರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ಕೆಲವೆಡೆ ಕನ್ನಡ ಸಾಹಿತ್ಯ ಪುಸ್ತಕಗಳನ್ನು ವಿತರಿಸಿ ರಾಜ್ಯೋತ್ಸವದ ಶುಭಾಶಯ ಕೋರಿದ್ದು ಗಮನ ಸೆಳೆಯಿತು.
Related Articles
Advertisement
ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎಸ್.ನಾರಾಯಣಗೌಡ ಬಣದ ಕಾರ್ಯಕರ್ತರು ಗಾಂಧಿನಗರದ ಕೇಂದ್ರ ಕಚೇರಿಯಲ್ಲಿ ಸಡಗರ, ಸಂಭ್ರಮದಿಂದ ರಾಜ್ಯೋತ್ಸವ ಆಚರಿಸಿದರು. ಜಯನಗರದ ಭಾರತ್ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಕಟ್ಟುವ ಕಾರ್ಯದ ಬಗ್ಗೆ ಚರ್ಚೆ ನಡೆದವು.
ಕತ್ರಿಗುಪ್ಪೆಯ ಕನ್ನಡ ಗೆಳೆಯರ ಬಳಗ, ಹೊಂಬೇಗೌಡ ನಗರದ ಕನ್ನಡ ಯುವಜನ ಸಂಘ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಕನ್ನಡ ಸಂಘ, ಕೆ.ಜಿ.ನಗರದ ಕೆಂಪೇಗೌಡನಗರ ನಾಗರಿಕ ವೇದಿಕೆ ಮತ್ತು ವಿಜಯನಗರದ ಅಖೀಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 63ನೇ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ನೆಲ, ಜಲ ಕುರಿತು ಚಿಂತನಾ ಗೋಷ್ಠಿ ನಡೆದವು.
ಚಾಮರಾಜಪೇಟೆಯ ನಾಡಹಬ್ಬ ಕನ್ನಡ ರಾಜ್ಯೋತ್ಸವ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯೋತ್ಸವದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಆಕರ್ಷಿಸಿದವು. ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಾತ್ರಿ ನಡೆದ ಸಂಗೀತ ಕಾರ್ಯಕ್ರಮಗಳು ಸಂಗೀತ ರಸಿಕರ ಮನ ತಣಿಸಿದವು.
ಸಾಹಿತ್ಯ ಶ್ರೀಪ್ರಶಸ್ತಿ ಪ್ರದಾನ: ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಡಿಎಸ್ ಮ್ಯಾಕ್ಸ್ ಸಂಸ್ಥೆ ನಗರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಅನುಪಮ ಸೇವೆ ನೀಡಿದ ಸಾಹಿತಿ ಡಾ.ವೀರಣ್ಣ ರಾಜೂರ, ಡಾ.ಡಿ.ಎಸ್.ಅಕ್ಕಿ, ಡಾ.ಜಗನ್ನಾಥ್ ಹೆಬ್ಟಾಳೆ, ಎಂ.ಜಿ.ನಾಗರಾಜ್, ಪ್ರೇಮಾ ಭಟ್ ಅವರಿಗೆ ಡಿ.ಎಸ್.ಮ್ಯಾಕ್ಸ್ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿ ಮಲ್ಲೇಪುರಂ ಜಿ.ವೆಂಕಟೇಶ್, ಮುಂದಿನ ಪೀಳಿಗೆಗೆ ಕನ್ನಡ ಪುಸ್ತಕಗಳನ್ನು ಪರಿಚಯಿಸುವ ದೃಷ್ಟಿಯಿಂದ ಪ್ರತಿಯೊಂದು ಮನೆಯಲ್ಲೂ ಗ್ರಂಥಾಲಯ ಭಂಡಾರ ನಿರ್ಮಿಸಬೇಕು ಎಂದು ಸಲಹೆ ನೀಡಿದರು.