ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ “ಭೂಮಿಗೆ ಬಂದ ಭಗವಂತ’ ಧಾರಾವಾಹಿ ಸದ್ಯ ಯಶಸ್ವಿಯಾಗಿ ನೂರು ಸಂಚಿಕೆಗಳನ್ನು ಪೂರೈಸಿದೆ. “ಭೂಮಿಗೆ ಬಂದ ಭಗವಂತ’ ಧಾರಾವಾಹಿಗೆ ಫ್ಯಾಮಿಲಿ ಆಡಿಯನ್ಸ್ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮಧ್ಯಮ ವರ್ಗದ ಜನರ ಬದುಕಿನ ಸುಖ- ದುಃಖಗಳು, ಭಗವಂತನ ಲೀಲೆಗಳು ಎಲ್ಲವೂ ಒಟ್ಟಾಗಿ ಕಿರುತೆರೆ ವೀಕ್ಷಕರ ಮನಮುಟ್ಟುತ್ತಿದೆ. ಇನ್ನು “ಭೂಮಿಗೆ ಬಂದ ಭಗವಂತ’ ಧಾರಾವಾಹಿಯಲ್ಲಿ ಮಧ್ಯಮ ವರ್ಗದ ಕುಟುಂಬದ “ಗಿರಿಜಾ’ ಎಂಬ ಪಾತ್ರದಲ್ಲಿ ನಟಿ ಕೃತ್ತಿಕಾ ರವೀಂದ್ರ ಕಾಣಿಸಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ಬರುವ ಈ ಪ್ರಮುಖ ಪಾತ್ರದ ಬಗ್ಗೆ ನಟಿ ಕೃತ್ತಿಕಾ ರವೀಂದ್ರ ಒಂದಷ್ಟು ಮಾತನಾಡಿದ್ದಾರೆ.
ಚಿಕ್ಕ ವಯಸ್ಸು ದೊಡ್ಡ ಪಾತ್ರ: “ಧಾರಾವಾಹಿಯನ್ನು ನೋಡಿದ ಒಂದಷ್ಟು ಜನ ತುಂಬ ಚಿಕ್ಕ ವಯಸ್ಸಿನಲ್ಲಿ ತುಂಬ ದೊಡ್ಡ ಪಾತ್ರ ನಿಭಾಯಿಸುತ್ತಿದ್ದೀರಿ ಎಂದು ಹೇಳುತ್ತಿದ್ದಾರೆ. ಆದರೆ ನನ್ನ ಮಟ್ಟಿಗೆ ಹೇಳುವುದಾದರೆ, ಯಾವುದೇ ಪಾತ್ರ ದೊಡ್ಡದು ಅಥವಾ ಚಿಕ್ಕದು ಅಂಥ ಇರುವುದಿಲ್ಲ. ನಾನೊಬ್ಬಳು ಕಲಾವಿದೆಯಾಗಿ ಒಂದು ಪಾತ್ರವನ್ನು ದೊಡ್ಡದು ಅಥವಾ ಚಿಕ್ಕದು ಎಂದು ಎಣಿಸಲೂಬಾರದು. ನಾನು ಕೇವಲ ಒಬ್ಬಳು ಕಲಾವಿದೆ ಅಷ್ಟೇ. ನನಗೆ ಯಾವ ಪಾತ್ರ ಸಿಗುತ್ತದೆಯೋ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸುವುದಷ್ಟೇ ನಾನು ಮಾಡಬೇಕಾಗಿರುವ ಕೆಲಸ’ ಎನ್ನುವುದು ಕೃತ್ತಿಕಾ ಮಾತು.
