Advertisement

ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ: ಸಿಎಂ

11:16 PM Nov 01, 2019 | Lakshmi GovindaRaju |

ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ರಾಷ್ಟ್ರಧ್ವಜದ ಜತೆಗೆ ಕನ್ನಡ ಬಾವುಟ ಧ್ವಜಾರೋಹಣ ಮಾಡಿ, ಅವರು ಮಾತನಾಡಿದರು.

Advertisement

ಮನೆಯೇ ಮೊದಲ ಪಾಠ ಶಾಲೆಯಾಗಿದ್ದು, ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮನೆಯಲ್ಲಿಯೇ ಕಡ್ಡಾಯವಾಗಿ ಕನ್ನಡ ಮಾತನಾಡಬೇಕು. ಹೆಚ್ಚು -ಹೆಚ್ಚು ಕನ್ನಡ ಪುಸ್ತಕ, ಪತ್ರಿಕೆಗಳನ್ನು ಓದುವಂತಾಗಬೇಕು. ಆಗ ಮಾತ್ರ ಭಾಷೆಯನ್ನು ಉಳಿಸಿ, ಬೆಳೆಸಲು ಸಾಧ್ಯ ಎಂದರು. ಹೊರ ರಾಜ್ಯಗಳಿಂದ ಮತ್ತು ಹೊರ ದೇಶಗಳಿಂದ ಬಂದು ಕರ್ನಾಟಕದಲ್ಲಿ ನೆಲೆಗೊಂಡಿರುವ ಜನರು ಇಲ್ಲಿನ ಭಾಷೆ, ಸಂಸ್ಕೃತಿ, ಜೀವನ ವಿಧಾನಗಳಿಗೆ ಹೊಂದಿಕೊಂಡು, ಕನ್ನಡತನವನ್ನು ಗೌರವಿಸುವುದಲ್ಲದೇ ತಮ್ಮತನವನ್ನು ಉಳಿಸಿಕೊಳ್ಳಬೇಕು.

ಕರ್ನಾಟಕದಲ್ಲಿ ನೆಲೆ ನಿಂತಿರುವ ಪರಭಾಷಿಕರು ಕೂಡ ಕನ್ನಡ ಕಲಿಯಬೇಕು. ಕಲಿಯಲು ಸಮ್ಮತಿಸುವವರಿಗೆ ಕನ್ನಡಿಗರು ಭಾಷೆ ಕಲಿಕೆಗೆ ಪ್ರೋತ್ಸಾಹಿಸಬೇಕು ಎಂದರು. ಕನ್ನಡ ಬಳಸಲು ಹಿಂಜರಿಯುವ ಹಾಗೂ ಸಂಕೋಚ ಪಡುವ ಅಗತ್ಯವಿಲ್ಲ. ಕನ್ನಡಕ್ಕೆ ಮೊದಲ ಆದ್ಯತೆ. ಜತೆಗೆ, ಇತರ ಭಾಷೆ ಕಲಿತುಕೊಳ್ಳುವುದರಲ್ಲಿ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದರು. ಆದಿಕವಿ ಪಂಪನಿಂದ ಹಿಡಿದು ಕುವೆಂಪುವರೆಗೆ, ಹರಿಹರರಿಂದ ಹಿಡಿದು ಬಸವಣ್ಣನವರೆಗೆ,

ಪ್ರಾಚೀನ, ಮಧ್ಯಯುಗ, ಆಧುನಿಕ ನವೋದಯ, ನವ್ಯ, ಬಂಡಾಯ, ದಲಿತ ಇತ್ಯಾದಿ ಸಾಹಿತ್ಯ ಪರಂಪರೆಗಳಲ್ಲಿ ಕನ್ನಡ ಉತ್ಕೃಷ್ಟವಾಗಿ ಹೊರಹೊಮ್ಮಿದೆ. ಎಲ್ಲ ಭಾಷಿಕರು ಮತ್ತು ಎಲ್ಲ ಧರ್ಮದ ಅನುಯಾಯಿಗಳು ಸೌಹಾರ್ದದಿಂದ ರಾಜ್ಯದಲ್ಲಿ ಬದುಕುತ್ತಿದ್ದು, ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂದು ಹೇಳಿದರು. ಕನ್ನಡಿಗರು ಇತರರಿಗೆ ಮಾದರಿಯಾಗಿದ್ದು, ಕನ್ನಡಿಗರು ನಿಂತ ನೆಲ ಮತ್ತು ಅಲ್ಲಿನ ಜನರ ಜತೆ ಹೊಂದಿಕೊಂಡು ಬಾಳುತ್ತಿದ್ದಾರೆ. ಇದು ಎಲ್ಲರಿಗೂ ಅನುಕರಣೀಯ ಎಂದರು.

