Advertisement

ಕನ್ನಡದಲ್ಲಿ ತಾಂತ್ರಿಕ ಕೋರ್ಸ್‌ಗೆ ನಿರಾಸಕ್ತಿ; ಅವಲೋಕನ ಅಗತ್ಯ

01:25 AM Dec 28, 2021 | Team Udayavani |

ಭಾರೀ ಮಹತ್ವಾಕಾಂಕ್ಷೆಯೊಂದಿಗೆ ಮಾತೃಭಾಷೆಯಲ್ಲೇ ತಾಂತ್ರಿಕ ಶಿಕ್ಷಣ ನೀಡಬೇಕು ಎಂಬ ಮಹದಾಸೆಯಿಂದ ಆರಂಭಿಸಲಾಗಿದ್ದ ಕನ್ನಡದಲ್ಲಿ ಎಂಜಿನಿಯರಿಂಗ್‌ ಕೋರ್ಸ್‌ಗೆ ರಾಜ್ಯದಲ್ಲಿ ಸ್ಪಂದನೆ ಸಿಕ್ಕಿಲ್ಲ. ಮೆಕ್ಯಾನಿಕಲ್‌ ಮತ್ತು ಸಿವಿಲ್‌ ಕೋರ್ಸ್‌ಗಳಲ್ಲಿ ಒಟ್ಟು 90 ಸೀಟುಗಳನ್ನು ಮೀಸಲಾಗಿರಿಸಿದ್ದು, ಒಬ್ಬ ವಿದ್ಯಾರ್ಥಿ ಕೂಡ ಕನ್ನಡದಲ್ಲಿ ಎಂಜಿನಿಯರಿಂಗ್‌ ಮಾಡಲು ಮುಂದಾಗಿಲ್ಲ. ವೃತ್ತಿ ಶಿಕ್ಷಣ ಕೌನ್ಸೆಲಿಂಗ್‌ ಪ್ರಕ್ರಿಯೆ ನಡೆಯುತ್ತಿದ್ದು, ಇಂಥ ಅವಧಿಯಲ್ಲೇ ಈ ನಿರಾಸೆಯ ಸುದ್ದಿ ಹೊರಬಿದ್ದಿದೆ.

Advertisement

ಕನ್ನಡದಲ್ಲಿಯೇ ಎಂಜಿನಿಯರಿಂಗ್‌ ಕಲಿಯಲು ಅವಕಾಶ ಮಾಡಿಕೊಡುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಅದರಲ್ಲೂ ಕನ್ನಡ ಮಾಧ್ಯಮದಲ್ಲೇ ಓದಿಕೊಂಡು ಬಂದವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ರಾಜ್ಯ ಸರಕಾರ ಈ ನಿರ್ಧಾರ ತೆಗೆದುಕೊಂಡಿತ್ತು. ಆದರೆ ವಿದ್ಯಾರ್ಥಿಗಳು ಇದರ ಮೇಲೆ ನಿರಾಸಕ್ತಿ ತೋರಿರುವುದು ಒಂದು ರೀತಿಯಲ್ಲಿ ಅಚ್ಚರಿಯೇ ಆಗಿದೆ.

ವಿದ್ಯಾರ್ಥಿಗಳ ಈ ನಿರುತ್ಸಾಹ ಎಲ್ಲೋ ಒಂದು ಕಡೆಗೆ ರಾಜ್ಯ ಸರಕಾರದ ಮಾತೃಭಾಷೆಯಲ್ಲೇ ತಾಂತ್ರಿಕ ಶಿಕ್ಷಣ ನೀಡುವ ಉದ್ದೇಶಕ್ಕೆ ಪೆಟ್ಟು ಬಿದ್ದಿರಬಹುದು. ಆದರೆ ಇಲ್ಲಿ ಮಾಡಬೇಕಾದ ಕೆಲಸಗಳು ಬೇರೆಯವೇ ಇವೆ ಎಂಬುದನ್ನು ರಾಜ್ಯ ಸರಕಾರ ಮರೆಯಬಾರದು.

ಅಂದರೆ ಕನ್ನಡದಲ್ಲಿ ಎಂಜಿನಿಯರಿಂಗ್‌ ಕಲಿಯಲು ವಿದ್ಯಾರ್ಥಿಗಳು ಬರುತ್ತಾರೆ ಎಂದೇ ಅಂದುಕೊಳ್ಳೋಣ. ಆದರೆ ಎಂಜಿನಿಯರಿಂಗ್‌ ಕಲಿತ ಮೇಲೆ ಇವರೇನು ಮಾಡಬೇಕು? ಇಂಥ ವಿದ್ಯಾರ್ಥಿಗಳಿಗೆ ಕೆಲಸ ಎಲ್ಲಿ ಸಿಗುತ್ತದೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ವಿದ್ಯಾರ್ಥಿಗಳ ನಿರುತ್ಸಾಹಕ್ಕೆ ಇದೂ ಒಂದು ಕಾರಣವಿದ್ದಿರಲೂಬಹುದು.