ಎಲ್ಲಾ ಭಾವನೆಗಳ ಸಮ್ಮಿಲನ: “ಸುಮಾರು ಆರು ತಿಂಗಳ ಹಿಂದೆ ಈ ಪಾತ್ರ ಮಾಡ್ತೀನಿ ಅಂಥ ಗೊತ್ತಿರಲಿಲ್ಲ. ಒಂದಷ್ಟು ಸುತ್ತು ಮಾತುಕಥೆ ಆದ ನಂತರ ಈ ಪಾತ್ರವನ್ನು ಮಾಡುವ ಅವಕಾಶ ನನಗೆ ಸಿಕ್ಕಿತು. ಇಷ್ಟೊಂದು ಇಂಪಾರ್ಟೆನ್ಸ್ ಇರುವ ಪಾತ್ರವನ್ನು ನಾನು ಮಾಡಬಹುದಾ ಅಂಥ ನನಗೆ ನಂಬಿಕೆ ಕೂಡ ಅರಲಿಲ್ಲ. ನನ್ನ ಮಟ್ಟಿಗೆ ಹೇಳುವುದಾದರೆ, ಇದೊಂದು ತುಂಬ ಚಾಲೆಂಜಿಂಗ್ ಆಗಿರುವಂಥ ಪಾತ್ರ. ನೋವು-ನಲಿವು, ಸುಖ-ದುಃಖ, ಮಾತು-ಮೌನ ಎಲ್ಲವೂ ಇರುವಂಥ “ಗಿರಿಜಾ’ ಎಂಬ ಗಟ್ಟಿಗಿತ್ತಿ ಹೆಣ್ಣಿನ ಪಾತ್ರ ನಿಭಾಯಿಸುವುದೇ ದೊಡ್ಡ ಸವಾಲಾಗಿತ್ತು. ಆದರೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ನನ್ನ ಪಾತ್ರಕ್ಕೆ ಅತ್ಯುತ್ತಮವಾಗಿರುವುದು ಏನು ಕೊಡಬಹುದೋ, ಅದನ್ನು ನಾನು ಕೊಡಬೇಕು ಎಂಬ ನಿರ್ಧಾರ ಮಾಡಿ “ಗಿರಿಜಾ’ ಪಾತ್ರಕ್ಕೆ ಒಪ್ಪಿಕೊಂಡೆ’ ಎನ್ನುತ್ತಾರೆ ಕೃತ್ತಿಕಾ.
ಸಂತೋಷ-ಸಮಾಧಾನ ಕೊಟ್ಟ ಧಾರಾವಾಹಿ: “ಈಗ ನಮ್ಮ ಧಾರಾವಾಹಿ ಯಶಸ್ವಿಯಾಗಿ 100 ಎಪಿಸೋಡ್ಸ್ ಮುಗಿಸಿದೆ. ಫ್ಯಾಮಿಲಿಯಿಂದ ಶುರುವಾಗಿ ಫ್ಯಾಮಿಲಿಯಲ್ಲೇ ಎಲ್ಲವೂ ಮುಗಿಯುತ್ತಿರುವುದರಿಂದ, ಇಡೀ ಧಾರಾವಾಹಿಯನ್ನು ಫ್ಯಾಮಿಲಿ ಸಮೇತ ಕೂತು ನೋಡುತ್ತಾರೆ. ಅದರಲ್ಲೂ ನಾನು ನಿರ್ವಹಿಸುತ್ತಿರುವ ಗಿರಿಜಾ ಪಾತ್ರದ ಬಗ್ಗೆ ತುಂಬ ಮೆಚ್ಚುಗೆಯ ಮಾತುಗಳನ್ನಾಡು ತ್ತಿದ್ದಾರೆ. ವಾಹಿನಿಯ ಸಹಕಾರ, ಪ್ರೊಡಕ್ಷನ್ ಹೌಸ್ ಬೆಂಬಲ, ಪ್ರೇಕ್ಷಕರ ಅಭಿಮಾನ ಬೆಂಬಲತಂಡದ ಸಹಕಾರ ತುಂಬ ಚೆನ್ನಾಗಿದೆ. ಒಟ್ಟಾರೆ ಹೇಳುವುದಾದರೆ, “ಭೂಮಿಗೆ ಬಂದ ಭಗವಂತ’ ನನಗೆ ಸಂತೋಷ, ಸಮಾಧಾನ ಎಲ್ಲವನ್ನೂ ಕೊಡುತ್ತಿದ್ದಾನೆ’ ಎನ್ನುವುದು ಕೃತ್ತಿಕಾ ರವೀಂದ್ರ ಮಾತು