ಬಂಟ್ವಾಳ: ದೇಶದ ಸ್ವಾತಂತ್ರ್ಯ ಚಳವಳಿಗೆ ಬಂಟ್ವಾಳದ ಸ್ವಾತಂತ್ರ್ಯ ಹೋರಾಟಗಾರರಿಂದ ಉತ್ತಮ ಬೆಂಬಲ ಸಿಕ್ಕಿತ್ತು. ಆದರೆ ಸ್ವಾತಂತ್ರ್ಯ ಹೋರಾಟದ ನೆನಪಿನ ಭಾಗವಾಗಿ ವಿಶೇಷ ಸ್ಮಾರಕಗಳು ಬಂಟ್ವಾಳದಲ್ಲಿ ಕಾಣ ಸಿಗುವುದಿಲ್ಲ. ಆದರೆ ಗಾಂಧೀಜಿ ಅವರ ಸ್ವದೇಶಿ ಚಳವಳಿಯ ಭಾಗವಾಗಿ ಬಂಟ್ವಾಳದಲ್ಲಿ ಸ್ವಾತಂತ್ರ್ಯ ಹೋರಾಟಗಾರರೊಬ್ಬರು ಮಗ್ಗದ ಕೈಗಾರಿಕೆ ಘಟಕವನ್ನು ಸ್ಥಾಪಿಸಿದ್ದು, ಅದು ಮಗ್ಗ ಶಾಲೆಯೆಂದೇ ಪ್ರಸಿದ್ಧಿ ಪಡೆದಿದೆ.
ಬಂಟ್ವಾಳದ ಭಂಡಾರಿಬೆಟ್ಟಿನಲ್ಲಿ ಈ ಮಗ್ಗ ಶಾಲೆಯಿದ್ದು, ಅದರ ಕಟ್ಟಡದ ಭಾಗವನ್ನು ಈಗಲೂ ಕಾಣಬಹುದಾಗಿದೆ. ದೇಶೀ ಚಳವಳಿಗಾಗಿ ಮನೆ ಮನೆಗಳಲ್ಲಿ ಖಾದಿಯ ನೂಲನ್ನು ನೇಯಲು ಅಗತ್ಯ ವಾದ ಚರಕವನ್ನು ತಯಾರಿಸಲು ಮಗ್ಗದ ಕೈಗಾರಿಕ ಘಟಕ ಇದಾಗಿತ್ತು ಎಂಬ ಉಲ್ಲೇಖವಿದೆ.
ವಿಕಿಪೀಡಿಯ ಮಾಹಿತಿ ಪ್ರಕಾರ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಬಂಟ್ವಾಳ ನರಸಿಂಹ ಲಕ್ಷ್ಮಣ ಗಣಪತಿ ಬಾಳಿಗಾ ಅವರು ಈ ಘಟಕವನ್ನು ಸ್ಥಾಪಿಸಿದ್ದರು. ಕೆಲವು ವರ್ಷಗಳ ಕಾಲ ಈ ಮಗ್ಗ ಶಾಲೆಯು ಕಾರ್ಯಾಚರಣೆ ನಡೆಸಿ ಬಳಿಕ ನಷ್ಟವನ್ನು ಹೊಂದಿ ಮುಚ್ಚಲ್ಪಟ್ಟಿತ್ತು ಎಂಬುದು ತಿಳಿದು ಬರುತ್ತದೆ.
ಮಗ್ಗ ಶಾಲೆಯ ಕುರಿತು ಅಲ್ಲೇ ದುಡಿಯುತ್ತಿದ್ದ ಹಿರಿಯರಾದ ಸದಾಶಿವ ಆಚಾರ್ ಅಭಿಪ್ರಾಯವನ್ನು ಹೇಳುತ್ತಿದ್ದು, ಆದರೆ ಅವರಿಗೆ ನೆನಪುಶಕ್ತಿಯ ಕೊರತೆಯಿಂದ ಪೂರ್ತಿ ವಿಚಾರವನ್ನು ತಿಳಿಸುವುದಕ್ಕೆ ಸಾಧ್ಯವಾಗಿಲ್ಲ. ಅಂಬರ್ ಚರಕ ಅಭ್ಯಾಸವನ್ನೂ ಇಲ್ಲಿ ಮಾಡಿದ್ದು, ಜತೆಗೆ ಮಂಗಳೂರಿನ ಖಾದಿ ಭಂಡಾರದಲ್ಲೂ ಕೆಲಸ ಮಾಡಿದ್ದೇವೆ. ಸಾಕಷ್ಟು ಮಂದಿ ಇಲ್ಲಿ ಕೆಲಸ ಮಾಡುತ್ತಿದ್ದರು ಎಂದು ಆಚಾರ್ ವಿವರಿಸುತ್ತಾರೆ.
ಮಗ್ಗ ಶಾಲೆಗೆ ಗಾಂಧೀಜಿ ಭೇಟಿ ನೀಡಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಿಲ್ಲ. ಅವರು ಭೇಟಿ ನೀಡಿದ್ದಾರೆ ಎಂದು ಪೂರ್ವಜರು ಹೇಳುತ್ತಿದ್ದರು ಎಂದು ಒಂದಷ್ಟು ಮಂದಿ ಹೇಳುತ್ತಾರೆ. 1934ರ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ ಮಡಿಕೇರಿಯಿಂದ ಮಂಗ ಳೂರು ಭಾಗಕ್ಕೆ ಹೋಗುತ್ತಿರುವ ಸಂದರ್ಭ ಬಂಟ್ವಾಳಕ್ಕೂ ಭೇಟಿ ನೀಡಿದ್ದಾರೆ ಎಂದು ಇತಿಹಾಸ ಹೇಳುತ್ತಿದೆ.
ಬಂಟ್ವಾಳದಲ್ಲಿ ಖಾದಿವ್ರತಿಯೊಬ್ಬರು ಸ್ವತಃ ನೂಲು ತೆಗೆದು ನೇಯ್ದ ಖಾದಿ ಬಟ್ಟೆಯನ್ನು ಗಾಂಧೀಜಿ ಅವರಿಗೆ ಒಪ್ಪಿಸಿದ್ದರು ಎಂದು ಪುಸ್ತಕವೊಂದರಲ್ಲಿ ಉಲ್ಲೇಖೀತವಾಗಿದೆ. ಇದೇ ಸಂದರ್ಭದಲ್ಲಿ ಗಾಂಧೀಜಿ ಅವರಿಗೆ ದಾರಿಯುದ್ದಕ್ಕೂ ಬಂಟ್ವಾಳ(ಈಗಿನ ಬಂಟ್ವಾಳ ತಾಲೂಕು)ದ ಜನತೆ ನಿಧಿಯನ್ನು ಒಪ್ಪಿಸಿದ್ದರು ಎನ್ನಲಾಗಿದೆ.
-ಕಿರಣ್ ಸರಪಾಡಿ