ವಿದ್ಯಾರ್ಥಿಗಳ ಈ ನಿರಾಸಕ್ತಿಗೆ ಕಾರಣಗಳನ್ನು ಪಟ್ಟಿ ಮಾಡಬಹುದು. ಅಂದರೆ ಕನ್ನಡದಲ್ಲೇ ಎಂಜಿನಿಯರಿಂಗ್‌ ಮಾಡಿದ ಮೇಲೆ ಹೊರ ರಾಜ್ಯದಲ್ಲಿ ಅಥವಾ ಹೊರದೇಶಗಳಿಗೆ ಕೆಲಸ ಹುಡುಕಿಕೊಂಡು ಹೋಗಲು ಸಾಧ್ಯವಾಗದೇ ಇರಬಹುದು. ಅಲ್ಲದೇ ಇಲ್ಲೂ ಕನ್ನಡದಲ್ಲೇ ವ್ಯಾಸಂಗ ಮಾಡಿದ್ದಾರೆ ಎಂಬ ಕಾರಣದಿಂದಾಗಿ ಉದ್ಯೋಗಕ್ಕೆ ತೆಗೆದುಕೊಳ್ಳದಿದ್ದರೆ ಏನು ಮಾಡುವುದು ಎಂಬ ವಿದ್ಯಾರ್ಥಿಗಳ ಆಲೋಚನೆಯೂ ಒಂದು ಕಾರಣವಿರಬಹುದು.

Advertisement

ಹೆತ್ತವರು ಮತ್ತು ವಿದ್ಯಾರ್ಥಿಗಳು ಎಂಜಿನಿಯರಿಂಗ್‌ ಸೇರುವುದೇ ಮುಂದೆ ಉತ್ತಮ ವೃತ್ತಿ ಸಿಗಲಿ ಎಂಬ ಆಸೆಯಿಂದ. ಒಂದು ವೇಳೆ ಕನ್ನಡದಲ್ಲಿ ಕಲಿತು, ಉದ್ಯೋಗ ಸಿಗದೇ ಹೋದರೆ ಮುಂದಿನ ದಾರಿ ಯಾವುದು ಎಂಬ ಪ್ರಶ್ನೆ ಕಾಡುತ್ತದೆ. ಇಂಥ ಹೊತ್ತಲ್ಲಿ ಸರಕಾರದ ಜವಾಬ್ದಾರಿಗಳೂ ಹೆಚ್ಚೇ ಇವೆ.

ಅಂದರೆ ಈ ವರ್ಷ ರಾಜ್ಯ ಸರಕಾರ ಸಿವಿಲ್‌ ಮತ್ತು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಬ್ರಾಂಚ್‌ನ 90 ಸೀಟುಗಳನ್ನು ಮಾತ್ರ ಕನ್ನಡ ಮಾಧ್ಯಮಕ್ಕೆ ಮೀಸಲಾಗಿ ಇಟ್ಟಿದೆ. ಈ ವರ್ಷವೇನೋ ವಿದ್ಯಾರ್ಥಿಗಳು ಬಂದಿಲ್ಲ. ಹಾಗಂತ ಕನ್ನಡ ಮಾಧ್ಯಮದ ಎಂಜಿನಿಯರಿಂಗ್‌ನ ಮೇಲಿನ ಆಸಕ್ತಿಯನ್ನು ಸರಕಾರ ಕೈಬಿಡಬಾರದು. ಇದಕ್ಕಿಂತ ಬೇರೆಯಾಗಿ ಕನ್ನಡದಲ್ಲಿ ಕಲಿತವರಿಗೆ ಸರಕಾರಿ ಮತ್ತು ಸಾಧ್ಯವಾದರೆ ಖಾಸಗಿರಂಗದಲ್ಲೂ ಉದ್ಯೋಗದಲ್ಲಿ ಮೀಸಲು ಇಡುವ ವ್ಯವಸ್ಥೆ ಮಾಡಬೇಕು. ಆಗಷ್ಟೇ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದು ಕನ್ನಡದಲ್ಲಿಯೇ ಎಂಜಿನಿಯರಿಂಗ್‌ ಕಲಿಯುತ್ತಾರೆ. ಈ ನಿಟ್ಟಿನಲ್ಲಿ ಅವಲೋಕನ ಮಾಡಿಕೊಳ್ಳುವುದು ಅಗತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next