ಮಾದರಿ ರಾಜ್ಯ ಸಂಕಲ್ಪ: ಕರ್ನಾಟಕವನ್ನು ದೇಶದಲ್ಲಿಯೇ ಮಾದರಿ ರಾಜ್ಯವನ್ನಾಗಿಸುವಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ನಾಡಿನ ಹಿರಿಯರ, ಬುದ್ಧಿಜೀವಿಗಳ, ತಜ್ಞರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಸರ್ಕಾರ ಮುನ್ನಡೆಯುತ್ತಿದೆ ಎಂದು ಹೇಳಿದರು.

Advertisement

ರಾಷ್ಟ್ರ, ನಾಡಧ್ವಜದ ಬಗ್ಗೆ ಸಚಿವರ ಸ್ಪಷ್ಟನೆ: ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಕೆಲವು ಕಡೆ ನಾಡ ಧ್ವಜದ ಬದಲಿಗೆ ರಾಷ್ಟ್ರಧ್ವಜ ಹಾರಿಸಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ ಎಂಬ ಗೊಂದಲ ಸೃಷ್ಟಿಯಾಗಿತ್ತು. ಆದರೆ, ಸಮಾರಂಭದಲ್ಲಿ ರಾಷ್ಟ್ರ ಮತ್ತು ನಾಡ ಧ್ವಜ ಎರಡನ್ನೂ ಹಾರಿಸಲಾಗಿದೆ. ರಾಷ್ಟ್ರಗೀತೆ ಮತ್ತು ನಾಡಗೀತೆಯನ್ನು ಹಾಡಲಾಗಿದೆ. ಈ ಪದ್ಧತಿ ಹಲವು ವರ್ಷಗಳಿಂದ ಬಂದಿದ್ದು, ನಾವೂ ಅದನ್ನೇ ಪಾಲಿಸಿದ್ದೇವೆ. ಮುಂದೆಯೂ ಪಾಲಿಸುತ್ತೇವೆ. ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿ¨ªಾರೆ. ಇದರಲ್ಲಿ ಯಾವುದೇ ರೀತಿಯ ಹುರುಳಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಸ್ಪಷ್ಟನೆ ನೀಡಿದರು.

ರಾಜ್ಯೋತ್ಸವ ಕೇವಲ ಆಚರಣೆಗೆ ಸೀಮಿತವಾಗದೇ ಜೀವನ ಶೈಲಿಯಾಗಬೇಕು. ಕನ್ನಡ ಭಾಷೆ ಹೆತ್ತ ತಾಯಿಯಷ್ಟೇ ಮುಖ್ಯವಾಗಿದ್ದು, ಜನರು ಇಂಗ್ಲೀಷ್‌ ವ್ಯಾಮೋಹದಿಂದ ಹೊರ ಬರಬೇಕು. ರಾಜ್ಯದ ಆಡಳಿತ ಮಾತ್ರವಲ್ಲದೇ ವಾಣಿಜ್ಯ ಮತ್ತು ವ್ಯವಹಾರದಲ್ಲಿ ಕೂಡ ಕನ್ನಡವನ್ನು ಹೆಚ್ಚಾಗಿ ಬಳಸಬೇಕು.
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ಸರ್ಕಾರಿ ಶಾಲಾ ಮಕ್ಕಳಿಗೆ ಎರಡು ಜತೆ ಸಮವಸ್ತ್ರ ವಿತರಣೆ, ಅನುದಾನ ಮತ್ತು ಅನುದಾನರಹಿತ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸುವುದು, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುವ ನಿಟ್ಟಿನಲ್ಲಿ ಸಚಿವ ಸಂಪುಟದಲ್ಲಿ ಮಹತ್ತರ ತೀರ್ಮಾನ ಕೈಗೊಳ್ಳಲಾಗಿದೆ.
-ಎಸ್‌.ಸುರೇಶ್‌ ಕುಮಾರ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next