Advertisement

ನಾಡು-ನುಡಿಯ ಅಭಿವೃದ್ಧಿಗೆ ಕನ್ನಡ ಸಂಘಗಳ ಪಾತ್ರ ಅನಿವಾರ್ಯ: ಮಾಹುಲಿ

04:44 PM Apr 28, 2019 | Vishnu Das |

ಮುಂಬಯಿ: ಮಾತೃ ಭಾಷೆಯನ್ನು ಮನೆ-ಮನೆಗಳಲ್ಲಿ ಹುಟ್ಟುಹಾಕಬೇಕು. ಮಾತೃ ಭಾಷೆಯೇ ಜೀವನದ ಆಧಾರ ಸ್ತಂಭ. ಕನ್ನಡ ಸಂಘ ಎಂದರೆ ಕನ್ನಡ ಭಾಷೆಯ, ಚರಿತ್ರೆಯ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವುದು. ಅಳಿದು ಹೋದ ಸಂಸ್ಕೃತಿಯನ್ನು ಯುವ ಪೀಳಿಗೆಗಳಲ್ಲಿ ಪುನರುಜ್ಜೀವನಗೊಳಿಸುವುದು. ಭಾಷಾಭಿಮಾನ, ಭಾಷಾ ಬೆಳವಣಿಗೆ ಹಾಗೂ ಜನೋದ್ಧಾರವನ್ನು ಮಾಡುವ
ಮಹತ್ತರವಾದ ಉದ್ದೇಶ ಸಂಘಗಳಿಂದಾಗಬೇಕು. ಕನ್ನಡ ಭಾಷೆಯ ಹಿರಿಮೆ-ಗರಿಮೆ, ಸಂಸ್ಕೃತಿಯ ಪ್ರಸಾರದ ಜತೆಗೆ ಕನ್ನಡಿಗರಲ್ಲಿ ಧೈರ್ಯ,

Advertisement

ಸ್ಥೈರ್ಯ, ಆತ್ಮ ವಿಶ್ವಾಸವನ್ನು ಪ್ರತಿಬಿಂಬಿಸುವ ಕಾರ್ಯಾರಂಭ
ವಾಗಬೇಕು ಎಂದು ಮುಲುಂಡ್‌ನ‌ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ
ಗಳಾದ ವಿದ್ಯಾಸಿಂಹಾಚಾರ್ಯ ಮಾಹುಲಿ ಅವರು ನುಡಿದರು.

ಇತ್ತೀಚೆಗೆ ಮುಲುಂಡ್‌ ವಿಪಿಎಂ ಶಾಲಾ ಸಭಾಗೃಹದಲ್ಲಿ ನಡೆದ ಮುಲುಂಡ್‌ ಕನ್ನಡ ಸಂಘ ಉದ್ಘಾಟನೆಯ ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು, ಕನ್ನಡ ಸಾಹಿತ್ಯದ ಕುರಿತು ಕಮ್ಮಟಗಳನ್ನು ಏರ್ಪಡಿಸಿ ಪ್ರೋತ್ಸಾಹಿಸುವ ಮಹಾನ್‌ ಕಾರ್ಯ ಸಂಘಗಳಿಂದಾಗಬೇಕು. ಕನ್ನಡ ಸಂಘ ಎಂದರೆ ಕನ್ನಡ ಭಾಷಾಭಿಮಾನವನ್ನು ಮನೆ- ಮನೆಗಳಲ್ಲಿ, ಮನ-ಮನಗಳಲ್ಲಿ ಹೊಂಬೆಳಕಾಗಿ ಹರಡಿಸುವುದಾಗಿದೆ. ಸಂಘದಲ್ಲಿ ಶಾಶ್ವತ ಸದಸ್ಯತ್ವವನ್ನು ಪಡೆದುಕೊಂಡು ಮುಲುಂಡ್‌ ಮತ್ತು ಇತರ ವಲಯಗಳ ಕನ್ನಡಿಗರು ಮುಲುಂಡ್‌ ಕನ್ನಡ ಸಂಘ’ದ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ಕನ್ನಡ ಸಂಘದ ಸ್ಥಾಪನೆಗೆ ಸಾರ್ಥಕವಾಗುತ್ತದೆ. ಕನ್ನಡಿಗರ ಒಗ್ಗಟ್ಟನ್ನು ಪ್ರದರ್ಶಿಸುವ ಮಹತ್ವದ ವೇದಿಕೆ ಇದಾಗಿದೆ. ಈ ಸಂಘದ ಮೂಲಕ ಕನ್ನಡ ಭಾಷೆಯ ಬಗ್ಗೆ ಜನಜಾಗೃತಿ ಮಾಡಿ, ಕನ್ನಡ ಭಾಷೆ, ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡರೆ ತಾಯಿ ಭುವನೇಶ್ವರಿಯ ಕೀರ್ತಿಯ ಹೊರನಾಡಿನಲ್ಲಿ ಮತ್ತಷ್ಟು ಪ್ರಕಾಶಿಸಿದಂತಾಗುತ್ತದೆ ಎಂದು ನುಡಿದು ಶುಭ ಹಾರೈಸಿದರು.

ವಿಪಿಎಂ ಶ್ರೀಮತಿ ಸುಂದರಿಬಾಯಿ ಮಂಜುನಾಥ್‌ ಕಾಮತ್‌ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅರುಣಾ ಭಟ್‌ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಮುಖ್ಯ ಅತಿಥಿಗಳನ್ನು ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸುವಿನಾ ಶೆಟ್ಟಿ ಸ್ವಾಗತಿಸಿದರು. ಮುಲುಂಡ್‌ನ‌ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿಗಳಾದ ವಿದ್ಯಾಸಿಂಹಾಚಾರ್ಯ ಮಾಹುಲಿ ಯವರನ್ನು ಶಿಕ್ಷಕಿ ಅಶ್ವಿ‌ನಿ ಬಂಗೇರ ಪರಿಚಯಿಸಿದರು.

ವಿದ್ಯಾ ಪ್ರಸಾರಕ ಮಂಡಳದ ಅಧ್ಯಕ್ಷರಾದ ಡಾ| ಪಿ. ಎಂ. ಕಾಮತ್‌ ಅವರು ಶಾಲು ಹೊದೆಸಿ, ಫಲಪುಷ್ಪವನ್ನಿತ್ತು ಗೌರವಿಸಿದರು. ಶಿಕ್ಷಕಿ ಸುನಿತಾ ಮಠ ಅವರು ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಚಂದ್ರಶೇಖರ ಬನ್ನಿಮಠ ಅವರು ಮಾತನಾಡಿ ಶುಭ ಹಾರೈಸಿದರು. ವಿದ್ಯಾ ಪ್ರಸಾರಕ ಮಂಡಳದ ಪ್ರಧಾನ ಗೌರವ ಕಾರ್ಯದರ್ಶಿ ಪ್ರಮೋದ್‌ ಮುಳುಗುಂದ ವಂದಿಸಿದರು. ಪಾಲ್ಗೊಂಡ ಎಲ್ಲ ಕನ್ನಡಾಭಿಮಾನಿಗಳಿಗೆ ಲಘು ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next