ಬೆಂಗಳೂರು: ಕ್ರೈಸ್ತರಲ್ಲಿ ಭಾಷೆ ಆಧಾರದಲ್ಲಿ ಧರ್ಮ ಒಡೆಯುವ ಕೆಲಸವಾಗುತ್ತಿದ್ದು, ಜನವರಿಯಲ್ಲಿ ಎಲ್ಲ ಭಾಷೆಯ ಕ್ರೈಸ್ತರನ್ನು ಒಗ್ಗೂಡಿಸಿ ಶಕ್ತಿ ಪ್ರದರ್ಶನ ಮಾಡಲಾಗುವುದು ಎಂದು ಅಖೀಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ರಫಾಯೇಲ್ ರಾಜ ಹೇಳಿದರು.
ಕನ್ನಡ ಕ್ಯಾಥೋಲಿಕ್ ಕ್ರೈಸ್ತರ ಸಂಘ ರಾಮಮೂರ್ತಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 62ನೇ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡ ಚೇತನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಚರ್ಚ್‌ಗಳಲ್ಲಿ ಧರ್ಮಗುರುಗಳು ತಮಿಳು ಕ್ರೈಸ್ತರು, ತೆಲುಗು ಕ್ರೈಸ್ತರು, ಕನ್ನಡ ಕ್ರೈಸ್ತರು ಎಂದು ವಿಗಂಡಿಸುತ್ತಿದ್ದು, ನಮ್ಮಲ್ಲಿನ ಒಗ್ಗಟ್ಟು ಒಡೆಯುತ್ತಿದ್ದಾರೆ. ಇದರಿಂದ ಸರ್ಕಾರದ ಯಾವ ಸೌಲಭ್ಯಗಳು ಸಿಗದಂತ ಸ್ಥಿತಿ ಬಂದಿದೆ.
ಅಲ್ಪಸಂಖ್ಯಾತರೆನ್ನಿಸಿಕೊಂಡಿರೂ, ಅಲ್ಪಸಂಖ್ಯಾತ ಇಲಾಖೆಯಿಂದ ಯಾವುದೇ ಸವಲತ್ತು ಸಿಗುತ್ತಿಲ್ಲ. ಅತೀಹೆಚ್ಚು ಅಧಿಕಾರ ಮುಸ್ಲಿಮರಿಗೆ ಕೊಡಲಾಗಿದೆ. ಮುಸ್ಲಿಮರಲ್ಲಿ ರಾಜಕಾರಣದ ಜಾಗೃತಿ ಇದೆ. ಸಂಘಟನೆಯೂ ಬಲಾಗಿದೆ. ಆದರೆ, ಕ್ರೈಸ್ತರಲ್ಲಿ ಒಗ್ಗಟ್ಟಿಲ್ಲದೆ ಎಲ್ಲದರಿಂದ ವಂಚಿತರಾಗುತ್ತಿದ್ದೇವೆ. ಕನ್ನಡ ನಾಡಿನಲ್ಲಿ ಇರುವ ನಾವೆಲ್ಲರೂ ಕನ್ನಡ ಕ್ರೈಸ್ತರಾಗಿದ್ದು, ಬಲ ಪ್ರದರ್ಶಿಸುವ ಮೂಲಕ ನಮಗೆ ಸಿಗಬೇಕಾದ ಹಕ್ಕನ್ನು ಪಡೆದುಕೊಳ್ಳಬೇಕಿದೆ ಎಂದು ಹೇಳಿದರು.
ಕ್ರೈಸ್ತರ ಸಮ್ಮೇಳನದಲ್ಲಿ ಕ್ಯಾಥೋಲಿಕ್, ಪ್ರೊಟೆಸ್ಟೆಂಟ್, ಪೆಂಥಾಕೊಸ್ಟ್ ಎಂಬ ಬೇಧವಿಲ್ಲದೆ ಎಲ್ಲರನ್ನೂ ಒಗ್ಗೂಡಿಸುವ ಕೆಲಸವನ್ನು ಸಂಘಟನೆ ಮಾಡಲಿದೆ. ಚರ್ಚ್‌ಗಳಲ್ಲಿ ಕನ್ನಡದಲ್ಲಿ ಪ್ರಾರ್ಥನೆ ನಡೆಯಬೇಕು ಎಂಬುದೂ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಲಾಗುವುದು. ಸರ್ಕಾರದ ಸೌಲಭ್ಯಗಳು ನಿಜವಾದ ಅಲ್ಪಸಂಖ್ಯಾತರಾಗಿರುವೆ ಎಲ್ಲಾ ಕ್ರೈಸ್ತರಿಗೂ ಸಿಗಬೇಕು ಎನ್ನುವ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಧರ್ಮಗುರು ಫಾ.ಅಮರನಾರ್ಥ ದಿನೇಶ್‌ರಾಯ್ ಧ್ವಜಾರೋಹಣ ನೆರವೇರಿಸಿ, ಕನ್ನಡ ನಾಡಿನ ಸಮಸ್ತ ಜನರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರು. ಜಾನ್ ಗ್ರೆಗೋರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಖೀಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಉಪಾಧ್ಯಕ್ಷ ಎ.ದೇವಕುಮಾರ್. ಸಾಹಿತಿ ಎ.ಬಿ.ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.